Advertisement

ಸುಳ್ಯ: ಚರಂಡಿ ದುರಸ್ತಿ ಇನ್ನಷ್ಟೇ ಆರಂಭವಾಗಬೇಕಿದೆ!

12:36 AM Jun 04, 2020 | Sriram |

ಸುಳ್ಯ: ಮಳೆಗಾಲಕ್ಕೆ ದಿನಗಣನೆ ಆರಂಭಗೊಂಡರೂ, ನಗರದ ವಾರ್ಡ್‌ಗಳ ಚರಂಡಿಯ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಈಗ ಮಳೆ ಬಂದರೆ ನೀರು ರಸ್ತೆಯಲ್ಲೇ ಹರಿಯ ಬೇಕಾಗಿದೆ.

Advertisement

ತೋಡಾದ ಮುಖ್ಯ ರಸ್ತೆ
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯು ನಗರ ಮಧ್ಯದಲ್ಲೇ ಹಾದು ಹೋಗುತ್ತಿದೆ. ಇಲ್ಲಿ ಸಣ್ಣ ಮಳೆ ಬಂದರೂ ಕೃತಕ ನೆರೆ ಭೀತಿ ಉಂಟಾಗುತ್ತಿದೆ. ಪೈಚಾರು, ಹಳೆಗೇಟು ಮೊದಲಾದೆಡೆ ಮಳೆ ನೀರು ರಸ್ತೆಯಲ್ಲೇ ಹರಿದು, ಮುಖ್ಯ ರಸ್ತೆ ತೋಡಾಗಿ ಬದಲಾಗುತ್ತದೆ. ಜಟ್ಟಿಪಳ್ಳ ರಸ್ತೆಯ ವೆಟ್‌ವೆಲ್‌ ಬಳಿ ಸಣ್ಣ ಮಳೆಗೂ ನೀರು ಹೊಟೇಲ್‌, ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಕೃತಕ ನೆರೆ ಭೀತಿ ಉಂಟಾಗುತ್ತಿದೆ. ಇದು ಮಳೆಗಾಲದ ಪ್ರತಿ ದಿನದ ಸ್ಥಿತಿ.

ಅನುದಾನ ಮೀಸಲು
ನಗರದಲ್ಲಿ 20 ವಾರ್ಡ್‌ ಇದೆ. ವಾರ್ಡ್‌ ವಿಸ್ತಾರದ ಆಧಾರದಲ್ಲಿ 65ರಿಂದ 1 ಲಕ್ಷ ರೂ. ತನಕ ಅನುದಾನ ಕಾದಿರಿಸಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಮಳೆ ನೀರು ಹರಿದು ಹೋಗಲು ಪೂರಕವಾಗಿ ಚರಂಡಿ ದುರಸ್ತಿ, ಪೊದೆ ತೆರವು ಕೆಲಸ ನಿರ್ವಹಿಸಬೇಕಿದೆ. ನ.ಪಂ.ಚುನಾವಣೆ ನಡೆದು ಒಂದು ವರ್ಷ ಕಳೆದಿದ್ದು, ಜನಪ್ರತಿನಿಧಿಗಳಿಗೆ ಅಧಿಕಾರ ಸಿಗದಿರುವ ಕಾರಣ ಆಡಳಿತಾಧಿಕಾರಿ ನೇತೃತ್ವದಲ್ಲೇ ಕಾಮಗಾರಿ ನಡೆಯಬೇಕಿದೆ.

ರಾಷ್ಟ್ರೀಯ ಹೆದ್ದಾರಿ
ನಿರ್ವಹಣೆ ಯಾರ ಹೊಣೆ?
ನಗರದ ಮಧ್ಯೆ ಹಾದು ಹೋಗಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿದೆ. ರಸ್ತೆ ಹಾದು ಹೋಗಿರುವ ಪ್ರದೇಶ ನ.ಪಂ.ವ್ಯಾಪ್ತಿಯೊಳಗಿದೆ. ಇಲ್ಲಿ ಚರಂಡಿ ದುರಸ್ತಿ ಮಾಡುವವರು ಯಾರು ಎಂಬ ಗೊಂದಲ ಇದೆ. ನ.ಪಂ. ಇದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಜವಾಬ್ದಾರಿ ಅನ್ನುವ ನಿಲುವು ಹೊಂದಿದ್ದರೆ, “ನಿರ್ಮಾಣ ಮಾತ್ರ ನಮ್ಮ ಹೊಣೆ, ಕಾಲ-ಕಾಲಕ್ಕೆ ನಿರ್ವಹಣೆ ಆಯಾ ವ್ಯಾಪ್ತಿಯ ಸ್ಥಳೀಯಾಡಳಿತಕ್ಕೆ ಸೇರಿದೆ’ ಎನ್ನುತ್ತಿದ್ದಾರೆ ಹೆದ್ದಾರಿ ಇಲಾಖಾಧಿಕಾರಿಗಳು. ಹಾಗಾಗಿ ಈ ಹೊಯ್ದಾಟದಿಂದ ಮುಖ್ಯ ರಸ್ತೆಯಲ್ಲಿನ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ.

ತಾಲೂಕಿನ ರಸ್ತೆಗಳ ಸ್ಥಿತಿ
ತಾಲೂಕಿನ ವಿವಿಧೆಡೆ ಲೋಕೋಪಯೋಗಿ, ಜಿ.ಪಂ. ಹಾಗೂ ಇನ್ನಿತರ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಲವೆಡೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ದುರಸ್ತಿ ಕಾರ್ಯ ಆರಂಭಗೊಂಡರೂ, ಅದು ಇನ್ನಷ್ಟೇ ವೇಗ ಪಡೆಯಬೇಕಿದೆ.

Advertisement

 ತತ್‌ಕ್ಷಣ ಆರಂಭ
ಮಳೆಗಾಲದ ಪೂರ್ವಭಾವಿ ಕೆಲಸಗಳಿಗೆ ಸಂಬಂಧಿಸಿ ನಗರದ ಚರಂಡಿ ದುರಸ್ತಿ, ಗಿಡಗಂಟಿ, ಪೊದೆ ತೆರವಿಗೆ ಅನುದಾನ ಮೀಸಲಿರಿಸಿ, ಟೆಂಡರ್‌ ಪ್ರಕ್ರಿಯೆ ಆಗಿದೆ. ಕೆಲ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಮತ್ತಡಿ, ಮುಖ್ಯಾಧಿಕಾರಿ, ನ.ಪಂ. ಸುಳ್ಯ

ಮಳೆಗಾಲದ ತುರ್ತು ನೆರವಿಗೆ ಸಂಪರ್ಕ ಸಂಖ್ಯೆ
ಕಂಟ್ರೋಲ್‌ ರೂಂ 08257- 230 330
ತಾ.ಪಂ.ಇಒ (ನೋಡಲ್‌ ಅಧಿಕಾರಿ) 9480862120
ತಹಶೀಲ್ದಾರ್‌ ಸುಳ್ಯ: 9902541695
ವಲಯ ಅರಣ್ಯಾಧಿಕಾರಿ 9481390040
ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ 9448289505
ಅಗ್ನಿಶಾಮಕ 08257-230900
ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿ 08257-233115
ಆರೋಗ್ಯ ಇಲಾಖೆ 08257-232479
ನಗರ ಪಂಚಾಯತ್‌ ಮುಖ್ಯಾಧಿಕಾರಿ 08257-230354

Advertisement

Udayavani is now on Telegram. Click here to join our channel and stay updated with the latest news.

Next