Advertisement

ಕಣ್ಣೀರಿಟ್ಟು, ಗೆಲುವಿನ ಶಪಥ ಮಾಡಿದ ರೆಬೆಲ್‌ಸ್ಟಾರ್‌ ಪತ್ನಿ

12:30 AM Mar 20, 2019 | |

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಸುಮಲತಾ, ತಮ್ಮ ಪತಿ ಅಂಬರೀಶ್‌ ಅವರ ಸಮಾಧಿ ಬಳಿ ತಮ್ಮ ನಾಮಪತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.

Advertisement

ಸೋಮವಾರ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿ, ತಿರುಪತಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ಆಗಮಿಸಿದ್ದ ಸುಮಲತಾ, ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್‌ ಅವರ ಸಮಾಧಿ ಮುಂದೆ ನಾಮಪತ್ರದ ಪ್ರತಿ ಇಟ್ಟು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಸುಮಲತಾ, ಅಂಬರೀಶ್‌ ಸಮಾಧಿ ಮೇಲೆ ಕೈ ಇಟ್ಟು ಚುನಾವಣೆ ಯಲ್ಲಿ ಗೆಲ್ಲುವ ಶಪಥ ಮಾಡಿದರು. ಈ ವೇಳೆ ಮಾತನಾಡಿ, ನಾಮಪತ್ರ ಸಲ್ಲಿಕೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಎಲ್ಲ ಹಿರಿಯರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ.

ಜೆಡಿಎಸ್‌ನವರು ಮಹಿಳಾ ತಂಡ ಕಟ್ಟಿಕೊಂಡು ಪ್ರಚಾರ ಮಾಡುವ ಯೋಚನೆ ಮಾಡಿದ್ದರೆ, ಅದು ಅವರ ಯೋಚನೆ. ಅವರು ಯಾವ ಪ್ರಚಾರ ಮಾಡಿದರೂ, ನಾವು ನಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತೇವೆ. ನಾಮಪತ್ರ ಸಲ್ಲಿಸಿದ ನಂತರ, ಚಿಹ್ನೆ ಪಡೆಯುವ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದರು.ನಂತರ, ಸುಮಲತಾ ಮೈಸೂರಿಗೆ ತೆರಳಿದ್ದು, ಬುಧವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ನಂತರ ನಾಮಪತ್ರ ಸಲ್ಲಿಸಲು ಮಂಡ್ಯಕ್ಕೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next