Advertisement

ಸುಳ್ಯ: ಡಿಪೋ ಆದರೂ ಸುಧಾರಣೆ ಕಾಣದ ಸಾರಿಗೆ ವ್ಯವಸ್ಥೆ 

11:57 AM Mar 24, 2018 | |

ಸುಬ್ರಹ್ಮಣ್ಯ: ಸುಳ್ಯದ ಬಹುನಿರೀಕ್ಷಿತ ಸಾರಿಗೆ ಬಸ್‌ ಡಿಪೋ ಕನಸು ಕೊನೆಗೂ ಈಡೇರಿದೆ. ಆದರೆ, ಗ್ರಾಮೀಣ ಭಾಗದ ಜನರ ಅನುಕೂಲಕ್ಕೆ ತಕ್ಕಂತೆ ಇನ್ನೂ ಸಾಕಷ್ಟು ಬಸ್‌ ಒದಗಿಸಿಲ್ಲ. ಹೀಗಾಗಿ, ಖಾಸಗಿ ವಾಹನಗಳಲ್ಲಿ ಜೋತಾಡುತ್ತ ಪ್ರಯಾಣಿಸುವುದು ಅವರಿಗೆ ಅನಿವಾರ್ಯವಾಗಿದೆ.

Advertisement

ನಗರದಿಂದ ಒಂದು ಕಿ.ಮೀ. ದೂರದ ಕಾಯರ್ತೋಡಿ ಬಳಿ 3 ಎಕರೆ ಜಾಗದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನೂತನ ಸಾರಿಗೆ ಡಿಪೋ ನಿರ್ಮಾಣಗೊಂಡಿದೆ. ಅದ್ದೂರಿ ಉದ್ಘಾಟನೆಯೂ ನಡೆದಿದೆ. ಆಗ ಸಹಜವಾಗಿಯೇ ಸುಳ್ಯದ ಜನತೆ ಸಂಭ್ರಮಪಟ್ಟಿದ್ದರು. ಗ್ರಾಮೀಣ ಪ್ರದೇಶಗಳ ಸಾರಿಗೆ ಸಮಸ್ಯೆ ನಿವಾರಣೆ ಆಗಬಹುದೆಂದು ಆಶಾ ಭಾವನೆ ಹೊಂದಿದ್ದರು. ಉದ್ಘಾಟನೆಯಾಗಿ ವರ್ಷ ಸಮೀಪಿಸುತ್ತಿದೆ. ಸಂಚಾರ ವ್ಯವಸ್ಥೆಯಲ್ಲಿ ಇನ್ನು ಹೇಳಿಕೊಳ್ಳುವ ಬದಲಾವಣೆ ಆಗಿಲ್ಲ. ಅಂದು ಖುಷಿಯಿಂದ ಸ್ವಾಗತಿಸಿದ ಜನರ ಆಸೆಗೀಗ ತಣ್ಣೀರು ಬಿದ್ದಿದೆ.

ಸುಳ್ಯದಲ್ಲಿ ಡಿಪೋ ಕಾರ್ಯ ನಿರ್ವಹಿಸುತ್ತಿದ್ದರೂ ತಾಲೂಕಿನ ಗಡಿ ಗ್ರಾಮಗಳಾದ ಕೊಲ್ಲಮೊಗ್ರ, ಕಲ್ಮಕಾರು, ಬಾಳುಗೋಡು, ಮಡಪ್ಪಾಡಿ, ಮಂಡೆಕೋಲು ಹಾಗೂ ಗ್ರಾಮೀಣ ಪ್ರದೇಶದ ಮರ್ಕಂಜ, ಆಲೆಟ್ಟಿ, ಕುಕ್ಕುಜಡ್ಕ, ಚೊಕ್ಕಾಡಿ ಭಾಗದ ಜನತೆ ತಮ್ಮ ಪ್ರಯಾಣಕ್ಕಾಗಿ ಖಾಸಗಿ ವಾಹನಗಳಾದ ಟೆಂಪೋ, ಜೀಪ್‌ಗ್ಳನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದಾರೆ.

ಡಿಪೋ ಆಗುವ ಮೊದಲು ಇಲ್ಲಿನ ನಿಲ್ದಾಣಕ್ಕೆ ನಿತ್ಯ 290 ಬಸ್‌ಗಳು ಬಂದು ಹೋಗುತ್ತಿದ್ದವು. ಈಗ 25 ಬಸ್‌ಗಳು ಹೆಚ್ಚಿ,315 ಬಸ್‌ಗಳು ಬರುತ್ತಿವೆ. ಈ ಪೈಕಿ ಹುಬ್ಬಳ್ಳಿ, ಗೋಕರ್ಣ, ಕಾರವಾರ, ಶಿವಮೊಗ್ಗ, ಚಳ್ಳಕೆರೆ, ಬಿಸಿಲೆ-ಮೈಸೂರು, ಬಿಸಿಲೆ – ಬೆಂಗಳೂರು ಮಾರ್ಗಗಳ ಜತೆಗೆ ಹೆಚ್ಚುವರಿ ಎಂದು ಸುಬ್ರಹ್ಮಣ್ಯ-5, ಉಬರಡ್ಕ-1 ಮಂಡೆಕೋಲು-1, ಮಡಪ್ಪಾಡಿ-1 ಬಸ್‌ ಓಡಾಟ ವ್ಯವಸ್ಥೆಯಷ್ಟೆ ಆಗಿದೆ. ಗ್ರಾಮೀಣ ರೂಟ್‌ಗಳಿಗೆ ನಿಗಮ ಬಸ್‌ಗಳನ್ನು ಹಾಕಿಲ್ಲ. ಇರುವ ಬಸ್‌ಗಳೂ ಸರಿಯಾಗಿ ಓಡಾಟ ನಡೆಸುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಶಾಲಾ ಮಕ್ಕಳಿಗೆಂದು ಮೀಸಲಾಗಿರುವ ಬಸ್‌ಗಳೂ ಕೈಕೊಟ್ಟು ಮಕ್ಕಳು ದಾರಿಮಧ್ಯೆ ಪರದಾಡುವುದು ಕಂಡುಬರುತ್ತಿದೆ.

ಗುತ್ತಿಗಾರು- ಬಳ್ಳಕ- ಪಂಜ, ಚೊಕ್ಕಾಡಿ- ಪಾಜೆಪಳ್ಳ-ಬೆಳ್ಳಾರೆ, ಸುಬ್ರಹ್ಮಣ್ಯ- ಐನೆಕಿದು- ಹರಿಹರ, ಗುತ್ತಿಗಾರು- ಕಂದ್ರಪ್ಪಾಡಿ- ಮಡಪ್ಪಾಡಿ, ಅರಂತೋಡು- ಮರ್ಕಂಜ ಮುಂತಾದ ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ ಕೆಲ ಅವಧಿಗೆ ಸೀಮಿತವಾಗಿ ಬಸ್‌ಗಳು ಸಂಚರಿಸುತ್ತವೆ. ಇಲ್ಲೆಲ್ಲ ಇಂದಿಗೂ ಜೀಪ್‌, ವ್ಯಾನುಗಳಲ್ಲಿ ನೇತಾಡುತ್ತ ಜನ ಓಡಾಡುತ್ತಾರೆ. ರಾತ್ರಿ 7ರಿಂದ 8 ಗಂಟೆ ಒಳಗಡೆ ಸುಳ್ಯ ನಿಲ್ದಾಣದಿಂದ ಬಸ್‌ ಸಂಚಾರ ಸ್ಥಗಿತಗೊಳ್ಳುತ್ತದೆ. ಸುಳ್ಯದಿಂದ ದೂರದ ಊರುಗಳಿಗೆ ಬಸ್‌ಗಳ ಓಡಾಟ ಹೆಚ್ಚಿಸಿರುವ ನಿಗಮವು ಗ್ರಾಮೀಣ ಜನರಿಗೆ ಬಸ್‌ ಸೌಲಭ್ಯ ಒದಗಿಸುವಲ್ಲಿ ಹಿಂದೆ ಬಿದ್ದಿದೆ.

Advertisement

ಕಾಯರ್ತೋಡಿಯಲ್ಲಿ ಹೊಂದಿರುವ ಡಿಪೋ 50 ಬಸ್‌ಗಳು ನಿಲ್ಲುವ ಸಾಮರ್ಥ್ಯ ಹೊಂದಿದೆ. ಮುಖ್ಯ ಕಟ್ಟಡ, ಶೌಚಾಲಯ, ಸ್ಯಾನಿಟರಿ, ಇಂಧನ ಕೊಠಡಿ, ಭದ್ರತೆ ಶಾಖೆ, ಬಸ್‌ ದುರಸ್ತಿ ವಿಭಾಗ, ಆಯಿಲ್‌ ಕಿಯೋಸ್ಕ್, ವಾಹನ ಪಾರ್ಕಿಂಗ್‌, ತಡೆಗೋಡೆ ವ್ಯವಸ್ಥೆಗಳಿವೆ. ಮುಂದೆ ವಿಶ್ರಾಂತಿ ಕೊಠಡಿ ಹಾಗೂ ಸಿಬಂದಿ ವಸತಿಗೃಹ ನಿರ್ಮಾಣಗೊಳ್ಳಲಿಕ್ಕಿದೆ.

ಬದಲಾವಣೆ ಆಗಿಲ್ಲ
ಸುಳ್ಯ-ಪುತ್ತೂರು ನಡುವೆ ಬೆಳಗ್ಗೆ 6ರಿಂದ ರಾತ್ರಿ 8.30ರ ತನಕ ಪ್ರತಿ 15 ನಿಮಿಷಕ್ಕೆ ಒಂದು ಬಸ್‌ ಸಂಚರಿಸುತ್ತಿದೆ. ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಹಾಗೂ ಕೇರಳ ಭಾಗಕ್ಕೆ ಬಸ್‌ಗಳ ವ್ಯವಸ್ಥೆಯಿದೆ. ಗ್ರಾಮೀಣ ಭಾಗದ ಸಾರಿಗೆ ಸ್ಥಿತಿ ಮಾತ್ರ ಕಿಂಚಿತ್ತೂ ಸುಧಾರಿಸಿಲ್ಲ.

ಹೆಚ್ಚುವರಿ ಬಸ್‌ಗೆ ಬೇಡಿಕೆಯಿದೆ
ಗ್ರಾಮಾಂತರ ಪ್ರದೇಶಗಳಾದ ಉಬರಡ್ಕ, ಕೋಲ್ಚಾರು, ಚೊಕ್ಕಾಡಿ, ಬೆಳ್ಳಾರೆ- ಸುಬ್ರಹ್ಮಣ್ಯ, ಗುತ್ತಿಗಾರು, ಕಂದ್ರಪ್ಪಾಡಿ, ಮಂಡೆಕೋಲು, ಸಂಪಾಜೆ, ಪೇರಾಲು, ಕೊಲ್ಲಮೊಗ್ರು, ಮರ್ಕಂಜ ಮಡಪ್ಪಾಡಿ ಬಸ್‌ ಓಡಾಟವಿದೆ. ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಭಾಗದ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಬೇಡಿಕೆ ಇದೆ. 

ಹಂತಹಂತವಾಗಿ ಕ್ರಮ
ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಈ ಮಾರ್ಗಗಳಲ್ಲಿ ಬಸ್‌ ಓಡಾಟ ಹಿಂದಿಗಿಂತ ಹೆಚ್ಚಳವಾಗಿದೆ. ಇತರೆಡೆಗಳಿಗೆ ವ್ಯವಸ್ಥೆಗಳು ಹಂತಹಂತವಾಗಿ ಆಗಲಿವೆ. ಆದಾಯ ಸಂಗ್ರಹ ಹಾಗೂ ಸಿಬಂದಿ ಸಮಸ್ಯೆ ಇದೆ.
– ವಸಂತ್‌ ನಾಯಕ್‌
ಘಟಕ ವ್ಯವಸ್ಥಾಪಕ, ಸುಳ್ಯ 

ಖಾಸಗಿಗೆ ಮೊರೆ ಅನಿವಾರ್ಯ
ಗ್ರಾಮೀಣ ಭಾಗಕ್ಕೆ ಸಾಕಷ್ಟು ಬಸ್‌ ವ್ಯವಸ್ಥೆ ಕಲ್ಪಿಸಬೇಕು, ಸರಕಾರಿ ಬಸ್‌ನ ವ್ಯವಸ್ಥೆ ಇದ್ದಲ್ಲಿ ಜನ ಅದನ್ನೇ ಆಶ್ರಯಿಸಿ ಪ್ರಯಾಣಿಸುತ್ತಾರೆ. ಅದು ಕೈ ಕೊಟ್ಟಾಗ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.
ಯೋಗೀಶ ಮಡಪ್ಪಾಡಿ,
   ನಾಗರಿಕ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next