Advertisement

ಸುಳ್ಯ, ಪುತ್ತೂರು: ಅನಧಿಕೃತ ಸಾಗುವಳಿ ಕ್ರಮಕ್ಕೆ ಅರ್ಜಿ

11:27 AM Nov 30, 2018 | |

ಸುಳ್ಯ: ಸರಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ- 57ರಲ್ಲಿ ಅರ್ಜಿ ಸ್ವೀಕಾರ ಕಾರ್ಯ ಹದಿನೈದು ದಿನಗಳಿಂದ ಬಿರುಸು ಪಡೆದಿದ್ದು, ಪುತ್ತೂರು, ಸುಳ್ಯ, ಕಡಬ ತಾ|ಗಳಲ್ಲಿ ಗುರುವಾರ ಸಂಜೆ ತನಕ 7527 ಅರ್ಜಿಗಳು ಸಲ್ಲಿಕೆಯಾಗಿದೆ! ಒಟ್ಟು ನಾಲ್ಕು ಕೇಂದ್ರಗಳಲ್ಲಿ ಜನರು ಅರ್ಜಿ ಸಲ್ಲಿಕೆಗೆ ಸರತಿ ಸಾಲಿನಲ್ಲಿ ಕಾಯುವ ದೃಶ್ಯ ಕಂಡು ಬಂದಿದೆ. ದಿನಂಪ್ರತಿ 200ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿ ದಿನವು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಿಬಂದಿ ಮಾಹಿತಿ ನೀಡಿದ್ದಾರೆ.

Advertisement

ತಾಲೂಕು ವಿವರ
ಗುರುವಾರ ಸಂಜೆ ತನಕ ಸುಳ್ಯ ತಾಲೂಕಿನಲ್ಲಿ 1,132, ಪಂಜ ನಾಡ ಕಚೇರಿಯಲ್ಲಿ 405, ಪುತ್ತೂರು ತಾ| ಕಚೇರಿಯಲ್ಲಿ 2,345, ಕಡಬ ತಾ| ಕಚೇರಿಯಲ್ಲಿ 2,645 ಅರ್ಜಿಗಳು ಸಲ್ಲಿಕೆ ಆಗಿವೆ. ಪ್ರತಿ ಅರ್ಜಿಗೆ ತಲಾ 100 ರೂ. ಗಳಂತೆ ಪಾವತಿಸಬೇಕಿದ್ದು, 7,52,700 ರೂ. ಸರಕಾರದ ಖಜಾನೆಗೆ ಸಂಗ್ರಹವಾಗಿದೆ. 

ಸಿಬಂದಿ ಕೊರತೆ
ಅರ್ಜಿ ಸ್ವೀಕಾರಕ್ಕೆ ಓರ್ವ ಸಿಬಂದಿಯನ್ನು ಮಾತ್ರ ನಿಯೋಜಿಸಲಾಗಿದೆ. ಅರ್ಜಿ ಸ್ವೀಕರಿಸಿದ ಬಳಿಕ ಅದನ್ನು ನೋಂದಣಿ ಪುಸ್ತಕದಲ್ಲಿ ವಿಳಾಸ, ಪಹಣಿ ಸಂಖ್ಯೆ, ವಿಸ್ತೀರ್ಣ ಸಹಿತ ದಾಖಲಿಸಬೇಕು. ಅರ್ಜಿಯಲ್ಲಿನ ಸ್ವೀಕೃತಿ ರಶೀದಿ ಭರ್ತಿ ಮಾಡಿ ಅದನ್ನು ಅರ್ಜಿದಾರನಿಗೆ ಹಿಂತಿರುಗಿಸಬೇಕು. ಈ ಎಲ್ಲ ಪ್ರಕ್ರಿಯೆಗಳು ಕೈ ಬರಹದಲ್ಲೆ ಆಗಬೇಕಾದ ಕಾರಣ ಓರ್ವ ಅರ್ಜಿದಾರನಿಗೆ 5ರಿಂದ 10 ನಿಮಿಷ ಸಮಯಾವಕಾಶ ತಗಲುತ್ತಿದೆ. 

ಸರತಿ ಸಾಲಿನಲ್ಲಿ ನಿಂತವರು ತಾಸುಗಟ್ಟಲು ಕಾಯಬೇಕಿದೆ. ಕನಿಷ್ಠ ಮೂವರು ಸಿಬಂದಿಯನ್ನು ನೇಮಿಸಬೇಕು ಎನ್ನುತ್ತಾರೆ ಸುಳ್ಯ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಸಾಲು ನಿಂತಿದ್ದ ಪರಮೇಶ್ವರ.

ಗ್ರಾಮದಲ್ಲಿ ಅರ್ಜಿ ಸ್ವೀಕರಿಸಲು ಆಗ್ರಹ
ತಾಲೂಕು ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸುವ ಬದಲು ಆಯಾಗ್ರಾಮ ಮಟ್ಟದಲ್ಲಿ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವು ಕೇಳಿ ಬಂದಿದೆ. ಹತ್ತಿಪ್ಪತ್ತು ಕಿ.ಮೀ. ದೂರದಿಂದ ತಾಲೂಕು ಕಚೇರಿಗೆ ತೆರಳಿ ಕಾಯುವ ಬದಲು ಗ್ರಾಮ ಕರಣಿಕರ ಕಚೇರಿಯಲ್ಲಿ ಅರ್ಜಿ ಸ್ವೀಕರಿಸಿದರೆ ಉತ್ತಮ ಎನ್ನುತ್ತಾರೆ ಸುಶೀಲಾ.

Advertisement

ಪಹಣಿಗೂ ಸಾಲು
ಅರ್ಜಿ ಸಲ್ಲಿಸಲು ಸರಕಾರಿ ಜಮೀನಿನ ಪಹಣಿ ಪತ್ರದ ಅಗತ್ಯವಿರುವ ಕಾರಣ ತಾಲೂಕು ಕಚೇರಿ ಪಹಣಿ ಪತ್ರ ವಿತರಣೆ ಕೇಂದ್ರದಲ್ಲಿ ಜನರ ಕ್ಯೂ ಹೆಚ್ಚಾಗಿದೆ. ಗ್ರಾ.ಪಂ.ನಲ್ಲಿ ಆರ್‌ಟಿಸಿ ಸಿಗುವ ವ್ಯವಸ್ಥೆ ಇದ್ದರೂ ಅಲ್ಲಿ ಇಂಟರ್‌ ನೆಟ್‌ ಕೈ ಕೊಡುವ ಕಾರಣ ಜನರು ತಾಲೂಕು ಕಚೇರಿಗೆ ಬರುತ್ತಿದ್ದಾರೆ. ಖಾಸಗಿ ಕೇಂದ್ರಗಳಲ್ಲಿ ಆರ್‌ಟಿಸಿ ದೊರೆಯುತ್ತಿರುವ ಕಾರಣ, ಇಲ್ಲಿ ನೂಕು ನುಗ್ಗಲು ತಪ್ಪಿದೆ ಅನ್ನುತ್ತಾರೆ ಪಹಣಿ ಪತ್ರಕ್ಕೆ ಕಾಯುತ್ತಿದ್ದ ಪೂವಪ್ಪ.

ಅರ್ಜಿ ಸಲ್ಲಿಸಲು ಕಾಲಾವಕಾಶ ಇದೆ
· ಅರ್ಜಿ ಸಲ್ಲಿಸಲು 2019ರ ಮಾ.16 ತನಕ ಕಾಲಾವಕಾಶ ಇದೆ.
· ಹಿಂದೆ ನಮೂನೆ-50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದವರು ಈಗ ನಮೂನೆ 57ರಲ್ಲಿ ಸಲ್ಲಿಸುವಂತಿಲ್ಲ.
· ಅನಧಿಕೃತ ಸಾಗುವಳಿ ಮಹಾನಗರದಿಂದ 10 ಕಿ.ಮೀ., ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ., ಎಲ್ಲ ಪುರಸಭೆ, ಪ.ಪಂ. ವ್ಯಾಪ್ತಿಯಿಂದ 3 ಕಿ.ಮೀ. ಅಂತರದಲ್ಲಿ ಇರಬೇಕು.
· ಅರ್ಜಿ ಜತೆಗೆ ಜತೆಗೆ 100 ರೂ. ಶುಲ್ಕ, ಪಡಿತರ ಚೀಟಿ ಮತ್ತು ಆಧಾರ್‌ ಜೆರಾಕ್ಸ್‌, ಜಮೀನಿನ
 ಸರಕಾರಿ ಪಹಣಿ ಪ್ರತಿ ಸಲ್ಲಿಸಬೇಕು.

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next