Advertisement
ಮೈತ್ರಿ ಅಭ್ಯರ್ಥಿ ಮಾಡುವಂತೆ ಒತ್ತಡ: ಅಂಬರೀಶ್ ರಾಜಕಾರಣದಲ್ಲಿದ್ದ ಸಮಯದಲ್ಲಿ ಅವರಿಗೆ ಆಪ್ತರಾಗಿದ್ದ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಸೇರಿ ಹಲವಾರು ನಾಯಕರು ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಂಬರೀಶ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜೆಡಿಎಸ್‌ನ ಹಲವು ನಾಯಕರೂ ಕೂಡ ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೆ ಜೆಡಿಎಸ್‌ಗೆ ರಾಜಕೀಯ ಲಾಭವಾಗಲಿದೆ. ಅದಕ್ಕಾಗಿ ಸುಮಲತಾ ಅವರನ್ನೇ ಕಣಕ್ಕಿಳಿಸುವಂತೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
Related Articles
Advertisement
ತೆಲುಗು, ತಮಿಳು ಚಿತ್ರರಂಗ ಬೆಂಬಲ: ಜೆಡಿಎಸ್ ನಾಯಕರ ಮಾತುಗಳಿಂದ ಧೃತಿಗೆಡದಂತೆ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಂತೆ ತಮಿಳು ಚಿತ್ರರಂಗದ ರಜನೀಕಾಂತ್, ತೆಲುಗು ಚಿತ್ರರಂಗದ ಚಿರಂಜೀವಿ, ಮೋಹನ್‌ಬಾಬು ಸೇರಿ ಅನೇಕ ಗಣ್ಯರು ಸುಮಲತಾ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡಿ ಜತೆಗೆ ನಿಲ್ಲುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸುಮಲತಾ ಪರ ನಿಂತಿದೆ. ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಳ್ಳುವುದಾಗಿ ದರ್ಶನ್, ಯಶ್ ಸೇರಿದಂತೆ ಅಂಬಿ ಆಪ್ತರಾಗಿದ್ದ ನಟ-ನಟಿಯರೆಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆ.
ಪರಿಸ್ಥಿತಿ ನಿಭಾಯಿಸುವ ಬಗ್ಗೆ ಆಲೋಚನೆ: ರಾಜಕೀಯ ಬೆಳವಣಿಗೆಗಳು, ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನಾಯಕರ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನಗಳನ್ನೆಲ್ಲಾ ತಾಳೆ ಹಾಕುತ್ತಿರುವ ಸುಮಲತಾ, ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬದ ಮೇಲೆ ಉಂಟಾಗಬಹುದಾದ ಪರಿಣಾಮ, ರಾಜಕೀಯ ಅನುಭವವಿಲ್ಲದೆ ಪ್ರವೇಶ ಮಾಡಿ ಮುಖಭಂಗಕ್ಕೆ ಒಳಗಾಗದಂತೆ ಹಾಗೂ ಅಂಬರೀಶ್ ಗೌರವಕ್ಕೆ ಧಕ್ಕೆ ಉಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.
ಇದರ ನಡುವೆಯೂ ಲೋಕಸಭಾ ಚುನಾವಣಾ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧರಾಗಿರುವಂತೆ ಕಂಡು ಬಂದಿರುವ ಸುಮಲತಾ, ಅಧಿಕೃತವಾಗಿ ರಾಜಕೀಯ ಪ್ರವೇಶವನ್ನು ಖಚಿತ ಪಡಿಸಬೇಕಿದೆ. ಅದು ಶೀಘ್ರವೇ ಹೊರಬೀಳಲಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ. ಸುಮಲತಾ ಫೆ.11ರಿಂದ 15ರವರೆಗೆ ಮಲೇಷಿಯಾ ಪ್ರವಾಸಕ್ಕೆ ತೆರಳಲಿದ್ದು, ಅದಕ್ಕೆ ಮುನ್ನ ಅಥವಾ ನಂತರ ತಮ್ಮ ನಿರ್ಧಾರ ಪ್ರಕಟಿಸಬಹುದೆಂದು ತಿಳಿದು ಬಂದಿದೆ.
ಮಂಡ್ಯ ಮಂಜುನಾಥ್