Advertisement

ಎಂಟು ತಿಂಗಳಲ್ಲಿ ಸುಳ್ಯ ನ.ಪಂ. ಚುನಾವಣೆ

11:56 AM Jun 14, 2018 | |

ಸುಳ್ಯ: ಎಂಟು ತಿಂಗಳಲ್ಲಿ ಸುಳ್ಯ ನಗರ ಪಂಚಾಯತ್‌ ಹೊಸ ಚುನಾವಣೆಗೆ ಸಿದ್ಧಗೊಳ್ಳಲಿದೆ. ಐದು ವರ್ಷಗಳ ಆಡಳಿತದ ಅವಧಿ 2019 ಮಾ. 11ಕ್ಕೆ ಮುಕ್ತಾಯವಾಗಲಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಚುನಾವಣೆಯ ಸಿದ್ಧತೆಗಳು ಆರಂಭಗೊಂಡು, ಫೆಬ್ರವರಿ ಎರಡನೆ ವಾರದಲ್ಲಿ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ನ.ಪಂ. ಮೂಲಗಳು ಮಾಹಿತಿ ನೀಡಿವೆ.

Advertisement

ಆರು ವರ್ಷ..!
ಈ ಹಿಂದಿನ ಬಾರಿ 2013 ಮಾರ್ಚ್‌ 7ರಂದು ಚುನಾವಣೆ ನಡೆದು, ಮಾ. 11ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅಂದರೆ ಐದು ವರ್ಷ ಮೂರು ತಿಂಗಳಾಗಿದೆ. ನಿಯಮ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕು. ಇಲ್ಲಿ 2019ರಲ್ಲಿ ಚುನಾವಣೆ ನಡೆಯುವುದರಿಂದ ಭರ್ತಿ ಆರು ವರ್ಷಗಳಾಗುತ್ತದೆ.

2013ರ ಚುನಾವಣೆ ಮತ ಎಣಿಕೆ ಆಗಿ, ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ವಿಳಂಬವಾದ ಕಾರಣ, ಒಂದು ವರ್ಷ ನ.ಪಂ.ನಲ್ಲಿ ಚುನಾಯಿತ ಜನ ಪ್ರತಿನಿಧಿಗಳಿಗೆ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. 2014 ಮಾ.11 ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಲ್ಲಿಂದ ಚುನಾಯಿತ ಸದಸ್ಯರ ಅವಧಿ ಆರಂಭಗೊಳ್ಳುವ ಕಾರಣ, 2019 ಮಾ. 11ಕ್ಕೆ ಐದು ವರ್ಷ ತುಂಬುತ್ತದೆ. ಅದೇ ಲೆಕ್ಕದಲ್ಲಿ ಚುನಾವಣೆ ನಡೆಯಲಿದೆ. 

ವಾರ್ಡ್‌ ಸಂಖ್ಯೆ ಹೆಚ್ಚಳ
2011ರ ಜನಗಣತಿ ಪ್ರಕಾರ ಜನಸಂಖ್ಯೆ 19,958 ಇದೆ. ಹಾಗಾಗಿ ವಾರ್ಡ್‌ಗಳ ಪುನರ್‌ ವಿಂಗಡನೆ ನಡೆದು, 2 ವಾರ್ಡ್‌ ಹೆಚ್ಚುವರಿಯಾಗಿ ರಚಿಸಲಾಗಿದೆ. ಈಗಿರುವ 18 ವಾರ್ಡ್‌ಗಳ ಜತೆಗೆ ಹೊಸದಾಗಿ ಎರಡು ಸೇರ್ಪಡೆಗೊಂಡು, 20ಕ್ಕೆ ಏರಿಕೆ ಕಂಡಿದೆ. ಜಯನಗರ ಜಟ್ಟಿಪಳ್ಳ, ಬೋರುಗುಡ್ಡೆ ವಾರ್ಡ್‌ ಹಾಗೂ ಆಯ್ದ ಕೆಲ ವಾರ್ಡ್‌ಗಳ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಹೊಸ ವಾರ್ಡ್‌ ರಚಿಸಲಾಗಿದೆ.

ಈಗಿನ ಬಲಾಬಲ
ಹಾಲಿ 18 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್‌ 5 ಹಾಗೂ ಎಸ್‌ಡಿಪಿಐ 1 ಸ್ಥಾನ ಹೊಂದಿವೆ. ಬಿಜೆಪಿ ಆಡಳಿತದಲ್ಲಿದೆ. 20 ವಾರ್ಡ್‌ ರಚನೆಯಿಂದ ವಿಭಜಿತಗೊಳ್ಳುವ ಪ್ರದೇಶದಿಂದ ಹಾಗೂ ಹೊಸ 2 ವಾರ್ಡ್‌ ನಿಂದ ಯಾವ ಪಕ್ಷಕ್ಕೆ ಲಾಭ ಆಗಬಹುದು ಎಂಬ ಲೆಕ್ಕಾಚಾರ ಆರಂಭಗೊಂಡಿದೆ.

Advertisement

ಈಡೇರದ ಬೇಡಿಕೆ 
ನಗರ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿದ್ದರೂ, ಅದಕ್ಕೆ ಬೇಕಾದ ಒತ್ತಡಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಬಾರಿಯೂ ನಗರ ಪಂಚಾಯತ್‌ ಆಡಳಿತಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆ ಪ್ರಕ್ರಿಯೆ ಮುಗಿದು, ಹೊಸ ಆಡಳಿತ ಬಂದ ಮೇಲೆ, ಪುರಸಭೆಯಾಗಿ ಮೇಲ್ದರ್ಜೆಗೇರಿದರೆ, ಆಗ ಹಾಲಿ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ತಾನಾಗಿಯೇ ಪುರಸಭೆಯ ವ್ಯಾಪ್ತಿಗೆ ಮುಂಭಡ್ತಿಗೊಳ್ಳಲಿದೆ. ಈ ಹಿಂದೆ ಪುತ್ತೂರು ಪುರಸಭೆ ಆಗಿದ್ದ ಸಂದರ್ಭದಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಕೆ ಆದಾಗಲೂ ಇದೇ ತೆರನಾಗಿತ್ತು.

ಆದೇಶ ಬಂದಿಲ್ಲ
ಚುನಾವಣೆಗೆ ಕಾಲಾವಧಿ ಇರುವುದರಿಂದ ಯಾವುದೇ ಆದೇಶಗಳು ಬಂದಿಲ್ಲ. ಆಯೋಗದ ಅಧಿಕೃತ ಸುತ್ತೋಲೆ ಬಂದ ಅನಂತರ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. 
– ಕುಂಞಮ್ಮ ತಹಶೀಲ್ದಾರ್‌, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next