ದುಬೈ: ಸುಮಾರು ನಾಲ್ಕು ದಶಕಗಳ ಕಾಲ ಸುದೀರ್ಘಾವಧಿ ಆಡಳಿತ ನಡೆಸಿದ್ದ ಒಮಾನ್ ಸುಲ್ತಾನ್ (ದೊರೆ) ಖಬೂಸ್ ಬಿನ್ ಸೈದ್ (79) ಶುಕ್ರವಾರ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಖಬೂಸ್ ಮಧ್ಯಪ್ರಾಚ್ಯ ಮತ್ತು ಅರಬ್ ಜಗತ್ತಿನಲ್ಲಿ ಅತೀ ದೀರ್ಘಕಾಲಾವಧಿ ಆಡಳಿತ ನಡೆಸಿದ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಮನ್ ನೂತನ ದೊರೆಯನ್ನು ಆಡಳಿತ ಕುಟುಂಬ ಶೀಘ್ರದಲ್ಲಿಯೇ ಆಯ್ಕೆ ಮಾಡಲಿದೆ ಎಂದು ಗಲ್ಫ್ ದೇಶದ ಉನ್ನತ ಸೇನಾ ಮಂಡಳಿ ತಿಳಿಸಿರುವುದಾಗಿ ಮಾಧ್ಯಮ ವರದಿ ವಿವರಿಸಿದೆ. ಒಮನ್ ನಲ್ಲಿ ಎಲ್ಲಾ ಧರ್ಮಕ್ಕೂ ಮುಕ್ತ ಸ್ವಾತಂತ್ರ್ಯ ನೀಡಿದ್ದ ಖಬೂಸ್ ಅವರು ದೇಶದಲ್ಲಿ ನಾಲ್ಕು ಕ್ಯಾಥೋಲಿಕ್ ಚರ್ಚ್, ಪ್ರೊಟೆಸ್ಟಂಟ್ ಚರ್ಚ್ ಹಾಗೂ ಹಲವಾರು ಹಿಂದೂ ದೇವಾಲಯಗಳನ್ನು ನಿರ್ಮಿಸಲು ಹಣಕಾಸು ನೆರವು ನೀಡಿದ್ದರು.
ಒಮನ್ ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. 40 ದಿನಗಳ ಕಾಲ ಒಮನ್ ಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ಸೂಚಿಸಲಾಗುವುದು ಎಂದು ತಿಳಿಸಿದೆ. 1970ರಲ್ಲಿ ಮಾಜಿ ಬ್ರಿಟನ್ ವಸಾಹತಿಶಾಹಿ ನೆರವಿನೊಂದಿಗೆ ರಕ್ತರಹಿತ ಕ್ರಾಂತಿಯಲ್ಲಿ ಖಬೂಸ್ ಒಮನ್ ದೊರೆಯಾಗಿ ನೇಮಕವಾಗಿದ್ದರು.
ಸ್ಟೇಟ್ ನ್ಯೂಸ್ ಏಜೆನ್ಸಿ ಓಎನ್ ಎ ವರದಿ ಪ್ರಕಾರ, ದೊರೆಯ ನಿಧನಕ್ಕೆ ಕಾರಣ ತಿಳಿಸಿಲ್ಲ. ಆದರೆ ಖಬೂಸ್ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದು, ಕಳೆದ ಡಿಸೆಂಬರ್ ನಲ್ಲಿ ಒಂದು ವಾರ ಬೆಲ್ಜಿಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ವರದಿ ತಿಳಿಸಿದೆ.
ಸುಲ್ತಾನ್ ಖಬೂಸ್ 1976ರ ಮಾರ್ಚ್ 22ರಂದು ಸಂಬಂಧಿ ಕಮಿಲಾ ಸಯ್ಯಿದಾ ಬಿನ್ ತಾರಿಖ್ ಅಲ್ ಸೈದ್ ಅವರನ್ನು ವಿವಾಹವಾಗಿದ್ದರು. ಆದರೆ 1979ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ಕಮಿಲಾ 2005ರಲ್ಲಿ ಮತ್ತೊಬ್ಬರ ಜತೆ ಪುನರ್ ವಿವಾಹವಾಗಿದ್ದರು. ಖಬೂಸ್ ದಾಂಪತ್ಯದ ವೇಳೆ ಮಕ್ಕಳು ಜನಿಸಿರಲಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಖಬೂಸ್ ನಿಧನ ನಂತರ ಸುಲ್ತಾನ್ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಖಬೂಸ್ ಅವರು ರಹಸ್ಯ ವಿಲ್ ನಲ್ಲಿ ತನ್ನ ಉತ್ತರಾಧಿಕಾರಿಯ ಹೆಸರನ್ನು ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ. ಅದರಂತೆ ಮುಂದಿನ ಉತ್ತರಾಧಿಕಾರಿ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.