Advertisement
ಗುರುವಾರ ನ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತ್ತು. ಮಧ್ಯ ಪ್ರವೇಶಿಸಿದ ಸದಸ್ಯ ಉಮ್ಮರ್ ಕೆ.ಎಸ್., ಮೂರು ತಿಂಗಳಿನಿಂದ ಸ್ಥಾಯೀ ಸಮಿತಿ ಆಗಿಲ್ಲ. ಸ್ಥಾಯಿ ಸಮಿತಿ ಸಭೆ ನಡೆದು, ಅದರ ಲೆಕ್ಕಪತ್ರ ಸಾಮಾನ್ಯ ಸಭೆಗೆ ಇಡುವುದು ಕ್ರಮ. ಸಾಮಾನ್ಯ ಸಭೆ ಬಳಿಕ ಸ್ಥಾಯೀ ಸಮಿತಿ ಸಭೆ ಕರೆಯಲು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅವಕಾಶ ಇಲ್ಲ. ಈ ಸಭೆ ನಿಯಮಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಾಯೀ ಸಮಿತಿ ನಡೆದು ಲೆಕ್ಕಪತ್ರವನ್ನು ಸಾಮಾನ್ಯ ಸಭೆಯಲ್ಲಿ ಸದಸ್ಯರ ಮುಂದೆ ಇರಿಸಬೇಕು. ಇಲ್ಲಿ ಅದು ಪಾಲನೆ ಆಗಿಲ್ಲ. ಆಡಳಿತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಮೂರು ತಿಂಗಳ ಲೆಕ್ಕಪತ್ರ ಇಟ್ಟಿಲ್ಲ. ಸಾಮಾನ್ಯ ಸಭೆ ಬಳಿಕ ಸ್ಥಾಯೀ ಸಮಿತಿ ನಡೆಸಿದರೆ ಲೆಕ್ಕಪತ್ರ ಯಾರ ಗಮನಕ್ಕೂ ಬರುವುದಿಲ್ಲ. ಕೆಲ ದಿನಗಳಲ್ಲಿ ಚುನಾವಣೆ ಬರುವ ಕಾರಣ ಅನಂತರ ಆಡಳಿತಾಧಿಕಾರಿ ನೇಮಕ ಆಗುತ್ತಾರೆ. ಆಡಳಿತಾಧಿಕಾರಿ ಮೂಲಕ ಲೆಕ್ಕಪತ್ರಕ್ಕೆ ಅನುಮೋದನೆ ಪಡೆಯುವ ಹುನ್ನಾರ ಇದರಲ್ಲಿದೆ. ಈ ಸಾಮಾನ್ಯ ಸಭೆ ನಡೆಯಬಾರದು. ಸ್ಥಾಯೀ ಸಮಿತಿ ಸಭೆ ಆದ ಬಳಿಕ ಲೆಕ್ಕಪತ್ರ ಸಹಿತ ಸಾಮಾನ್ಯ ಸಭೆ ನಡೆಸಬೇಕು. ಈ ಸಭೆ ಮುಂದುವರಿಸಿದರೆ ಸದನದ ಬಾವಿಯಲ್ಲಿ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು. ಇದೇ ವಿಚಾರಕ್ಕೆ ವಿಪಕ್ಷ ಸದಸ್ಯರಾದ ಶಿವಕುಮಾರ್, ಗೋಕುಲ್ ದಾಸ್, ಪ್ರೇಮಾ ಟೀಚರ್, ಶ್ರೀಲತಾ ಧ್ವನಿಗೂಡಿಸಿದರು. ಅಧ್ಯಕ್ಷರ ವಿರುದ್ಧ ವಿಪಕ್ಷ ಆಕ್ರೋಶ
ವಿಪಕ್ಷ ಸದಸ್ಯರು ಅಧ್ಯಕ್ಷೆ ಶೀಲಾವತಿ ಮಾಧವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷೆಯಾಗಿ ನೀವು ಸರಿಯಾಗಿ ಜವಾಬ್ದಾರಿ ನಿರ್ವಹಿಸಿಲ್ಲ. ಯಾವುದೇ ಆರೋಪಗಳು ಬಂದಾಗಲೂ ಅಧಿಕಾರಿಗಳತ್ತ ಬೆರಳು ತೋರಿಸಿ ತಪ್ಪಿಸಿಕೊಳ್ಳುವ ಯತ್ನಿಸುತ್ತಿದ್ದೀರಿ. ಸ್ಥಾಯೀ ಸಮಿತಿ ಸಭೆ ಆಯೋಜನೆ ಮಾಡದಿರುವುದು ನಿಮ್ಮ ಆಡಳಿತ ಅವ್ಯವಸ್ಥೆಗೆ ಉದಾಹರಣೆ. ಅಧ್ಯಕ್ಷರ ಅಸಮರ್ಥ ಆಡಳಿತ ಇದಕ್ಕೆ ಕಾರಣ ಎಂದು ಗೋಕುಲ್ ದಾಸ್, ಉಮ್ಮರ್, ಶಿವಕುಮಾರ್ ವಾಗ್ಧಾಳಿ ನಡೆಸಿದರು. ಸಭೆ ಆಯೋಜನೆ ಬಗ್ಗೆ ಮಾಹಿತಿ ಇಲ್ಲದಿದ್ದರೆ ಆಡಳಿತ ಪಕ್ಷದಲ್ಲೇ ಅನುಭವಿ ಸದಸ್ಯರಿದ್ದಾರೆ. ಸಲಹೆ ಪಡೆದುಕೊಳ್ಳಬೇಕಿತ್ತು ಎಂದು ಉಮ್ಮರ್ ಹೇಳಿದರು.
Related Articles
ವಿಪಕ್ಷ ಸದಸ್ಯರು ಪಟ್ಟು ಹಿಡಿದ ಕಾರಣ, ಸಾಮಾನ್ಯ ಸಭೆ ಮುಂದೂಡಲು ತೀರ್ಮಾನಿಸಲಾಯಿತು. ಅಧ್ಯಕ್ಷರು, ಮುಖ್ಯಾಧಿಕಾರಿ ಅವರು ಸಭೆ ಮುಂದೂಡಿದ ಬಳಿಕ ಆಡಳಿತ, ವಿಪಕ್ಷ ಸದಸ್ಯರು ನಿರ್ಗಮಿಸಿದರು. ಬೆಳಗ್ಗೆ 11.30ಕ್ಕೆ ಶುರುವಾದ ಸಭೆ 12 ಗಂಟೆ ವೇಳೆ ಮಗಿಯಿತು.
Advertisement
ದಿನಾಂಕ ತಿಳಿಸಿದೆ: ಅಧ್ಯಕ್ಷೆಸ್ಥಾಯೀ ಸಮಿತಿ ಸಭೆ ಆಯೋಜಿಸದೇ ಇರುವುದಕ್ಕೆ ಆಡಳಿತ ಕಾರಣವೋ ಅಥವಾ ಅಧಿಕಾರಿಗಳ್ಳೋ ಎಂಬ ಬಗ್ಗೆ ಉತ್ತರ ನೀಡುವಂತೆ ಸದಸ್ಯ ಗೋಕುಲ್‌ದಾಸ್ ಒತ್ತಾಯಿಸಿದರು. ಅಧ್ಯಕ್ಷೆ ಶೀಲಾವತಿ ಅವರು ಮುಖ್ಯಾಧಿಕಾರಿ ಅವರನ್ನು ಉದ್ದೇಶಿಸಿ, ನಾನು ನಿಮ್ಮಲ್ಲಿ ದಿನಾಂಕ ಹೇಳಿದ್ದೆ. ನೀವು ಏಕೆ ಸಭೆ ಆಯೋಜಿಸಿಲ್ಲ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಪ್ರತ್ಯುತ್ತರ ನೀಡಿ, ನೀವು ಸಾಮಾನ್ಯ ಸಭೆಗಿಂತ ಮೊದಲು ಸ್ಥಾಯೀ ಸಮಿತಿ ಸಭೆ ನಡೆಸಲು ದಿನಾಂಕ ನೀಡಿಲ್ಲ. ಹಾಗಾಗಿ ಸಭೆ ಮಾಡಿಲ್ಲ. ಫೆ. 21ಕ್ಕೆ ಸಾಮಾನ್ಯ ಸಭೆ, ಫೆ. 26ರಂದು ಸ್ಥಾಯೀ ಸಮಿತಿ ಸಭೆ ನಡೆಸಲು ತಿಳಿಸಿದ ಮೇರೆಗೆ ನೋಟಿಸ್ ನೀಡಲಾಗಿದೆ ಎಂದರು. ಅಧಿಕಾರಿ, ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರ ನಡುವೆ ಈ ವಿಚಾರ ಕೆಲ ಕಾಲ ಚರ್ಚೆಗೆ ಈಡಾಯಿತು. ಆರೋಪ- ಪ್ರತ್ಯಾರೋಪ ನಡೆಯಿತು. ಆಡಳಿತ- ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆ ಸಭೆಯಲ್ಲಿ ಎದ್ದು ಕಂಡಿತ್ತು.