ಬಂಟ್ವಾಳ: ಬೋಳಂತೂರು ಗ್ರಾಮದ ನಿವಾಸಿ ಯುವಕನನ್ನು ಕೊಲೆ ಮಾಡಿ ಸುಟ್ಟು ಹೊಂಡಕ್ಕೆ ಎಸೆದ ಆರೋಪಿ ಬೋಳಂತೂರು ನಿವಾಸಿ ಅಬ್ದುಲ್ ರಹಿಮಾನ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ಸುರಿಬೈಲು ನಿವಾಸಿ ಯುವಕ ಅಬ್ದುಲ್ ಸಮದ್(19) ನನ್ನು ಕೊಲೆ ಮಾಡಿ ಇರಾ ಮುಳೂರುಪದವಿನ ಗುಡ್ಡದಲ್ಲಿ ಸುಟ್ಟು ತೀರಾ ಆಳವಾದ ಹೊಂಡಕ್ಕೆ ಎಸೆದಿದ್ದನು. ಕೊಲೆಯಾಗಿ ಏಳೆಂಟು ದಿನಗಳ ಬಳಿಕ ಮೃತದೇಹವನ್ನು ಹೊರ ತೆಗೆಯಲಾಗಿತ್ತು.
ಪ್ರಾರಂಭದಲ್ಲಿ ಯುವಕ ಸಮದ್ ಕಾಣೆಯಾದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಬಳಿಕ ಆರೋಪಿಯ ಸಂಬಂಧಿಕ ಸಲೀಂ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಹೆಚ್ಚಿನ ತನಿಖೆಯ ದೃಷ್ಟಿಯಿಂದ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.
ಪ್ರಕರಣದ ಸತ್ಯಾಸತ್ಯತೆಯ ಕುರಿತು ವಿವಿಧ ಆಯಾಯಗಳಲ್ಲಿ ಪೊಲೀಸರು ತನಿಖೆ ನಡೆಸಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಪ್ರಸ್ತುತ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಹೆಚ್ಚಿನ ತನಿಖೆ ಅಗತ್ಯವಿದ್ದರೆ ಪೊಲೀಸರು ಮತ್ತೆ ಕಸ್ಟಡಿಗೆ ಪಡೆಯುವ ಅವಕಾಶವೂ ಇದೆ. ಈ ಪ್ರಕರಣವು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಸಾಕಷ್ಟು ಮಹತ್ವದ ವಿಚಾರಗಳನ್ನು ಆತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದನು.