Advertisement

ಒಳ್ಳೆಯ ಚಿತ್ರವಷ್ಟೇ ನನ್ನ ಉದ್ದೇಶ

10:08 AM Mar 21, 2020 | mahesh |

ನಟ ಸುಮಂತ್‌ ಶೈಲೇಂದ್ರ ಬಾಬು ಇದೀಗ “ಗೋವಿಂದ’ನ ಜಪದಲ್ಲಿದ್ದಾರೆ. ಹೌದು, “ಆಟ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಅವರು, ಅದಾದ ಬಳಿಕ “ದಿಲ್‌ವಾಲ’, “ತಿರುಪತಿ ಎಕ್ಸ್‌ಪ್ರೆಸ್‌’,”ಬೆತ್ತನಗೆರೆ’ ಹೀಗೆ ಒಂದಷ್ಟು ಹೊಸ ಜಾನರ್‌ ಸಿನಿಮಾಗಳಲ್ಲಿ ಕಾಣಿಸಿ­ಕೊಂಡರು. ತಕ್ಕಮಟ್ಟಿಗೆ ಗುರುತಿಸಿ­ಕೊಂಡರಾ­ದರೂ, ಇಲ್ಲಿ ಹೇಳಿ­ಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಬಳಿಕ ತೆಲುಗು ಇಂಡಸ್ಟ್ರಿ ಕಡೆಗೂ ಮುಖ ಮಾಡಿದ್ದಾಯ್ತು. ಅಲ್ಲಿ “ಬ್ರಾಂಡ್‌ ಬಾಬು’ ಎಂಬ ಚಿತ್ರ ಮಾಡಿ ಸೈ ಎನಿಸಿ­ಕೊಂಡರು. ಆ ನಂತರ ಒಂದು ನೇಮು, ಫೇಮು ಬಂದಿದ್ದೇನೋ ನಿಜ. ಅತ್ತ ತೆಲುಗು ಇಂಡಸ್ಟ್ರಿಯಲ್ಲೂ ಜನ ಸುಮಂತ್‌ ಅವರನ್ನು ಗುರುತಿಸಿದರು. ಅದೇ ಉತ್ಸಾಹದಲ್ಲಿ ಅವರು “ಮಿಸ್‌ ಇಂಡಿಯಾ’ ಎಂಬ ಮತ್ತೂಂದು ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅದರೊಂದಿಗೆ ಇನ್ನೊಂದು ತೆಲುಗು ಚಿತ್ರಕ್ಕೂ ಸಹಿ ಹಾಕಿದ್ದಾರೆ. ಇವೆಲ್ಲದರ ಜೊತೆಯಲ್ಲೂ ಸುಮಂತ್‌ ಶೈಲೇಂದ್ರಬಾಬು, ಕನ್ನಡದಲ್ಲಿ “ಗೋವಿಂದ ಗೋವಿಂದ’ ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಐಟಂ ಸಾಂಗ್‌ವೊಂದರ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಕೊರೊನಾ ಎಫೆಕ್ಟ್ನಿಂದಾಗಿ, ಆ ಹಾಡಿನ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಅಷ್ಟಕ್ಕೂ ಸುಮಂತ್‌ ಅವರು “ಗೋವಿಂದ ಗೋವಿಂದ’ ಸಿನಿಮಾ ಮಾಡೋಕೂ ಒಂದು ಕಾರಣವಿದೆ. ಆ ಬಗ್ಗೆ ಅವರೇ ಹೇಳ್ಳೋದು ಹೀಗೆ.

Advertisement

“ನನಗೆ ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ಆದರೆ, ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕಾಗ, ನಟನೆಯತ್ತ ಗಮನಹರಿಸಿದೆ ಈ ಕಡೆ “ಗೋವಿಂದ ಗೋವಿಂದ’ ಚಿತ್ರದಲ್ಲಿ ನಟಿಸುವ ಅವಕಾಶವೂ ಹುಡುಕಿ ಬಂತು. ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾಗ, ರವಿಗರಣಿ ಅವರು ತಮ್ಮ ನಿರ್ಮಾಣದಲ್ಲಿ ನಟಿಸಬೇಕು ಅಂತ “ಗೋವಿಂದ ಗೋವಿಂದ’ ಚಿತ್ರ ಕೊಟ್ಟರು. ಹಾಗಾಗಿ ಒಪ್ಪಿಕೊಂಡು ಚಿತ್ರ ಮಾಡುತ್ತಿದ್ದೇನೆ. “ಗೋವಿಂದ ಗೋವಿಂದ’ ಒಂದು ಮನರಂಜನೆಯ ಚಿತ್ರ. ಪಕ್ಕಾ ಕಂಟೆಂಟ್‌ ಇರುವ ಚಿತ್ರವದು. ಸ್ಕ್ರೀನ್‌ಪ್ಲೇ ಚಿತ್ರದ ಹೈಲೈಟ್‌. ಚಿತ್ರದಲ್ಲಿ ನಾನು ಹೀರೋ ಅಂತೇನೂ ಇಲ್ಲ. ಕಥೆಯೇ ನಾಯಕ. ನಾಲ್ಕು ಪಾತ್ರಗಳ ಮೂಲಕ ಸಾಗುವ ಕಥೆ ಅದು. ನಾನು ಪವನ್‌, ವಿಜಯ್‌ ಚೆಂಡೂರ್‌ ಹಾಗು ಕವಿತಾ ಗೌಡ ಚಿತ್ರದ ಆಕರ್ಷಣೆಯಾಗಿದ್ದರೂ, “ಜಾಕಿ’ ಭಾವನಾ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಯಲ್ಲಿ ರೂಪೇಶ್‌ ಶೆಟ್ಟಿ ಕೂಡ ನಟಿಸಿದ್ದಾರೆ. ಅದೊಂದು ಹೊಸ ಬಗೆಯ ಕಥೆ ಎನ್ನುವ ಸುಮಂತ್‌, ನನ್ನ ಮದುವೆ ನಂತರ ನಾನು ಮಾಡಿದ ಚಿತ್ರಗಳ ಕಥೆಗಳೇ ಬಂದಿದ್ದವು. ಪದೇ ಪದೇ ಅದೇ ರೀತಿಯ ಕಥೆ ಒಪ್ಪಿಕೊಂಡು ಮಾಡಿದರೆ, ಜನರಿಗೆ ಬೋರ್‌ ಆಗೋದು ಬೇಡ ಅಂತ ನಾನೇ ಸುಮ್ಮನಿದ್ದೆ. ನನಗೆ ಕಥೆ ಇಷ್ಟವಾಗಬೇಕು ಪ್ಯಾಷನ್‌ ಇದೆ ಅಂತ ಏನೇನೋ ಕಥೆ ಒಪ್ಪಿಕೊಂಡು ಮಾಡೋಕ್ಕಾಗೋದಿಲ್ಲ. ಹಿಟ್‌ ಅಥವಾ ಫ್ಲಾಪ್‌ ಸೆಕೆಂಡರಿ. ಒಳ್ಳೆಯ ಚಿತ್ರ ಮಾಡೋದು ನನ್ನ ಉದ್ದೇಶವಷ್ಟೇ. ನಾನು ಮಾಡುವ ಚಿತ್ರ ಜನರಿಗೆ ಇಷ್ಟ ಆಗಬೇಕು. ಆ ಬಗ್ಗೆ ಮಾತಾಡುವಂತಾಗಬೇಕು. ಒಟ್ಟಾರೆ, ಸಿನಿಮಾದಲ್ಲಿ ಜನರಿಗೆ ಇಷ್ಟವಾಗುವ ಅಂಶಗಳಿರಬೇಕಷ್ಟೇ. “ಗೋವಿಂದ ಗೋವಿಂದ’ ಸಿನಿಮಾದಲ್ಲಿ ಆ ಎಲ್ಲಾ ಅಂಶಗಳೂ ಇರಲಿವೆ’ ಎನ್ನುತ್ತಾರೆ ಸುಮಂತ್‌ ಶೈಲೇಂದ್ರಬಾಬು.

Advertisement

Udayavani is now on Telegram. Click here to join our channel and stay updated with the latest news.

Next