Advertisement

ಸುಳ್ಯ ನ.ಪಂ. 20 ವಾರ್ಡ್‌ಗೆ ಇಂದು ಮತದಾನ

11:44 PM May 28, 2019 | mahesh |

ಸುಳ್ಯ: ಸುಳ್ಯ ನಗರ ಪಂಚಾಯತ್‌ನ 20 ವಾರ್ಡ್‌ಗಳಿಗೆ ಮೇ 29ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಮಂಗಳವಾರ ಎನ್‌ಎಂಸಿ ಆವರಣದಲ್ಲಿ ಮಸ್ಟರಿಂಗ್‌ ಪೂರ್ಣಗೊಳಿಸಿ ಮತಯಂತ್ರ ಸಹಿತ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಮತದಾನ ಕೇಂದ್ರಗಳಿಗೆ ತೆರಳಿದರು.

Advertisement

53 ಅಭ್ಯರ್ಥಿಗಳ ಭವಿಷ್ಯ
ಎರಡು ಹೊಸ ವಾರ್ಡ್‌ ಸೇರಿ ಒಟ್ಟು 20 ವಾರ್ಡ್‌ಗಳಲ್ಲಿ 53 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 12 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. 2 ವಾರ್ಡ್‌ ಗಳಲ್ಲಿ ತ್ರಿಕೋನ, 2 ವಾರ್ಡ್‌ನಲ್ಲಿ ಚತುಷ್ಕೋನ, 1 ವಾರ್ಡ್‌ನಲ್ಲಿ ಆರು ಸ್ಪರ್ಧಿಗಳು ಮುಖಾಮುಖೀ ಆಗಿದ್ದಾರೆ. ದುಗಲಡ್ಕ, ಕೊೖಕುಳಿ, ಹಳೆಗೇಟು, ಅಂಬೆಟಡ್ಕ, ಕುರುಂಜಿಬಾಗ್‌, ಕೇರ್ಪಳ, ಕುರುಂಜಿಗುಡ್ಡೆ, ಭಸ್ಮಡ್ಕ, ಕೆರೆಮೂಲೆ, ಕಾಯರ್ತೋಡಿ, ಜಟ್ಟಿಪಳ್ಳ, ಕಾನತ್ತಿಲ ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬೂಡು, ಕಲ್ಲುಮುಟ್ಲು, ಗಾಂಧಿನಗರ, ಮಿಲಿಟ್ರಿ ಗ್ರೌಂಡ್‌, ಶಾಂತಿನಗರ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌, ಎಸ್‌ಡಿಪಿಐ ಹಾಗೂ ಪಕ್ಷೇತರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜಯನಗರ, ಬೀರಮಂಗಲದಲ್ಲಿ ಬಿಜೆಪಿ, ಎಸ್‌ಡಿಪಿಐ, ಕಾಂಗ್ರೆಸ್‌, ಪಕ್ಷೇತರರ ನಡುವೆ ಹಣಾಹಣಿ ಏರ್ಪಟ್ಟಿದೆ. ಬೋರುಗುಡ್ಡೆಯಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌, ಎಸ್‌ಡಿಪಿಐ, ಪಕ್ಷೇತರರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

14,093 ಮತದಾರರು
ಈ ಬಾರಿ 20 ವಾರ್ಡ್‌ಗಳಲ್ಲಿ 14,093 ಮತದಾರರು 53 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲು ಹಕ್ಕು ಚಲಾಯಿಸಲಿದ್ದಾರೆ. ವಾರ್ಡ್‌ – 14ರಲ್ಲಿ 1083 (ಗರಿಷ್ಠ), ವಾರ್ಡ್‌ ನಂ. 9 ಎನ್‌ಎಂಸಿ ಮತಗಟ್ಟೆಯಲ್ಲಿ 341 (ಕನಿಷ್ಠ ) ಮತದಾರರಿದ್ದಾರೆ. 6,928 ಪುರುಷರು ಮತ್ತು 7,165 ಮಹಿಳಾ ಮತದಾರರು ಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.

ಪ್ರತಿ ಮತಗಟ್ಟೆಗೆ 5 ಸಿಬಂದಿ
ಪ್ರತಿ ಮತಗಟ್ಟೆಗೆ ಎಆರ್‌ಒ-1, ಎಪಿಆರ್‌ಒ-2, ಪೋಲಿಂಗ್‌ ಸಿಬಂದಿ-2, ಡಿಗ್ರೂಪ್‌-1 ಹಾಗೂ 3 ಮಂದಿ ಆರಕ್ಷಕ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ದೇವರಾಜ ಮುತ್ಲಾಜೆ ಮತ್ತು ಮಂಜುನಾಥ ಎನ್‌. ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಮತ ಪತ್ರದಲ್ಲಿ ಕೊನೆ ಅಭ್ಯರ್ಥಿ ಅನಂತರದ ಪ್ಯಾನಲ್ನಲ್ಲಿ ನೋಟಾ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ. ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವ ಕಾರಣಕ್ಕಾಗಿ ಅಭ್ಯರ್ಥಿ ಗುರುತಿಸಲು ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಮುದ್ರಿಸಲಾಗಿದೆ. ಈ ಬಾರಿ ವಿ.ವಿ. ಪ್ಯಾಟ್ ವ್ಯವಸ್ಥೆ ಕೈ ಬಿಡಲಾಗಿದೆ.

Advertisement

7ರಿಂದ ಸಂಜೆ 5ರ ತನಕ ಮತದಾನ
ಲೋಕಸಭಾ ಚುನಾವಣೆಗೆ ಪರಿಗಣಿಸಿದರೆ ಈ ಚುನಾವಣೆಯಲ್ಲಿ ಮತದಾನ ಅವಧಿ 1 ಗಂಟೆ ಇಳಿಕೆ ಆಗಿದೆ. 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ವಿ.ವಿ. ಪ್ಯಾಟ್ ಬಳಕೆ ಸಂದರ್ಭ ಪ್ರತಿ ಮತ ಚಲಾವಣೆ ಸಂದರ್ಭ 7 ಸೆಕೆಂಡ್ಸ್‌ ಹೆಚ್ಚು ವ್ಯಯವಾಗುತ್ತಿತ್ತು. ಈ ಚುನಾವಣೆಯಲ್ಲಿ ವಿ.ವಿ. ಪ್ಯಾಟ್ ಇಲ್ಲದ ಕಾರಣ ಆ ಸಮಯ ಉಳಿತಾಯವಾಗುತ್ತದೆ ಎನ್ನುವುದು 1 ಗಂಟೆ ಕಡಿತಕ್ಕೆ ಕಾರಣ.

ಮಸ್ಟರಿಂಗ್‌ ಕೇಂದ್ರಕ್ಕೆ ಎ.ಸಿ. ಭೇಟಿ
ಎನ್‌ಎಂಸಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಮಸ್ಟರಿಂಗ್‌ ನಡೆಯಿತು. 110 ಸಿಬಂದಿ, ಚುನಾವಣಾಧಿಕಾರಿಗಳು ಪಾಲ್ಗೊಂಡಿದ್ದರು. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ಮಸ್ಟರಿಂಗ್‌ ಕೇಂದ್ರಕ್ಕೆ ಆಗಮಿಸಿ ಪರಿ ಶೀಲಿಸಿದರು. ತಹಶೀಲ್ದಾರ್‌ ಕುಂಞಿ ಅಹ್ಮದ್‌, ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಕುಮಾರ್‌, ಚುನಾವಣಾಧಿಕಾರಿಗಳಾದ ದೇವರಾಜ ಮುತ್ಲಾಜೆ, ಮಂಜುನಾಥ ಎನ್‌. ಉಪಸ್ಥಿತರಿದ್ದರು. ಮಸ್ಟರಿಂಗ್‌ ಮುಗಿದ ಬಳಿಕ 20 ಕೇಂದ್ರಗಳಿಗೆ 10 ವಾಹನಗಳಲ್ಲಿ ಮತಯಂತ್ರಗಳೊಂದಿಗೆ ಅಧಿಕಾರಿಗಳು ತೆರಳಿದರು. ಮಧ್ಯಾಹ್ನ ಮಸ್ಟರಿಂಗ್‌ ಕೇಂದ್ರದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.

27 ಇವಿಎಂ ಬಳಕೆ

20 ವಾರ್ಡ್‌ಗಳಲ್ಲಿ 20 ಮತಗಟ್ಟೆ ಸಿದ್ಧಪಡಿಸಲಾಗಿದೆ. 27 ಇವಿಎಂ ಬಳಸಲಾಗುತ್ತದೆ. ಪಿಆರ್‌ಒ, ಎಪಿಆರ್‌ಒಗಳಾಗಿ ಪುತ್ತೂರು ತಾಲೂಕಿನ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪೋಲಿಂಗ್‌ ಸಿಬಂದಿ, ಡಿ-ಗ್ರೂಪ್‌ ಸಿಬಂದಿಯಾಗಿ ಸುಳ್ಯ ತಾಲೂಕಿನವರು ಕಾರ್ಯ ನಿರ್ವಹಿಸಲಿದ್ದಾರೆ. 1ರಿಂದ 10 ಹಾಗೂ 11ರಿಂದ 20 ವಾರ್ಡ್‌ ವಿಭಜಿಸಿ, ಎರಡು ವಿಭಾಗಕ್ಕೆ ಪ್ರತ್ಯೇಕ ಸಿಬಂದಿ ನಿಯಕ್ತಿಗೊಳಿಸಲಾಗಿದೆ.

ಚುನಾವಣೆಗಾಗಿ ಸಾರ್ವತ್ರಿಕ ರಜೆ

ನಗರ ಪಂಚಾಯತ್‌ ಚುನಾವಣೆ ಹಿನ್ನೆಲೆಯಲ್ಲಿ ನ.ಪಂ. ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಮೇ 29 ರಂದು ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಚುನಾವಣ ಆಯೋಗ ಆದೇಶಿಸಿದೆ. ಮತ ಚಲಾವಣೆಗೆ ಅನುಕೂಲವಾಗುವಂತೆ ಚುನಾವಣೆ ನಡೆಯುವ ವ್ಯಾಪ್ತಿಯ ಎಲ್ಲ ರಾಜ್ಯ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಿಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next