Advertisement

ಸಂಪತ್‌ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

03:19 PM Oct 12, 2020 | sudhir |

ಸುಳ್ಯ: ಸಂಪಾಜೆಯ ಬಿಜೆಪಿ ಪ್ರಭಾವಿ ಮುಖಂಡ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣದ ಆರೋಪಿ ಕಲ್ಲುಗುಂಡಿ ನಿವಾಸಿ ಸಂಪತ್‌ ಕುಮಾರ್‌ (36)ನನ್ನು ಸುಳ್ಯದ ಶಾಂತಿನಗರ ಬಳಿ ಅ. 8ರಂದು ಮುಂಜಾನೆ ಮುಸುಕುಧಾರಿಗಳ ತಂಡ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅ.11ರಂದು ಪೊಲೀಸರು ಬಂಧಿಸಿದ್ದಾರೆ.

Advertisement

ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಸ್ವಿಫ್ಟ್‌ ಕಾರಿನಲ್ಲಿ ಸುಬ್ರಹ್ಮಣ್ಯ-ಬಿಸಿಲೆ ಘಾಟಿ ಮೂಲಕ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಬಂಧಿಸಲಾಗಿದೆ. ನಾಪತ್ತೆಯಾಗಲು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರು, ಹತ್ಯೆ ನಡೆಸಲು ಬಳಸಿದ ಮೂರು ನಾಡ ಕೋವಿ, ಒಂದು ಕತ್ತಿ, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ದಸ್ತಗಿರಿ ಮಾಡಿದ ಕುರಿತಂತೆ ಅ.11 ರಂದು ಸುಳ್ಯ ನಗರ ಠಾಣೆಯಲ್ಲಿ ಎಎಸ್ಪಿ ಲಖನ್‌ಸಿಂಗ್‌ ನೇತೃತ್ವದಲ್ಲಿ ಪತ್ತೆ ಕಾರ್ಯ ತಂಡ ಮಾಹಿತಿ ಬಿಡುಗಡೆ ಮಾಡಿತು. ಐವರು ಆರೋಪಿಗಳ ಪೈಕಿ ನಾಲ್ವರು ಸಂಪಾಜೆ ಗ್ರಾಮದ ಕಲ್ಲುಗುಂಡಿಯವರಾಗಿದ್ದು, ಓರ್ವ ಜಾಳ್ಸೂರು ಗ್ರಾಮದ ನಿವಾಸಿ ಎನ್ನುವ ಮಾಹಿತಿಯನ್ನಷ್ಟೇ ನೀಡಿದ್ದಾರೆ. ಖಚಿತ ಮಾಹಿತಿ ಪ್ರಕಾರ ಕೃತ್ಯದಲ್ಲಿ ಭಾಗಿಯಾದ ಕಲ್ಲುಗುಂಡಿಯ ಮನಮೋಹನ ಯಾನೆ ಮನು, ಮನೋಜ್‌ ಯಾನೆ ಮಧು, ಕಾರ್ತಿಕ್‌, ಬಿಪಿನ್‌ ಕುಮಾರ್‌, ಅಡ್ಕಾರಿನ ಶಿಶಿರ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಚೀನಾ, ಪಾಕ್ ಗೆ ಸೆಡ್ಡು: ಮಿಲಿಟರಿ ಸಾರಿಗೆಗೆ ಮತ್ತಷ್ಟು ಬಲ:44 ಸೇತುವೆ ಉದ್ಘಾಟಿಸಿದ ರಾಜನಾಥ್

ಆರೋಪಿಗಳ ಗುರುತು ಹಚ್ಚಲು ಕವಾಯತು ನಡೆಸಲು ಬಾಕಿ ಇರುವುದರಿಂದ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಒಂದೇ ತಂಡವಾಗಿತ್ತು..!
ಶಂಕಿತ ಆರೋಪಿಗಳೆಂದು ಗುರುತಿಸಲ್ಪಟ್ಟ ವ್ಯಕ್ತಿಗಳು ಒಂದು ಕಾಲದಲ್ಲಿ ಸಂಪತ್‌ಕುಮಾರ್‌ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡವರು. ಹತ್ಯೆಯಾದ ವ್ಯಕ್ತಿ, ಬಂಧನದ ಆರೋಪಿಗಳು ಕೆಂಪು ಕಲ್ಲು, ಮರಳು ಮಾರಾಟ ವ್ಯವಹಾರದಲ್ಲಿ ನಿರತರಾಗಿದ್ದರು. ವ್ಯವಹಾರ ನಡುವಿನ ದ್ವೇಷ ಅಥವಾ ಬೇರೆ ಕಾರಣ ಘಟನೆಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಕಳಗಿ ಕೊಲೆಗೆ ಪ್ರತೀಕಾರ
ವರ್ಷದ ಹಿಂದೆ ನಡೆದ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಸಂಪತ್‌ ಕುಮಾರ್‌ ಪ್ರಮುಖ ಆರೋಪಿಯಾಗಿದ್ದ. ಇದೇ ಕಾರಣದಿಂದ ಸಂಪತ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಅ. 8ರಂದು ಹತ್ಯೆ ನಡೆಸಿದ ಸಂದರ್ಭದಲ್ಲಿ ಕೂಡ ಆರೋಪಿಗಳು ಕಳಗಿ ಕೊಲೆಗೆ ಪ್ರತೀಕಾರ ಎಂದು ಕೃತ್ಯ ನಡೆದ ಮನೆ ಮಂದಿಯ ಬಳಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next