Advertisement

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಕೆ

06:21 AM Mar 20, 2019 | Karthik A |

ಮಂಡ್ಯ: ಸಕ್ಕರೆ ನಾಡಿನಿಂದ ಸಂಸತ್‌ ಪ್ರವೇಶಿಸುವ ಹೆಬ್ಬಯಕೆಯೊಂದಿಗೆ ಸುಮಲತಾ ಅಂಬರೀಷ್‌ ಅವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮಂಡ್ಯ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಸುಮಲತಾ ಅವರು ತಮ್ಮ ಉಮೇದುವಾರಿಕೆಗೆ ಸಂಬಂಧಿಸಿದ ನಾಮಪತ್ರವನ್ನು ಸಲ್ಲಿಸಿದರು. ಸುಮಲತಾ ಅವರು ಮೂರು ಸೆಟ್‌ ಗಳಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ಎಲ್ಲಾ ಸಮುದಾಯದ ಮುಖಂಡರನ್ನು ಜೊತೆಯಾಗಿಸಿಕೊಂಡು ಹಾಗೂ ಅಸಂಖ್ಯಾತ ಅಂಬರೀಷ್‌ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಸುಮಲತಾ ಅವರು ಜಿಲ್ಲಾಧಿಕಾರಿ ಕಛೇರಿಯನ್ನು ತಲುಪಿದರು. ಸುಮಲತಾ ಅವರ ನಮಪತ್ರಕ್ಕೆ ‘ಅಹಿಂದ’ ನಾಯಕರು ಅನುಮೋದನೆ ನೀಡಿದ್ದು ವಿಶೇಷವಾಗಿತ್ತು. ದಲಿತ, ಕುರುಬ, ಗಂಗಾಮತಸ್ಥ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿತ್ವದಲ್ಲಿ ‘ಅಹಿಂದ’ ಕಾಂಬಿನೇಷನ್‌ ಗೆ ಮೊರೆ ಹೋಗುವ ಮೂಲಕ ಸುಮಲತಾ ಅವರು ಈ ಮೂಲಕ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಛೇರಿಯಿಂದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ ನತ್ತ ಬೃಹತ್‌ ಜಾಥಾ ನಡೆಸಲಿದ್ದಾರೆ. ಜಾಥಾದಲ್ಲಿ ಪುತ್ರ ಅಭಿಷೇಕ್‌ ಅಂಬರೀಷ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಇನ್ನುಳಿದಂತೆ ರಾಕ್‌ ಲೈನ್‌ ವೆಂಕಟೇಶ್‌, ನಟ ದೊಡ್ಡಣ್ಣ ಸೇರಿದಂತೆ ಘಟಾನುಘಟಿಗಳೂ ಸಹ ಈ ಜಾಥಾದಲ್ಲಿ ಭಾಗವಹಿಸುತ್ತಿದ್ದಾರೆ.

ಸುಮಲತಾ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲ
ಮಂಡ್ಯದಲ್ಲಿ ಕೈ-ತೆನೆ ಮೈತ್ರಿ ಅಭ್ಯರ್ಥಿಯಾಗಿ ನಿಖೀಲ್‌ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದರೂ ಮಂಡ್ಯದ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಅವರಿಗೆ ಬಹಿರಂಗ ಬೆಂಬಲವನ್ನು ಸೂಚಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ಸುಮಲತಾ ಅವರಿಗೆ ಬಹಿರಂಗ ಬೆಂಬಲವನ್ನು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next