Advertisement

ಸುಳ್ಯದ ರೈತ ಹೋರಾಟ: ಸ್ಮಾರಕ ನಿರೀಕ್ಷೆ

11:30 PM Mar 25, 2021 | Team Udayavani |

ಸುಳ್ಯ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಲವು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಹೇಳಿದೆ. ಈ  ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ 3 ತಾಣಗಳಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ಬಂಗ್ಲೆಗುಡ್ಡೆಯೂ ಒಂದು.

Advertisement

ಬಂಗ್ಲೆಗುಡ್ಡೆಯಲ್ಲಿ ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತಲಿನ ಕಂದಕಗಳ ಕರುಹಗಳು ಇನ್ನೂ ಇವೆ. 1837ರಲ್ಲಿ ಬೆಳ್ಳಾರೆಯು ಸುಳ್ಯ, ಅಮರ ಪಂಜ ಮತ್ತು ಮಾಗಣೆ ಪ್ರದೇಶಗಳ ರಾಜ ಧಾನಿಯಾಗಿತ್ತು. ಇಲ್ಲಿ 1804ರಲ್ಲಿ ಬ್ರಿಟಿಷರ ಖಜಾನೆ ಕಚೇರಿ ಆರಂಭವಾಗಿತ್ತು. ಆ ಕಟ್ಟಡವು ಇನ್ನೂ ಇದ್ದು 2015ರ ವರೆಗೂ ಬೆಳ್ಳಾರೆ ಗ್ರಾ.ಪಂ.ನ ಲೆಕ್ಕಾಧಿಕಾರಿಗಳ ಕಚೇರಿಯಾಗಿತ್ತು. ಅಧಿಕಾರಿಗಳು ತಂಗುತ್ತಿದ್ದ ಇನ್ನೊಂದು ಕಟ್ಟಡವೂ ಅಲ್ಲೇ ಪಕ್ಕದಲ್ಲಿದೆ.

ಹಿನ್ನೆಲೆ :

1837ರ ಮಾ. 30ರಂದು ಸುಳ್ಯದ ಪೂಮಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ರೈತರು ಸಂಘಟಿತರಾಗಿ ಬೆಳ್ಳಾರೆ ಖಜಾನೆಯನ್ನು ಮುತ್ತಿಗೆ ಹಾಕಿದ್ದರು. ಅಲ್ಲಿನ ಕಲೆಕ್ಟರ್‌, ಜತೆಯಿದ್ದ ಇಬ್ಬರು ಮಂಗಳೂರಿಗೆ ಪಲಾಯನ ಮಾಡಿದರು. ಹೀಗೆ ಹಲವು ತಂಡಗಳು ಸೇರಿ ವಿಟ್ಲದವರೆಗಿನ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿತು.

1837ರ ಎ. 5ರಂದು ಮಂಗಳೂರಿನ ಬಾವುಟಗುಡ್ಡೆಗೆ ತೆರಳಿ ಬ್ರಿಟಿಷ್‌ ಧ್ವಜ ಕೆಳಗಿಳಿಸಿ ಕೊಡಗಿನ ರಾಜ ಧ್ವಜವನ್ನು ಹಾರಿಸಿ ವಿಜಯೋತ್ಸವ ಆಚರಿಸಲಾಯಿತು. 1834ರಲ್ಲಿ ಕೊಡಗಿನ ಚಿಕ್ಕವೀರ ರಾಜೇಂದ್ರ ಅವರನ್ನು ಪದಚ್ಯುತಿಗೊಳಿಸಿ ಸುಳ್ಯ, ಪುತ್ತೂರುಗಳನ್ನು ಬೇರ್ಪಡಿಸಿದ್ದಕ್ಕಾಗಿ ಹಾಗೂ ನಗದು ರೂಪದ ಕಂದಾಯ ನೀಡಲು ಒತ್ತಾಯಿಸದ್ದರಿಂದ, ಕೃಷಿ ಉತ್ಪನ್ನಕ್ಕೆ ಸರಿಯಾದ ಬೆಲೆ ಇಲ್ಲದ್ದರಿಂದ ರೈತರು 1837ರಲ್ಲಿ ದಂಗೆ ಎದ್ದರು. ದಂಗೆಯನ್ನು ಮಟ್ಟ ಹಾಕಲು ತಲಶ್ಶ ರಿ ಮತ್ತು ಮುಂಬಯಿಯಿಂದ ಬ್ರಿಟಿಷರ ದಂಡು ಬಂದು ರೈತರನ್ನು ಮಟ್ಟ ಹಾಕಿತು. ದಂಗೆಯ ಪ್ರಮುಖರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು ಎನ್ನುತ್ತದೆ ಇತಿಹಾಸ.

Advertisement

ಸುಳ್ಯದ ಈ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಯಾವುದೇ ಕುರುಹುಗಳಿಲ್ಲ. ಈ ಪ್ರದೇಶದಲ್ಲಿ ಒಂದು ಗ್ರಂಥಾಲಯ, ಸ್ಮಾರಕ ಹಾಗೂ ಆ ಕೋಟೆ ಮತ್ತು ಕಟ್ಟಡವನ್ನು ಸಂರಕ್ಷಿಸುವ ಕಾರ್ಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆ. ಬೆಳ್ಳಾರೆ ಲೆಕ್ಕಾಧಿಕಾರಿಗಳ ಕಚೇರಿ ಸ್ಥಳಾಂತರವಾದ ಬಳಿಕ ಆ ಪ್ರದೇಶ ಹಾಗೇಯೇ ಇದೆ. ಸದ್ಯ ಕೇಂದ್ರ ಸರಕಾರವೂ ಇದನ್ನು ಐತಿಹಾಸಿಕ ತಾಣವೆಂದು ಗುರುತಿಸಿದ್ದು ಅಲ್ಲಿಂದಲೂ ಅನುದಾನ ತರಿಸಿಕೊಳ್ಳುವ ಅವಕಾಶವಿದೆ. ಈ ಮೊದಲು ಹಲವು ಬಾರಿ ಬೆಳ್ಳಾರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಹಲವು ಹೋರಾಟಗಳು ನಡೆದಿದ್ದರೂ ಅದಕ್ಕೆ ಭರವಸೆಯ ಪ್ರತಿಕ್ರಿಯೆ ಮಾತ್ರ ದೊರೆತಿದೆ.

ಮಾ. 27ರಂದು ಅಮರ ಸುಳ್ಯ ಕ್ರಾಂತಿಯ ಸವಿ ನೆನಪಿನ ಕಾರ್ಯಕ್ರಮದಲ್ಲಿ ಸಚಿವ ಎಸ್‌.ಅಂಗಾರ, ಕೋಟ ಶೀÅನಿವಾಸ ಪೂಜಾರಿ, ಜಿಲ್ಲಾಧಿಕಾರಿ ಭಾಗವಹಿಸಲಿದ್ದು, ಅಂದೇ ಸ್ಮಾರಕ ಸ್ಥಾಪನೆಯ ಕೈಂಕರ್ಯ ಆರಂಭವಾಗಿ ಗುದ್ದಲಿ ಪೂಜೆ ನಡೆಯಲಿ ಎಂಬುದು ಸಾರ್ವಜನಿಕರ ಅಭಿಲಾಷೆ.

ರೈತ ಹೋರಾಟ ಎಂಬುದು ಸುಳ್ಯದ ಸ್ವಾತಂತ್ರ್ಯ ಹೋರಾಟದ ಕುರುಹು. ಅದು ನಮ್ಮ ಹೆಮ್ಮೆ. ಆ ಪ್ರಯುಕ್ತ ಸ್ಮಾರಕ ಹಾಗೂ ಗ್ರಂಥಾಲಯ ನಿರ್ಮಾಣ ಮಾಡುವ ಉದ್ದೇಶವಿದೆ. ಶೀಘ್ರವೇ ಈ ಬಗ್ಗೆ ಅನುದಾನ ತರಿಸಿ ಸ್ಮಾರಕ ನಿರ್ಮಾಣದ ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುವುದು.  –ಎಸ್‌.ಅಂಗಾರ, ಸಚಿವರು

 ಈವರೆಗೆ ಸ್ಮಾರಕ ನಿರ್ಮಾಣ ಕೇವಲ ಭರವಸೆಗೆ ಸೀಮಿತವಾಗಿದೆ. ಈ ಬಾರಿ ಕೇಂದ್ರ ಸರಕಾರದ ಸಹಕಾರ, ಸಚಿವ ಎಸ್‌. ಅಂಗಾರ ಅವರ ಪ್ರಯತ್ನದಿಂದ ಅನುದಾನ ದೊರೆತರೆ ಶೀಘ್ರ ಸ್ಮಾರಕ ನಿರ್ಮಾಣವಾಗಲಿದೆ. ಆ ಮೂಲಕ ರೈತರಿಗೆ ಗೌರವ ಸಲ್ಲಿಸಬೇಕಾಗಿದೆ. ಡಾ| ಪ್ರಭಾಕರ ಶಿಶಿಲ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next