Advertisement

Sumit Antil; ಸುಮಿತ್‌ ಮುಟ್ಟಿದ್ದೆಲ್ಲ ಚಿನ್ನ: ವಿಶ್ವ ಮಟ್ಟದ ಐದೂ ಕೂಟಗಳಲ್ಲಿ ಚಿನ್ನದ ಪದಕ

11:02 PM Sep 03, 2024 | Team Udayavani |

ಪ್ಯಾರಿಸ್‌: ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ “ತಾನು ಚಿನ್ನವನ್ನಲ್ಲದೇ ಬೇರೆನನ್ನೂ ಜಯಿಸಲಾರೆ’ ಎಂದು ಪಣತೊಟ್ಟಂತಿದೆ. ಅವರು ಮುಟ್ಟಿದ್ದೆಲ್ಲ ಸ್ವರ್ಣವಾಗುತ್ತಿದೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಇದನ್ನು ಸಾಬೀತುಪಡಿಸಿದೆ. ಸೋಮವಾರ ತಡರಾತ್ರಿಯ ಎಫ್-64 ವಿಭಾಗದಲ್ಲಿ ಅವರು ಚಿನ್ನದ ಪದಕವನ್ನೇ ಗೆದ್ದರು. ಈ ಮೂಲಕ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಸತತ 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಬಂಗಾರದೊಂದಿಗೆ ಹೊಳೆದಿದ್ದರು.

Advertisement

ಜಾಗತಿಕ ಮಟ್ಟದಲ್ಲಿ ಸುಮಿತ್‌ ಅಂತಿಲ್‌ ಗೆದ್ದ 5ನೇ ಚಿನ್ನ ಇದಾಗಿದೆ. ಇದಕ್ಕೂ ಮುನ್ನ ಏಷ್ಯನ್‌ ಗೇಮ್ಸ್‌, ಕೋಬೆ ವಿಶ್ವ ಚಾಂಪಿಯನ್‌ಶಿಪ್‌, ಪ್ಯಾರಿಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಹೀಗೆ ವಿಶ್ವ ಮಟ್ಟದ ಸ್ಪರ್ಧೆಗಳಲ್ಲೆಲ್ಲ ಸುಮಿತ್‌ಗೆ ಸ್ವರ್ಣವೇ ಸಂಗಾತಿ ಆಗುತ್ತಿರುವುದೊಂದು ವಿಶೇಷ.

ಪ್ಯಾರಾಲಿಂಪಿಕ್ಸ್‌ ದಾಖಲೆ

ಪ್ಯಾರಿಸ್‌ ಫೈನಲ್‌ನಲ್ಲಿ ಸುಮಿತ್‌ 70.59 ಮೀ. ದೂರ ಎಸೆಯುವ ಮೂಲಕ ನೂತನ ಪ್ಯಾರಾಲಿಂಪಿಕ್ಸ್‌ ದಾಖಲೆ ನಿರ್ಮಿಸಿದರು. ತಮ್ಮದೇ ದಾಖಲೆಯನ್ನು 2 ಸಲ ಮುರಿದದ್ದು ವಿಶೇಷ. 2ನೇ ಪ್ರಯತ್ನದಲ್ಲೇ ಈ ಸಾಧನೆಗೈದು ಚಿನ್ನವನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬೇರೆ ಯಾರು ಕೂಡ 70 ಮೀ. ಗಡಿ ದಾಟಲಿಲ್ಲ.

67.03 ಮೀ. ದೂರ ಎಸೆದ ಶ್ರೀಲಂಕಾದ ದುಲನ್‌ ಕೊಡಿತುವಾಕ್ಕು ಬೆಳ್ಳಿ ಗೆದ್ದರೆ, 64.89 ಮೀ. ದೂರಕ್ಕೆ ಎಸೆದ ಆಸ್ಟ್ರೇಲಿಯದ ಮೈಕಲ್‌ ಬುರಿಯನ್‌ ಕಂಚು ಗೆದ್ದರು. ಭಾರತದ ಮತ್ತೂಬ್ಬ ಸ್ಪರ್ಧಿ ಸಂದೀಪ್‌ ಚೌಧರಿ 62.80 ಮೀ. ದೂರ ಎಸೆಯುವ ಮೂಲಕ 4ನೇ ಸ್ಥಾನ ಪಡೆದುಕೊಂಡರು.

Advertisement

ಸುಮಿತ್‌ ಅಂತಿಲ್‌ ಮೊದಲ ಪ್ರಯತ್ನದಲ್ಲೇ 69.11 ಮೀ. ದೂರಕ್ಕೆ ಜಾವೆಲಿನ್‌ ಎಸೆದು ನೂತನ ಪ್ಯಾರಾಲಿಂಪಿಕ್ಸ್‌ ದಾಖಲೆ ಸ್ಥಾಪಿಸಿದರು. ಟೋಕಿಯೊದಲ್ಲಿ ನಿರ್ಮಿಸಿದ್ದ ತಮ್ಮ 68.55 ಮೀ. ದಾಖಲೆಯನ್ನು ಮುರಿದರು. 2ನೇ ಸುತ್ತಿನಲ್ಲಿ ಇದು 70.59 ಮೀ.ಗೆ ಏರಿತು. ದಾಖಲೆ ಇನ್ನಷ್ಟು ಉತ್ತಮಗೊಂಡಿತು. 3ನೇ ಸುತ್ತಿನಲ್ಲಿ 66.66 ಮೀ. ದಾಖಲಾಯಿತು. ನಾಲ್ಕನೆಯದು ಫೌಲ್‌. ಬಳಿಕ 69.04 ಹಾಗೂ 66.57 ಮೀ. ದಾಖಲಿಸಿದರು.

ವಿಶ್ವದಾಖಲೆಯ ವೀರ

ಪ್ಯಾರಾ ಜಾವೆಲಿನ್‌ ವಿಶ್ವದಾಖಲೆ ಕೂಡ ಸುಮಿತ್‌ ಅಂತಿಲ್‌ ಹೆಸರಿನಲ್ಲಿದೆ. 2022ರಲ್ಲಿ ಹ್ಯಾಂಗ್‌ಝೂನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ನಲ್ಲಿ 73.29 ಮೀ. ದೂರ ಎಸೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಹೀಗಾಗಿ ಪ್ಯಾರಿಸ್‌ನಲ್ಲಿ ಇವರು ಚಿನ್ನದ ಭರವಸೆ ಮೂಡಿಸಿದ್ದರು. ಇದನ್ನು ಸಾಕಾರ ಗೊಳಿಸುವಲ್ಲಿ ಯಶಸ್ವಿಯಾದರು.

ನಿತ್ಯಶ್ರೀಗೆ ಕಂಚಿನ ಪದಕ

ಸೋಮವಾರ ರಾತ್ರಿಯ ಪ್ಯಾರಾ ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ಎಸ್‌ಎಚ್‌6 ವಿಭಾಗದ ಪಂದ್ಯದಲ್ಲಿ ಭಾರತದ ನಿತ್ಯಶ್ರೀ ಶಿವನ್‌ ಕಂಚಿನ ಪದಕದೊಂದಿಗೆ ಖುಷಿಯನ್ನಾಚರಿಸಿದರು.

ಒಂದೇ ದಿನ ಗರಿಷ್ಠ 8 ಪದಕ

ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ಒಂದೇ ದಿನ ಭಾರತದ ಆ್ಯತ್ಲೀಟ್‌ಗಳು 8 ಪದಕ ಬೇಟೆಯಾಡಿದ್ದು, ಇದು ಭಾರತದ ಪರ ದೈನಂದಿನ ಗರಿಷ್ಠ ಸಾಧನೆ ಎನಿಸಿದೆ. ಕಳೆದ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಒಂದೇ ದಿನ 5 ಪದಕ ಜಯಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಸೋಮವಾರ ಭಾರತದ ಕ್ರೀಡಾಳುಗಳು 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದರು. ಇದರಲ್ಲಿ 5 ಪದಕಗಳು ಬ್ಯಾಡ್ಮಿಂಟನ್‌ನಲ್ಲಿ ಸಿಕ್ಕರೆ, ಆರ್ಚರಿ, ಡಿಸ್ಕಸ್‌ ತ್ರೊ ಮತ್ತು ಜಾವೆಲಿನ್‌ ಎಸೆತದಲ್ಲಿ ತಲಾ ಒಂದು ಪದಕ ಒಲಿಯಿತು.

ಭಾಗ್ಯಶ್ರೀ, ಅವನಿ ವಿಫ‌ಲ

ಮಂಗಳವಾರದ ಪ್ಯಾರಾಲಿಂಪಿಕ್ಸ್‌ ಮಹಿಳೆಯರ ಸ್ಪರ್ಧೆಗಳಲ್ಲಿ ಭಾರತ ಪದಕ ಗೆಲ್ಲಲು ವಿಫ‌ಲವಾಯಿತು. ಶಾಟ್‌ಪುಟ್‌ ಎಫ್34 ವಿಭಾಗದಲ್ಲಿ ಭಾಗ್ಯಶ್ರೀ ಜಾಧವ್‌ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 50 ಮೀ. ರೈಫ‌ಲ್‌ ತ್ರಿ ಪೊಸಿಶನ್‌ ಎಸ್‌ಎಚ್‌1 ವಿಭಾಗದಲ್ಲಿ ಮೋನಾ ಅಗರ್ವಾಲ್‌ 13ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫ‌ಲರಾದರು. ಅವನಿ ಲೇಖರಾ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು (420.6 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next