ಸುಳ್ಯ : ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆ ಯಿತು. ಪ್ರಭಾರ ತಹಶೀಲ್ದಾರ್ ಸಂತೋಷ್ ಕುಮಾರ್ ಚುನಾವಣಾಧಿಕಾರಿ ಆಗಿ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ದೀಪಕ್ ಕುತ್ತಮೊಟ್ಟೆ, ಉಪಾ ಧ್ಯಕ್ಷರಾಗಿ ಸಂತೋಷ್ ಜಾಕೆ ಅವಿರೋಧವಾಗಿ ಆಯ್ಕೆಗೊಂಡರು. ಎರಡು ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ಚುನಾ ವಣಾಧಿಕಾರಿ ಪ್ರಕಟಿಸಿದರು.
ಒಟ್ಟು 13 ಸ್ಥಾನಗಳನ್ನು ಹೊಂದಿರುವ ಎಪಿಎಂಸಿಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಹೊಂದಿದೆ. ಒಬ್ಬರು ಪಕ್ಷೇತರರಿದ್ದಾರೆ. ಮೊದಲ 20 ತಿಂಗಳ ಅವಧಿಗೆ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷ, ಸುಕನ್ಯಾ ಭಟ್ ಉಪಾಧ್ಯಕ್ಷರಾಗಿದ್ದರು. 20 ತಿಂಗಳ ಎರಡನೇ ಅವಧಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದೀಪಕ್ ಕುತ್ತಮೊಟ್ಟೆ ಅವರಿಗೆ ಸೂಚಕರಾಗಿ ಸದಸ್ಯ ವಿನಯ ಕುಮಾರ್ ಎಂ.ಟಿ., ಅನುಮೋದಕರಾಗಿ ಜಯಲಕ್ಷ್ಮೀ; ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಂತೋಷ್ ಜಾಕೆ ಅವರಿಗೆ ಬಾಲಕೃಷ್ಣ ಎಂ. ಸೂಚಕ ಮತ್ತು ಕೆ. ಜಯಪ್ರಕಾಶ್ ಅನುಮೋದಕರಾಗಿದ್ದರು.
ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಎಪಿಎಂಸಿ ಸದಸ್ಯ ನವೀನ್ ಸಾರಕರೆ ಅಭಿನಂದಿಸಿ ಮಾತನಾಡಿದರು.
ಎಪಿಎಂಸಿ ನಿರ್ಗಮಿತ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಮಾತನಾಡಿ, ಎಪಿಎಂಸಿ ಅಧ್ಯಕ್ಷರಿಗೆ ಅಧಿಕಾರ ನೀಡಬೇಕು. ಪ್ರಸ್ತುತ ಸಹಿ ಹಾಕುವ ಕೆಲಸ ಮಾತ್ರ ಇದೆ. ಹೆಚ್ಚಿನ ಅಧಿಕಾರ ನೀಡಿದಲ್ಲಿ ಜನಪರ ಯೋಜನೆ ಹಮ್ಮಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್ ಜಾಕೆ ಮಾತನಾಡಿ, ಕೃಷಿಕರ ನಿರೀಕ್ಷೆಗೆ ತಕ್ಕಂತೆ ಎಲ್ಲರ ಸಹಕಾರ ಪಡೆದು ಉತ್ತಮ ಆಡಳಿತ ನೀಡುತ್ತೇವೆ. ಆನ್‌ಲೈನ್ ಟ್ರೇಡಿಂಗ್ ಆರಂಭಿಸುವ ಯೋಜನೆ ಇದೆ ಎಂದು ಹೇಳಿದರು.
ಆಯ್ಕೆ ಪ್ರಕ್ರಿಯೆ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಚಂದ್ರಕಾಂತ್, ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್, ಎಪಿಎಂಸಿ ಸದಸ್ಯರು ಉಪಸ್ಥಿತರಿದ್ದರು.