Advertisement

Sulya:ಕಲ್ಲು ಎತ್ತಿ ಹಾಕಿ ಮಹಿಳೆಯ ಕೊಲೆ ಪ್ರಕರಣ;ಕುಡಿದ ಮತ್ತಿನಲ್ಲಿ ಕೃತ್ಯ: ಆರೋಪಿಯ ಬಂಧನ

09:16 PM Jun 11, 2024 | Team Udayavani |

ಸುಳ್ಯ: ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಿಳೆಯ ಕೊಲೆಗೈದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಬೆಳ್ಳಾರೆಯ ಪಾಟಾಜೆಯ ನಳಿನಿ ಅವರನ್ನು ರವಿವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪಿ ಕಲ್ಮಡ್ಕದ ಜೋಗಿಯಡ್ಕದ ವೆಂಕಪ್ಪ ಅವರ ಪುತ್ರ ಜಯರಾಮ ನಾಯ್ಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ

ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಅವರ ಪತ್ನಿ ನಳಿನಿ (55) ಅವರನ್ನು ರವಿವಾರ ರಾತ್ರಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

2 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ನಳಿನಿ ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು ಹಾಗೂ ಬಸ್‌ ತಂಗುದಾಣ, ಅಂಗಡಿಗಳ ಎದುರು ರಾತ್ರಿ ಕಳೆಯುತ್ತಿದ್ದರು. ಅವರಂತೆಯೇ ಮದ್ಯ ವ್ಯಸನಿಯಾಗಿದ್ದ ಜಯರಾಮ ನಾಯ್ಕ ಕೂಡ ಮನೆ ಬಿಟ್ಟಿದ್ದು, ಬಸ್‌ ತಂಗುದಾಣ, ಮಾರುಕಟ್ಟೆಯಲ್ಲಿ ರಾತ್ರಿ ತಂಗುತ್ತಿದ್ದ.

Advertisement

ರವಿವಾರ ರಾತ್ರಿ ನಳಿನಿ ಮತ್ತು ಜಯರಾಮ ಎಪಿಎಂಸಿ ಮಾರುಕಟ್ಟೆಯಲ್ಲಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ತೆರಳಿದಾಗ ನಳಿನಿ ಅವರ ಕಾಲಿಗೆ ಕಾಲು ತಾಗಿತೆಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ.

ಮದ್ಯದ ಅಮಲಿನಲ್ಲಿ ಜಯರಾಮ ಅಲ್ಲೇ ಇದ್ದ ಕಲ್ಲನ್ನು ಎತ್ತಿ ಹಾಕಿ ಅಲ್ಲೇ ಮಲಗಿದ್ದ. ಜಯರಾಮ ಬೆಳಗ್ಗೆ ಎದ್ದು ನೋಡಿದಾಗ ಮಹಿಳೆ ಮೃತಪಟ್ಟಿರುವ ವಿಚಾರ ತಿಳಿದು ತತ್‌ಕ್ಷಣ ತಲೆಮರೆಸಿಕೊಂಡಿದ್ದ.

ಪ್ರಕರಣದ ತನಿಖೆ ಆರಂಭಿಸಿದ ಬೆಳ್ಳಾರೆ ಪೊಲೀಸರಿಗೆ ನಳಿನಿ ಅವರಂತೆಯೇ ಎಲ್ಲೆಂದರಲ್ಲಿ ಮಲಗಿ ದಿನಕಳೆಯುವ ಜಯರಾಮನ ಮೇಲೆ ಸಂಶಯ ಬಂದಿತ್ತು. ಹುಡುಕಿದಾಗ ಪರಿಸರದಲ್ಲೆಲ್ಲೂ ಆತನ ಪತ್ತೆಯಾಗಲಿಲ್ಲ. ಬಳಿಕ ಮಂಗಳವಾರ ಜೋಗಿಯಡ್ಕದಲ್ಲಿ ಆತ ಇರುವುದು ಗೊತ್ತಾಗಿ ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತಾನೇ ಆಕೆಯ ಮೇಲೆ ಕಲ್ಲೆತ್ತಿ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಬೆಳ್ಳಾರೆ ಎಸ್‌ಐ ಸಂತೋಷ್‌ ಬಿ.ಪಿ. ಹಾಗೂ ಪೊಲೀಸ್‌ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next