Advertisement

ಮುಖ್ಯಮಂತ್ರಿ ವಿರುದ್ಧ ಸುಮಲತಾ ದೂರು

01:50 AM Mar 26, 2019 | Sriram |

ಬೆಂಗಳೂರು: ಮುಖ್ಯಮಂತ್ರಿಗಳು ಮಂಡ್ಯದಲ್ಲಿ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಮನೆ ಬಳಿ ಗುಪ್ತಚರ ಹಾಗೂ ಪೊಲೀಸರನ್ನು ಬಿಟ್ಟಿದ್ದು, ನಮ್ಮ ದೂರವಾಣಿ ಕದ್ದಾಲಿಕೆ ಮೂಲಕ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸೋಮವಾರ ಮಧ್ಯಾಹ್ನ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿ ಆಗುತ್ತಿರುವ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ದೂರು ಸಲ್ಲಿಸಿದ ಅವರು, ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ ನಾವು ಆಯೋಜಿಸುವ ಕಾರ್ಯಕ್ರಮಗಳು ಹಾಗೂ ಸಮಾವೇಶಗಳಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್‌ ಕಡಿತಗೊಳಿಸುತ್ತಿದ್ದು, ಬೆದರಿಕೆ ಹೇಳಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಎಂಬ ಹೋರಾಟದಲ್ಲಿ ನೇರವಾಗಿ ಬಂದರೆ ಹೋರಾಡಬಹುದು. ಆದರೆ, ಹಿಂಬಾಗಿಲಿನಿಂದ ಬಂದು ಬೆನ್ನಿಗೆ ಚೂರಿ ಹಾಕುವಂತಹ ರಾಜಕೀಯ ಮಾಡುತ್ತಿದ್ದಾರೆ. ಯಾರು, ಏನೆಲ್ಲ ಮಾಡುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರತಿಸ್ಪರ್ಧಿಗಳು ಮನೆಗೆ ಸಾವಿರ ರೂ.ಗಳಂತೆ ಹಂಚಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದರು.

ನನ್ನ ಪರ ಪ್ರಚಾರ ಮಾಡುವವರ ಟಾರ್ಗೆಟ್‌: ಅವರ ಪರವಾಗಿ ಕುಟುಂಬದವರೆಲ್ಲ ಪ್ರಚಾರ ಮಾಡಬಹುದು. ಅದೇ ನನ್ನ ಪರವಾಗಿ ಯಾರಾದರೂ ಪ್ರಚಾರಕ್ಕೆ ಬಂದರೆ ಟಾರ್ಗೆಟ್‌ ಮಾಡುತ್ತಾರೆ. ಅವರ ಪರವಾಗಿ ಮುಖ್ಯಮಂತ್ರಿಗಳು, 8 ಶಾಸಕರು, 3 ಸಚಿವರು, ಒಬ್ಬರು ಸಂಬಂಧಿ ಸಚಿವರು ಹಾಗೂ ಶಾಸಕಿ ತಾಯಿ ಇದ್ದಾರೆ. ಇಷ್ಟೆಲ್ಲ ಬಲ ಇಟ್ಟುಕೊಂಡೂ ನನ್ನ ಪರ ಪ್ರಚಾರ ಮಾಡುವವರನ್ನು ಏಕೆ ಟಾರ್ಗೆಟ್‌ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಒಬ್ಬ ನಿಖೀಲ್‌ ವಿರುದ್ಧ ಎಲ್ಲರೂ ಒಂದಾಗಿದ್ದಾರೆಎಂದು ಹೇಳಿರುವುದಕ್ಕೆ ಅರ್ಥವಿದೆಯೇ? ನಾನು ಒಂಟಿ ಮಹಿಳೆಯಾಗಿ ಜನರ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೇನೆ. ಆದರೆ, ಹಿಂಬಾಗಿಲಿನ ಮೂಲಕ ವಿದ್ಯುತ್‌ ತೆಗೆಯುವುದು, ಕೇಬಲ್‌ ತೆಗೆಯುವಂತಹ ಕೆಲಸಗಳನು ಯಾರೂ ಮಾಡಬಾರದು ಎಂದರು.

Advertisement

ವೈಯಕ್ತಿಕ ಟೀಕೆಗೆ ಪ್ರತಿಕ್ರಿಯಿಸಲ್ಲ: ನೀವು ಕುಟುಂಬ ಸಮೇತವಾಗಿ ಪ್ರಚಾರ ಮಾಡಿ. ಆದರೆ, ಯಾವುದೇ ವ್ಯಕ್ತಿಯ ವೈಯಕ್ತಿಕ ಟೀಕೆ ಮಾಡಬೇಡಿ. ದರ್ಶನ್‌, ಯಶ್‌, ಅಭಿಷೇಕ್‌ ನನ್ನ ಮನೆ ಮಕ್ಕಳು. ಅವರೆಲ್ಲಾ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಸುಮಲತಾ ಹೇಳಿದರು.

ಸಿಎಂ ಬಿಡುಗಡೆಗೊಳಿಸಿದ್ದಾರೆ ಎನ್ನಲಾದ ನಟ ದರ್ಶನ್‌ರ 2009ರ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, ಹಲವು ಕಡೆ ಮಾತನಾಡಿರುವ ಹೇಳಿಕೆಗಳನ್ನು ಕಟ್‌ ಮಾಡಿ ಅಲ್ಲೊಂದು ಲೈನ್‌, ಇಲ್ಲೊಂದು ಲೈನ್‌ ಹಾಕಿ ಆಡಿಯೋಗಳನ್ನು ಮಾಡಬಹುದು. ಇಂದು ಮನೆಯಲ್ಲಿ ಕುಳಿತಿರುವ ಮಕ್ಕಳು ಸಹ ಇಂತಹ ಆಡಿಯೋಗಳನ್ನು ಮಾಡುತ್ತಾರೆ. ಅವುಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಬೆದರಿಕೆ ಹಾಕಿರುವುದು ನಿಜ: ನಾನು ನಾಮಪತ್ರ ಸಲ್ಲಿಸುವವರೆಗೆ ಅವರ ಪಕ್ಷದ ನಾಯಕರು ಕರೆ ಮಾಡಿ, ಅವರ ವಿರುದ್ಧ ನಾಮಪತ್ರ ಸಲ್ಲಿಸುವುದು ಒಳ್ಳೆಯದಲ್ಲ. ಅವರು ಏನು ಬೇಕಾದರೂ ಮಾಡುತ್ತಾರೆಂದು ಬೆದರಿಸಿದ್ದರು ಎಂದು ಸುಮಲತಾ ಹೇಳಿದ್ದಾರೆ. ನಿಮ್ಮ ಬಗ್ಗೆ ಅವರಿಗೆ ಭಯವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಶ್ನೆಯನ್ನು ಅವರಿಗೆ ಕೇಳಿ ಎಂದರು.

ನನ್ನ ಹೆಸರಿನಲ್ಲೇ ಅಂಬರೀಶ್‌ ಇದ್ದಾರೆ: ಸುಮಲತಾ
ನನ್ನ ಹೆಸರಿನಲ್ಲೇ ಅಂಬರೀಶ್‌ ಸೇರಿಕೊಂಡಿದ್ದು, ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ, ಅವರ ಹೆಸರಿನಲ್ಲಿ ಅಂಬರೀಶ್‌ ಇದೆಯೇ ಎಂದು ಪ್ರಶ್ನಿಸಿದ ಸುಮಲತಾ, ಅಂಬರೀಶ್‌ ಅವರ ಹೆಸರನ್ನು ನಾನು ಬಂಡವಾಳ ಅಂತ ಅಂದುಕೊಂಡಿಲ್ಲ. ಹೀಗಾಗಿ ಅವರ ಹೆಸರನ್ನು ಅವರು ಬಳಸೋದು ಬೇಡ. ಎಷ್ಟೇ ಕೀಳುಮಟ್ಟದ ರಾಜಕಾರಣ ಮಾಡಿದರೂ ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿದೆಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next