Advertisement

ಸುಳ್ಯ: ಆನ್‌ಲೈನ್‌ ಆತಂಕ ನಿವಾರಿಸಿದ ಮನೆಪಾಠ

09:13 AM Aug 03, 2020 | mahesh |

ಸುಳ್ಯ: ಕೋವಿಡ್ ಹಿನ್ನೆಲೆಯಲ್ಲಿ ಈ ಸಾಲಿನ ಶೈಕ್ಷಣಿಕ ಚಟುವಟಿಕೆ ಪ್ರಾರಂಭಕ್ಕೆ ತೊಡಕಾದ ಕಾರಣ ಸರಕಾರವು ಪರ್ಯಾಯವಾಗಿ ಆನ್‌ಲೈನ್‌ ಶಿಕ್ಷಣದ ಚಿಂತನೆಯನ್ನು ಜುಲೈಯಲ್ಲಿ ಮಾಡಿತು. ಆದರೆ ಸುಳ್ಯ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಜೂನ್‌ನಲ್ಲಿಯೇ ಮನೆ ಪಾಠ, ವಾಟ್ಸ್‌ಆ್ಯಪ್‌ ತರಗತಿ ಪ್ರಾರಂಭಿಸಿ ಮಾದರಿ ಹೆಜ್ಜೆ ಇರಿಸಲಾಗಿತ್ತು!

Advertisement

ಇಲ್ಲಿನ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಬಿಆರ್‌ಸಿಯ ಬಿಆರ್‌ಪಿಗಳು ಮತ್ತು ಶಿಕ್ಷಕರ ತಂಡ ಈ ಪ್ರಯತ್ನಕ್ಕೆ ಚಾಲನೆ ನೀಡಿತ್ತು. ವಾಟ್ಸ್‌ಆ್ಯಪ್‌, ನೆಟ್‌ವರ್ಕ್‌ ಇರುವ ಕಡೆ ಖಾಸಗಿ ಶಾಲೆಗಳು ಹೆತ್ತವರ ಗುಂಪು ಮಾಡಿ ಪ್ರತೀದಿನ ಟಾಸ್ಕ್ ನೀಡಲಾಗುತ್ತಿದೆ. ಆದರೆ ಸರಕಾರಿ ಶಾಲೆಯ, ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳ ಕಲಿಕೆಯ ಬಗ್ಗೆ ಹೆತ್ತವರಿಗೆ ಆತಂಕ ಇತ್ತು. ಸುಳ್ಯದಲ್ಲಿ ಶಿಕ್ಷಣ ಇಲಾಖೆ ಇದನ್ನು ನಿವಾರಿಸಿದೆ.

ಮಕ್ಕಳ ಮನೆಗೆ ಮಾಸ್ಟ್ರೆ!
ಸರಕಾರಿ ಶಾಲಾ ಶಿಕ್ಷಕರ ತಂಡವು ಮಕ್ಕಳಿಗೆ ಹೇಗೆ ಪಾಠ ಮಾಡಬಹುದು ಎಂಬ ಯೋಜನೆ ರೂಪಿಸಿತು. ಮೇ ಅಂತ್ಯದ ವೇಳೆಗೆ ಸರಕಾರಿ ಶಾಲಾ ವಿದ್ಯಾರ್ಥಿಗಳ ಹೆತ್ತವರ ಜತೆ ಮಾತುಕತೆ ನಡೆಸಲಾಯಿತು. ವಾಟ್ಸ್‌ಆ್ಯಪ್‌ ಇರುವ ಹೆತ್ತವರ ಗುಂಪು ರಚಿಸಿ, ಮಕ್ಕಳಿಗೆ ಟಾಸ್ಕ್ ಕೊಟ್ಟು ಬರೆಸಲು ಹೇಳಿದರು. ಅನಂತರ ನೆಟ್‌ವರ್ಕ್‌ ಮತ್ತು ವ್ಯಾಟ್ಸ್‌ಆ್ಯಪ್‌ ಇಲ್ಲದವರ ಮನೆಗೆ ತೆರಳಿ ಪಾಠಕ್ಕೆ ಸಿದ್ಧರಾಗುವಂತೆ ಮಕ್ಕಳಿಗೆ ಸೂಚಿಸಲಾಯಿತು. ಜೂನ್‌ ಮೊದಲ ವಾರದಿಂದಲೇ ಶಿಕ್ಷಕರು ಮನೆ ಮನೆಗೆ ತೆರಳಿ ಪಾಠ ಮಾಡಿದರು, ಬರೆಯಿಸಿದರು, ಓದಿಸಿದರು. ಪರಿಸರ ಅಧ್ಯಯನ, ಇವಿಎಸ್‌, ಇಂಗ್ಲಿಷ್‌ ಮೊದಲಾದವುಗಳ ಬಗ್ಗೆ ವೀಡಿಯೋ ಮಾಡಿ ನೀಡಿದರು. ಇದರಿಂದ ಸಿಂಕ್ರೋನಸ್‌ (ನೇರ) ಆನ್‌ಲೈನ್‌ ತರಗತಿಗೆ ನೆಟ್‌ವರ್ಕ್‌, ವಿದ್ಯುತ್‌ ಅಲಭ್ಯತೆಯಿಂದ ಉಂಟಾಗಬಹುದಾದ ಸಮಸ್ಯೆಯನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ.

ನೆಟ್‌ವರ್ಕ್‌, ವಿದ್ಯುತ್‌ ಸಮಸ್ಯೆ ಇದ್ದಲ್ಲಿ ಮನೆಪಾಠ
ಹಾಲೆಮಜಲು, ದೇವರಕಾನ, ಕೋಲ್ಚಾರು, ಅಚಪ್ಪಾಡಿ, ಮೆಟ್ಟಿನಡ್ಕ, ಮಡಪ್ಪಾಡಿ, ಬೆಳ್ಳಾರೆ, ವಳಲಂಬೆ, ಗುತ್ತಿಗಾರು, ಹಾಡಿಕಲ್ಲು, ವಾಲ್ತಾಜೆ, ಕರಂಗಲ್ಲು, ಐನೆಕಿದು, ಪೆರುವಾಜೆ, ಪಡಿ³ನಂಗಡಿ, ಪಾಂಡಿಗದ್ದೆ, ಕೇನ್ಯ, ಪೈಕ, ತಂಟೆಪ್ಪಾಡಿ ಇತ್ಯಾದಿ ತಾ|ನ ಗ್ರಾಮೀಣ ಭಾಗಗಳು. ಇಲ್ಲೆಲ್ಲ ನೆಟ್‌ವರ್ಕ್‌ ಸಮಸ್ಯೆ ಇದ್ದು, ಇಲ್ಲಿನ ಶಾಲೆಗಳ ಶಿಕ್ಷಕರು ನಿರಂತರ ಪ್ರಯತ್ನ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕೆಲವು ಸರಕಾರಿ ಶಾಲೆಗಳ ಶಿಕ್ಷಕರೂ ಗ್ರಾಮೀಣ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಮಾಡಿದ್ದಾರೆ.

ಸುಳ್ಯದ ಸರಕಾರಿ ಶಾಲೆಗಳ ಎಲ್ಲ ಮಕ್ಕಳಿಗೂ ಕಲಿಕೆಯಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಜೂನ್‌ನಿಂದಲೇ ಶಿಕ್ಷಕರೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ಇದನ್ನು ಮುಂದುವರಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಮೊದಲ ಪ್ರಯತ್ನ ಇದು, ಹೀಗಾಗಿ ಉತ್ತಮ ಪ್ರಗತಿ ಸಾಧ್ಯವಾಗಿದೆ.
– ಮಹದೇವ ಎಸ್‌.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next