ಇಪೋ (ಮಲೇಶ್ಯ): “ಸುಲ್ತಾನ್ ಅಜ್ಲಾನ್ ಶಾ’ ಹಾಕಿ ಕೂಟದಲ್ಲಿ ಭಾರತ ಅಜೇಯ ಓಟ ಮುಂದುವರಿಸಿ ಫೈನಲ್ ಪ್ರವೇಶಿಸಿದೆ. 6ನೇ ಪ್ರಶಸ್ತಿಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಮಾ. 30ರಂದು ನಡೆಯುವ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ-ದಕ್ಷಿಣ ಕೊರಿಯಾ ಮುಖಾ ಮುಖೀಯಾಗಲಿವೆ. ಇವೆರಡೂ ಕೂಟದ ಅಜೇಯ ತಂಡಗಳಾಗಿವೆ.
ಬುಧವಾರ ನಡೆದ 4ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಕೆನಡಾ ಮೇಲೆ ಸವಾರಿ ಮಾಡಿ 7-3 ಗೋಲುಗಳ ಜಯಭೇರಿ ಮೊಳಗಿಸಿತು.
ಭಾರತ ಪರ ಮನ್‌ದೀಪ್ ಸಿಂಗ್ ಹ್ಯಾಟಿಕ್ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು (20ನೇ, 27ನೇ, 29ನೇ ನಿಮಿಷ). ಉಳಿದಂತೆ ವರುಣ್ (12ನೇ ನಿಮಿಷ), ಅಮಿತ್ ರೋಹಿದಾಸ್ (39ನೇ ನಿಮಿಷ), ವಿವೇಕ್ ಪ್ರಸಾದ್ (55ನೇ ನಿಮಿಷ) ಮತ್ತು ನೀಲಕಂs… ಶರ್ಮ (58ನೇ ನಿಮಿಷ) ಒಂದೊಂದು ಗೋಲು ಹೊಡೆದರು. ಕೆನಡಾ ಪರ ಮಾರ್ಕ್ ಪಿಯರ್ಸನ್ (35ನೇ ನಿಮಿಷ), ಫಿನ್ ಬೂತ್ರಾಯ್ಡ (50ನೇ ನಿಮಿಷ), ಜೇಮ್ಸ್ ವ್ಯಾಲೇಸ್ (57ನೇ ನಿಮಿಷ) ಅವರಿಂದ ಗೋಲು ದಾಖಲಾಯಿತು.
ಪಂದ್ಯದ ಆರಂಭದಲ್ಲೇ ಭಾರತ ಆಕ್ರಮಣಕಾರಿ ಆಟಕ್ಕಿಳಿಯಿತು. 12ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ದ್ವಿತೀಯ ಕ್ವಾರ್ಟರ್‌ನಲ್ಲಿ ಅಮೋಘ ಆಟವಾಡಿದ ಸ್ಟ್ರೈಕರ್ ಮನ್‌ದೀಪ್ 9 ನಿಮಿಷಗಳ ಅಂತರದಲ್ಲಿ 3 ಗೋಲು ಸಿಡಿಸಿದರು. ಈ ಮೂಲಕ 2ನೇ ಕ್ವಾರ್ಟರ್ ಅಂತ್ಯಕ್ಕೆ ಭಾರತ 4-0 ಗೋಲುಗಳ ಮುನ್ನಡೆ ಸಾಧಿಸಿತು. 3ನೇ ಕ್ವಾರ್ಟರ್‌ನ 35ನೇ ನಿಮಿಷದಲ್ಲಿ ಮಾರ್ಕ್ ಪಿಯರ್ಸನ್ ಗೋಲು ಬಾರಿಸಿ ತಂಡದ ಕೆನಾಡಾ ಖಾತೆ ತೆರೆದರು. ಬಳಿಕ ಭಾರತ ಮತ್ತೆ 2 ಗೋಲು ಬಾರಿಸಿ ಕೆನಡಾಗೆ ಆಘಾತವಿಕ್ಕಿತು.
ಕೊನೆಯ ಹಂತದಲ್ಲಿ ಕೆನಡಾ ಎರಡು ಗೋಲು ಬಾರಿಸಿದರೂ ಭಾರತ ಅಷ್ಟೊತ್ತಿಗಾಗಲೇ ಪಂದ್ಯವನ್ನು ತನ್ನತ್ತ ಸೆಳೆದುಕೊಂಡಿತ್ತು. ಈ ಗೆಲುವಿನ ಮೂಲಕ ಲೀಗ್‌ನ ಕೊನೆಯ ಪಂದ್ಯ ಆಡುವ ಮೊದಲೇ ಭಾರತ ಫೈನಲ್ ಪ್ರವೇಶಿಸಿದಂತಾಯಿತು. ಹ್ಯಾಟ್ರಿಕ್ ಗೋಲು ಬಾರಿಸಿದ ಮನ್‌ದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದ. ಕೊರಿಯಾ- ಭಾರತ ಮುಖಾಮುಖೀ
ಬುಧವಾರದ ಅಂತ್ಯಕ್ಕೆ ಭಾರತ ಮತ್ತು ದಕ್ಷಿಣ ಕೊರಿಯಾ ತಲಾ 10 ಅಂಕಗಳೊಂದಿಗೆ ಸಮಬಲದಲ್ಲಿದ್ದರೂ ಗೋಲು ಅಂತರದಲ್ಲಿ ಭಾರತವೇ ಮುಂದಿದೆ.
ಶುಕ್ರವಾರ ಲೀಗ್‌ನ ಕೊನೆಯ 3 ಪಂದ್ಯಗಳು ನಡೆಯಲಿವೆ. ಭಾರತದ ಎದುರಾಳಿಯಾಗಿರುವ ಪೋಲೆಂಡ್ ಈವರೆಗೆ ನಾಲ್ಕೂ ಪಂದ್ಯಗಳನ್ನು ಸೋತು ಕೂಟದಿಂದ ನಿರ್ಗಮಿಸಿದೆ. ಹೀಗಾಗಿ ಭಾರತಕ್ಕೆ ಇನ್ನೊಂದು ಜಯ ಅಸಾಧ್ಯವೇನಲ್ಲ.