Advertisement

ಕನಕಮಜಲು: ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ಅಸಾಧ್ಯ

11:34 AM Sep 08, 2022 | Team Udayavani |

ಸುಳ್ಯ: ತಾಲೂಕು ಕೇಂದ್ರದಿಂದ ಅಲ್ಪ ದೂರದಲ್ಲಿರುವ ಹಾಗೂ ಪುತ್ತೂರು ತಾಲೂಕು, ಕೇರಳ ರಾಜ್ಯದ ಗಡಿಯಲ್ಲಿರುವ ಗ್ರಾಮ ಕನಕಮಜಲು. ಕೇವಲ ಒಂದು ಗ್ರಾಮ ಹಾಗೂ ಎರಡು ವಾರ್ಡ್‌ಗಳನ್ನು ಒಳಗೊಂಡ ಗ್ರಾಮ ಪಂಚಾಯತ್‌ ಇದು.

Advertisement

ವ್ಯಾಪ್ತಿ ಸಣ್ಣದು. ವಿಶೇಷ ಕಾರ್ಯ ಯೋಜನೆಗಳ ಅನುಷ್ಠಾನದಿಂದ ರಾಷ್ಟ್ರ ಮಟ್ಟಕ್ಕೂ ತನ್ನ ಕೀರ್ತಿ ವಿಸ್ತರಿಸಿದ ವಿಶಿಷ್ಟವಾದ ಗ್ರಾಮ.

ಗ್ರಾಮದಲ್ಲಿ ಈ ಹಿಂದೆ ಇಲ್ಲಿನ ಬಹುತೇಕ ಕೃಷಿಕರು ಬತ್ತವನ್ನು ಬೆಳೆಯುತ್ತಿದ್ದರು. ಹೆಚ್ಚಿನ ಮಜಲು ಪ್ರದೇಶ ಇಲ್ಲಿತ್ತು. ಬಳಿಕ ಗದ್ದೆಗಳು ಕಣ್ಮರೆಯಾಗತೊಡಗಿ ವಾಣಿಜ್ಯ ಬೆಳೆಗಳು ಕಾಣಿಸತೊಡಗಿದವು. ಮಜಲು ಪ್ರದೇಶ ಹೆಚ್ಚಿದ್ದರಿಂದ ಇಲ್ಲಿಗೆ ಕನಕಮಜಲು ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಹಿರಿಯರು. ಇಲ್ಲಿನ ನಿಶಾನಿ ಗುಡ್ಡೆ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಇಲ್ಲೇ ಮಾಯಿಲ ಕೋಟೆ ಎಂಬ ಹೆಸರಿನ ಕೋಟೆ ಇತ್ತು ಎಂಬುದಕ್ಕೆ ಕುರುಹುಗಳು ಇದೆ ಎನ್ನುತ್ತಾರೆ ಹಿರಿಯರು.

ಗ್ರಾಮದಲ್ಲಿ ಜನಸಂಖ್ಯೆ 2436. 3 ಸರಕಾರಿ ಪ್ರಾಥಮಿಕ ಶಾಲೆಗಳು, ಆರೋಗ್ಯ ಉಪಕೇಂದ್ರವಿದೆ.

ಇಂತಿರುವ ಗ್ರಾಮ ಇನ್ನಷ್ಟು ಸುಸಜ್ಜಿತ ಗೊಳ್ಳಬೇಕಾದರೆ ಈಡೇರಬೇಕಾದ ಹಲವು ಬೇಡಿಕೆಗಳಿವೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಕನಕಮಜಲು ಅಷ್ಟಾಗಿ ದೊಡ್ಡ ಪ್ರಮಾಣದ ಪೇಟೆಯನ್ನು ಹೊಂದಿಲ್ಲ. ಆದರೆ ಅಭಿವೃದ್ಧಿಯ ನೀರು ಹರಿಯಬೇಕಿದೆ.

Advertisement

ರಸ್ತೆ ಸಮಸ್ಯೆಯೇ ಅಧಿಕ

ಗ್ರಾಮದಲ್ಲಿ ಹಲವೆಡೆ ಸಂಪರ್ಕ ರಸ್ತೆಗಳಿದ್ದರೂ ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿಯಾಗಿಲ್ಲ. ಹಲವು ಸಂಪರ್ಕ ರಸ್ತೆಗಳು ತೀರ ಹದಗೆಟ್ಟು ಸಂಪರ್ಕಕ್ಕೆ ಯೋಗ್ಯವಿಲ್ಲ. ಕೆಲವೇ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಿದ್ದು ಬಿಟ್ಟರೆ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಕನಕಮಜಲು-ದೇರ್ಕಾಜೆ ರಸ್ತೆಗೆ ಹಲವು ವರ್ಷಗಳ ಹಿಂದೆ ಡಾಮರು ಹಾಕಲಾಗಿದೆ. ಈಗ ಡಾಮರು ಎದ್ದು ಹೋಗಿ ಸಂಚರಿಸದಂತಾಗಿದೆ. ಕನಕಮಜಲು- ನೆಡಿಲು ಸಂಪರ್ಕ ರಸ್ತೆಯಲ್ಲಿ ಕೆಲವೆಡೆ ಕಾಂಕ್ರೀಟ್‌ ಹಾಕಲಾಗಿದೆ. ಉಳಿಕೆ ಭಾಗದಲ್ಲೂ ರಸ್ತೆ ಅಭಿವೃದ್ಧಿ ಬೇಡಿಕೆ. ಕನಕಮಜಲು- ಕಾರಿಂಜ ರಸ್ತೆ, ಕನಕಮಜಲು-ಅಕ್ಕಿಮಲೆ ರಸ್ತೆ, ಕನಕಮಜಲು-ಆನೆಗುಂಡಿ ರಸ್ತೆ(ಸಿಆರ್‌ಸಿ) ಇವುಗಳ ಅಭಿವೃದ್ಧಿ ತುರ್ತಾಗಿ ಆಗಬೇಕೆಂಬುದು ಜನರ ಹಲವು ವರ್ಷಗಳ ಬೇಡಿಕೆ. ಕೆಲವೆಡೆ ಅರಣ್ಯ ಇಲಾಖೆ ಆಕ್ಷೇಪವೂ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ದೂರೂ ಇದೆ.

ಸಂಪರ್ಕ ಸೇತು ಬೇಡಿಕೆ

ಇಲ್ಲಿನ ಅಗೊಲ್ತೆ ಎಂಬಲ್ಲಿ ಹರಿಯುವ ತೋಡಿಗೆ ಬೇಸಗೆಯಲ್ಲಿ ಸ್ಥಳೀಯರೇ ಹಣ ವೆಚ್ಚ ಮಾಡಿ ಮಣ್ಣು ಹಾಕಿ ರಸ್ತೆ ನಿರ್ಮಿಸಿದ್ದರು. ಅದೀಗ ಮಳೆಗೆ ಕೊಚ್ಚಿ ಹೋಗಿದೆ. ಇಲ್ಲಿ ಸಂಪರ್ಕ ಸೇತುವೆ ಅಗತ್ಯವಿದ್ದು, ಸೇತುವೆ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ.

ಅಪಾಯಕಾರಿ ಮರ ತೆರವುಗೊಳಿಸುವುದು, ಕನಕಮಜಲು ಪೇಟೆಯಲ್ಲಿ ಸಮರ್ಪಕ ಚರಂಡಿ ನಿರ್ಮಿಸುವುದು, ಶಾಲಾ ಮಕ್ಕಳ ಸಮಯಕ್ಕೆ ಸುಳ್ಯ-ಕನಕಮಜಲು ಮಧ್ಯೆ ಸರಕಾರಿ ಬಸ್‌ ವ್ಯವಸ್ಥೆ ಕಲ್ಪಿಸುವುದೂ ಸೇರಿದಂತೆ ಹಲವು ಬೇಡಿಕೆಗಳು ಈಡೇರಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಈ ಮಧ್ಯೆ ಗ್ರಾಮಕ್ಕೆ ವ್ಯವಸ್ಥಿತ ಶ್ಮಶಾನ, ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ ಆಡಳಿತ ಕಾರ್ಯ ನಿರತವಾಗಿದೆ.

ರಾಷ್ಟ್ರಮಟ್ಟದಲ್ಲೂ ಕೀರ್ತಿ

ಈ ಗ್ರಾಮ ಪಂಚಾಯತ್‌ ತನ್ನ ವಿಶೇಷ ಯೋಜನೆಗಳಿಂದ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿದೆ. 2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನ ಪ್ರಶಸ್ತಿ, 2020ರ ಸಾಲಿನ ಪ್ರಗತಿ ಆಧರಿಸಿ ಕೇಂದ್ರ ಪುರಸ್ಕೃತ ದೀನದಯಾಳ್‌ ಪಂಚಾಯತ್‌ ಸಶಕ್ತೀಕರಣ ಪ್ರಶಸ್ತಿಯಾದ ನಾನಾಜಿ ದೇಶ್‌ ಮುಖ್‌ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ, 2014-15ನೇ ಸಾಲಿನಲ್ಲಿ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಈ ಗ್ರಾ. ಪಂ. ಗೆ ಬಂದಿದೆ.

ಜಾಗ ಗುರುತಿಸಿಕೊಟ್ಟಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ: ಗ್ರಾಮಕ್ಕೆ ವ್ಯವಸ್ಥಿತ ಶ್ಮಶಾನ ಆಗಬೇಕಿದೆ. ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಂದಾಯ ಇಲಾಖೆಗೆ ಜಾಗ ಗುರುತಿಸುವಂತೆ ತಿಳಿಸಿದ್ದರೂ ಆಕ್ಷೇಪ ರಹಿತ ಜಾಗ ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಾಗ ಗುರುತಿಸಿಕೊಟ್ಟಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಲಾಗುವುದು. –ಶ್ರೀಧರ್‌ ಕುತ್ಯಾಳ, ಅಧ್ಯಕ್ಷರು, ಗ್ರಾ.ಪಂ. ಕನಕಮಜಲು

ಸಂಚಾರಕ್ಕೆ ಅನುಕೂಲ: ಅಗೊಲ್ತೆ ಎಂಬಲ್ಲಿಗೆ ಸಂಪರ್ಕಿಸುವಲ್ಲಿ ಸ್ಥಳೀಯರ ಸಹಕಾರದಿಂದ ರಸ್ತೆ ನಿರ್ಮಿಸಲಾಗಿದೆ. ಇಲ್ಲಿನ ತೋಡಿಗೆ ಸೇತುವೆ ನಿರ್ಮಾಣವಾಗಬೇಕಿದ್ದು, ಸೇತುವೆ ನಿರ್ಮಾಣಗೊಂಡಲ್ಲಿ ಸಂಚಾರಕ್ಕೆ ಅನುಕೂಲವಾಗಲಿದೆ. –ಸುಧೀರ್‌ ಅಗೊಲ್ತೆ, ಸ್ಥಳೀಯರು

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next