ಮಹಾನಗರ: ಮಂಗಳೂರು ಬಂದರಿನಲ್ಲಿ ಬೋಟ್‌ಗಳ ಒತ್ತಡ ನಿವಾರಣೆಗಾಗಿ ಮೀನುಗಾರರ ಬಹುದಿನಗಳ ಬೇಡಿಕೆಯಾದ ನಗರದ ಸುಲ್ತಾನ್‌ಬತ್ತೇರಿ ಸಮೀಪದ ಬೋಳೂರು ಬೊಕ್ಕಪಟ್ಣದಲ್ಲಿ ನಿರ್ಮಾಣಗೊಂಡಿರುವ ಮೀನುಗಾರಿಕಾ ಜೆಟ್ಟಿ ಮಾ. 22ರಂದು ಉದ್ಘಾಟನೆಗೊಳ್ಳಲಿದೆ. ರಾಜ್ಯ ಮೀನು
ಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸಲಿದ್ದಾರೆ.
ಮೀನುಗಾರರು ತಮ್ಮ ಮೀನನ್ನು ಮಂಗಳೂರು ಬಂದರಿನಲ್ಲಿ ಇಳಿಸಿ ಬಳಿಕ ಸುಲ್ತಾನ್‌ಬತ್ತೇರಿ ಜೆಟ್ಟಿಯಲ್ಲಿ ಬೋಟ ನ್ನು(ಐಡೆಲ್ ಬರ್ಫಿಂಗ್) ನಿಲ್ಲಿಸಲು ಅನುಕೂಲವಾಗಲಿದೆ. ಸ್ಥಳೀಯ ಶಾಸಕ ಜೆ.ಆರ್. ಲೋಬೋ ಅವರ ಪ್ರಸ್ತಾವನೆಯ ಮೇರೆಗೆ ಇದಕ್ಕೆ ಮೀನುಗಾರಿಕಾ ಇಲಾಖೆಯು ನಬಾರ್ಡ್‌ನ ಆರ್‌ಐಡಿಎಫ್ 19ರ ಮೂಲಕ 100 ಮೀ. ಉದ್ದದ ಜೆಟ್ಟಿ ನಿರ್ಮಾಣಕ್ಕೆ 5 ಕೋ.ರೂ. ಅನುದಾನ ಮಂಜೂರು ಮಾಡಿತ್ತು.
ಐಡೆಲ್ ಬರ್ಫಿಂಗ್ ಜೆಟ್ಟಿ ಎಂದರೆ ಅಲ್ಲಿ ಬೋಟ್‌ನ ಮೀನುಗಳನ್ನು ಅನ್‌ಲೋಡ್ ಮಾಡಲು ಅವಕಾಶವಿಲ್ಲ. ಇಲ್ಲಿ ಕೇವಲ ಬೋಟ್‌ಗಳಿಗೆ ಲಂಗರ್ ಹಾಕಿ ನಿಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಪ್ರಸ್ತುತ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಜೆಟ್ಟಿಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಬೋಟ್‌ಗಳನ್ನು ನಿಲ್ಲಿಸಲು ಇಲ್ಲಿ ಅವಕಾಶವಿರುತ್ತದೆ.
ಬೋಳೂರಿನಲ್ಲಿ ಜೆಟ್ಟಿ ನಿರ್ಮಾಣವಾಗಿರುವುದರಿಂದ ಬೋಳೂರು, ಬೊಕ್ಕ ಪಟ್ಣ ಭಾಗದ ಮೀನುಗಾರರು ತಮ್ಮ ಬೋಟ್‌ಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ. ಹಿಂದೆ ಮೀನುಗಾರರು ತಮ್ಮ ಬೋಟ್ ಗಳನ್ನು ಬಂದರಿನಲ್ಲೇ ನಿಲ್ಲಿಸಿ ವಾಹನದ ಮೂಲಕ ತೆರಳುತ್ತಿದ್ದರು. ಜತೆಗೆ ಬೋಟಿನ ದುರಸ್ತಿ ಕಾರ್ಯಕ್ಕೂ ಇಲ್ಲಿ ಅವಕಾಶವಿರುತ್ತದೆ.