Advertisement

KRS ಡ್ಯಾಂ ಬಿರುಕು ಬಿಟ್ಟಿಲ್ಲ ಎಂಬುದು ಅಸತ್ಯ, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ : ಸುಮಲತಾ

07:57 PM Jul 14, 2021 | Team Udayavani |

ಮಂಡ್ಯ: ಕೆಆರ್‌ಎಸ್ ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂಬುದು ಅಸತ್ಯವಾಗಿದ್ದು, ಡ್ಯಾಂನಲ್ಲಿ ಕಣ್ಣಿಗೆ ಕಾಣುವಷ್ಟು ಬಿರುಕು ಬಿಟ್ಟಿಲ್ಲ. ಆದರೆ ಸಣ್ಣಪುಟ್ಟ ಕಾಮಗಾರಿಗಳು ನಡೆದಿದ್ದು, ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧವಾಗಿದ್ದೇನೆ ಎಂದು ಸಂಸದೆ ಸುಮಲತಾಅಂಬರೀಷ್ ಸ್ಪಷ್ಟಪಡಿಸಿದರು.

Advertisement

ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯದ ವೀಕ್ಷಣೆ ಮಾಡಿ, ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಚ್ಚಿನ ಅಧ್ಯಯನ ಅಗತ್ಯ:
ಡ್ಯಾಂ ಸುರಕ್ಷತೆ ಕುರಿತಂತೆ ಹೆಚ್ಚಿನ ಅಧ್ಯಯನ ಅಗತ್ಯವಿದ್ದು, ಸಮಗ್ರ ವರದಿ ಬರಬೇಕಾಗಿದೆ. ಸಣ್ಣಪುಟ್ಟ ಬಿರುಕು, ನೀರು ಸೋರುವಿಕೆಗಳನ್ನು 67 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಅದನ್ನೆಲ್ಲ ಅಧಿಕಾರಿಗಳು ಮಾಡಿದ್ದಾರೆ. ಇದು ಬಿರುಕು ಕಾಣಿಸಿಕೊಂಡಿರುವುದಕ್ಕೆ ಕಾಮಗಾರಿ ನಡೆಸಿರುವುದು. ಆದ್ದರಿಂದ ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ನಾಳೆ ದೊಡ್ಡದಾಗಬಹುದು:
ಈಗ ಕಾಣಿಸಿಕೊಂಡಿರುವ ಸಣ್ಣಪುಟ್ಟ ಬಿರುಕುಗಳು ನಾಳೆ ದೊಡ್ಡದಾಗಬಹುದು. ಆದ್ದರಿಂದ ಗಣಿಗಾರಿಕೆ, ಸ್ಫೋಟ, ಕಂಪನದಿಂದ ತೊಂದರೆಯಾಗಬಹುದು. ಆದರೆ ಸ್ಪಷ್ಟ ಮಾಹಿತಿಯೇ ಇಲ್ಲ. ಎಲವೂ ಗೊಂದಲಮಯವಾಗಿದೆ. ಅಧಿಕಾರಿಗಳು ಅಸ್ಪಷ್ಟ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಗದಗ ನಗರಸಭೆ ಎಇಇ

Advertisement

ಅಧಿಕಾರಿಗಳಿಂದ ಅಸ್ಪಷ್ಟ ಮಾಹಿತಿ:
ಅಧಿಕಾರಿಗಳು ಸಣ್ಣಪುಟ್ಟ ಕಾಮಗಾರಿ ನಡೆಸಿದ್ದೇವೆ ಎನ್ನುತ್ತಾರೆ. ನಂತರ ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎನ್ನುತ್ತಾರೆ. ಅಣೆಕಟ್ಟೆ ಸುರಕ್ಷತೆ ಬಗ್ಗೆ ಅಧಿಕೃತ ವರದಿ ನೀಡುವವರು ಯಾರು ಎಂದು ಕೇಳಿದರೆ ನಾವಲ್ಲ ಎನ್ನುತ್ತಾರೆ. ಈ ರೀತಿಯ ಮಾಹಿತಿಯನ್ನು ಏನೆಂದು ತಿಳಿದುಕೊಳ್ಳುವುದು. ಗಣಿಗಾರಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಜಲಾಶಯಕ್ಕೆ ಅಪಾಯವಿಲ್ಲವೇ ಎಂದು ಕೇಳಿದರೆ ಸರಿಯಾದ ಉತ್ತರವೇ ಇಲ್ಲ ಎಂದು ತಿಳಿಸಿದರು.

ರಿಸ್ಕಿ ಕೆಲಸ:
ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ರಿಸ್ಕಿ ಕೆಲಸ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವುದಕ್ಕಿಂತ ಈಗಲೇ ಎಚ್ಚರಿಕೆ ವಹಿಸುವುದು ಸೂಕ್ತ. ಅಣೆಕಟ್ಟೆ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟ ನಡೆಸಿದ ನಂತರ ವರದಿಯಿಂದ ಸುರಕ್ಷತೆ ಬಗ್ಗೆ ತಿಳಿಯಲಿದೆ ಎನ್ನುತ್ತಾರೆ. ಆದರೆ ಗಣಿಗಾರಿಕೆಯಿಂದ ಅಪಾಯವಿಲ್ಲ ಎಂಬುದು ದೊಡ್ಡ ಸುಳ್ಳು. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದರು.

ಟಾಸ್ಕ್ ಫೋರ್ಸ್ ಸಮಿತಿ ಅಗತ್ಯ:
ಜಲಾಶಯದ ಭದ್ರತೆ ವಿಚಾರದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಅಗತ್ಯವಾಗಿದೆ. ಅದರ ಮೂಲಕ ಜಲಾಶಯದ ಭದ್ರತೆಗೆ ಹೆಚ್ಚು ಒತ್ತು ನೀಡಬೇಕು. ಜಲಾಶಯದ ಹಿನ್ನೀರಿನಲ್ಲಿ ಮೋಜು, ಮಸ್ತಿಯಂಥ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ಭದ್ರತೆ ವೈಫಲ್ಯ ಕಂಡು ಬರುತ್ತಿದೆ. ಅದಕ್ಕೆ ಕಡಿವಾಣ ಹಾಕಲು ನಿಷೇಧಿತ ವಲಯ ಎಂದು ಘೋಷಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ :ಶೀಘ್ರದಲ್ಲಿಯೇ ಗೋವಾ ಪ್ರವಾಸೋದ್ಯಮಕ್ಕೆ ಚಾಲನೆ : ಶ್ರೀಪಾದ ನಾಯ್ಕ

ದಾಖಲೆಯಿಂದಲೇ ಹೇಳಿಕೆ:
ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬುದನ್ನು ನನ್ನ ಬಳಿ ಇರುವ ತಾಂತ್ರಿಕ ದಾಖಲೆಗಳ ಆಧಾರದ ಮೇಲೆಯೇ ಹೇಳಿದ್ದೇನೆ. ಅಲ್ಲದೆ, ಸ್ಥಳೀಯರು, ರೈತರು ಇದರ ಬಗ್ಗೆ ಹಲವು ದೂರುಗಳನ್ನು ನೀಡಿದ್ದಾರೆ. ಇದಕ್ಕಿಂತ ದಾಖಲೆಗಳು ಬೇಕಾ?, ಇದರ ಬಗ್ಗೆ 2019ರ ಸಂಸತ್ ಅಧಿವೇಶನದಲ್ಲಿಯೇ ಪ್ರಸ್ತಾಪ ಮಾಡಿದ್ದೇನೆ. ಇದು ಇಂದು-ನಿನ್ನೆಯ ಮಾತಲ್ಲ ಎಂದರು.

ತಿರುಚಲಾಗುತ್ತಿದೆ:
ನನ್ನ ಹೇಳಿಕೆಗಳನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ. ಕೆಆರ್‌ಎಸ್ ಜಲಾಶಯದ ಸುರಕ್ಷತೆ ವಿಚಾರದಲ್ಲಿ ಇನ್ನೂ ಆತಂಕವಿದ್ದು, ಕಾಳಜಿಯಿಂದ ಹೇಳಿಕೆ ನೀಡಿದ್ದೇನೆ. ಅದನ್ನು ಬೇರೆಯವರು ರಾಜಕೀಯವಾಗಿ ತಿರುಚಿ ಮಾತನಾಡುತ್ತಿದ್ದಾರೆ. ಆದರೆ ಕೆಆರ್‌ಎಸ್ ಜಲಾಶಯ ಬಿರುಕು ವಿಚಾರದಲ್ಲಿ ನನ್ನ ಆತಂಕ ಮುಂದುವರೆದಿದ್ದು, ಅದರಂತೆ ಕಾಳಜಿಯೂ ಮುಂದುವರೆಯಲಿದೆ. ಅಧಿಕಾರಿಗಳು ಅದರ ಬಗ್ಗೆ ಸ್ಪಷ್ಟ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next