ಭಾರತೀನಗರ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪತಿ ರೆಬೆಲ್‌ಸ್ಟಾರ್ ಅಂಬರೀಶ್ ಸ್ವಗ್ರಾಮ ದೊಡ್ಡರಸಿನಕೆರೆ ಗ್ರಾಮದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಈವರೆಗಿನ ಚುನಾವಣೆಗಳಲ್ಲಿ ಅಂಬರೀಶ್ ಒಬ್ಬರೇ ಆಗಮಿಸಿ ತಮ್ಮ ಮತವನ್ನು ಚಲಾಯಿಸುತ್ತಿದ್ದು, ಇದೇ ಪ್ರಥಮ ಬಾರಿಗೆ ಸುಮಲತಾ ತಮ್ಮ ಪರವಾಗಿಯೇ ಮತ ಚಲಾಯಿಸಲು ದೊಡ್ಡರಸಿನಕೆರೆ ಗ್ರಾಮಕ್ಕೆ ಆಗಮಿಸಿದ್ದರು.
ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಆಂಬರೀಶ್ ಮತ ಬೆಂಗಳೂರಿನಲ್ಲಿ ಇರುವು ದರಿಂದ ಸುಮಲತಾ ಒಬ್ಬರೇ ಆಗಮಿಸಿದ್ದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ಸಂಖ್ಯೆ 164/1ರಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಸರದಿಯಲ್ಲಿ ನಿಂತ ಸುಮಲತಾ: ಪಕ್ಷೇತರ ಅಭ್ಯರ್ಥಿ ಸುಮಲತಾ ಸಾಮಾನ್ಯ ಮತದಾರರಂತೆ ಸರದಿಯಲ್ಲಿ ನಿಂತು ತಮ್ಮ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಸುಮಲತಾ, ಜಿಲ್ಲಾದ್ಯಂತ ತಮ್ಮ ಪರವಾಗಿ ಮತದಾರರು ಒಲವು ತೋರುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಲಿದ್ದಾರೆಂಬ ವಿಶ್ವಾಸ ತಮಗಿದೆ.
ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಆಡಳಿತ ಸರ್ಕಾರದ ಮುಖ್ಯಮಂತ್ರಿಗಳು ಹಣದ ಹೊಳೆಯನ್ನೇ ಹರಿಸಿದ್ದಾರೆ. ಆದರೆ, ಜನತೆ ಹಣ ಹಾಗೂ ಅಧಿಕಾರದ ಮಂತ್ರಕ್ಕೆ ಜಗ್ಗಿಲ್ಲ. ಅವರು ಈ ಹಿಂದಿನ ನಿಲುವಿಗೆ ಬದ್ದರಾಗಿದ್ದು, ತಮಗೆ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.