Advertisement
ಇದು ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಇದು ಒಂದು ಶಾಲೆಗೆ ಸೀಮಿತವಾದ ಕಥೆಯಲ್ಲ.
ಮುಕ್ಕೂರು ಸರಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿ ತನಕ ಕಲಿಕೆಗೆ ಅವಕಾಶ ಇದೆ. ಈ ಬಾರಿ ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 45. ಎಂಟನೇ ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ 5. ವರ್ಗಾವಣೆ, ಹೆರಿಗೆ ರಜೆಯ ಕಾರಣ ಶಿಕ್ಷಕರ ಕೊರತೆ ಎದುರಿಸುತ್ತಿದ್ದ ನಡುವೆ ಎಂಟನೇ ತರಗತಿಗೆ ಬೋಧನೆಯ ಅರ್ಹತೆ ಹೊಂದಿರುವ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಇಬ್ಬರು ಅತಿಥಿ ಶಿಕ್ಷಕರು, ಸ್ಥಳೀಯ ಶಾಲೆಯಲ್ಲಿ ನಿಯೋಜನೆ ಮೇರೆಗೆ ಆಗಮಿಸಿರುವ ಓರ್ವ ಶಿಕ್ಷಕಿ ಕರ್ತವ್ಯದಲ್ಲಿದ್ದಾರೆ.
Related Articles
ಜೂನ್‌ನಲ್ಲಿ ಉಳಿದ ತರಗತಿಯ ಮಕ್ಕಳ ಹಾಗೆ 8ನೇ ತರಗತಿಗೆ ಈ ಐವರು ಮಕ್ಕಳು ಸೇರ್ಪಡೆ ಗೊಂಡಿದ್ದರು. ಶಾಲೆ ಆರಂಭವಾಗಿ 3 ತಿಂಗಳು ಕಳೆದಿದೆ. ಶಿಕ್ಷಕರ ಕೊರತೆ ಅನ್ನುವ ಮಾಹಿತಿ ಪಡೆದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನೇತೃತ್ವದ ತಂಡವು ಆ. 3ರಂದು ಶಾಲೆಗೆ ಭೇಟಿ ನೀಡಿತ್ತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ವಿಷಯವಾರು ಶಿಕ್ಷಕರು, ಪ್ರಯೋಗಾಲಯ ವ್ಯವಸ್ಥೆ ಇಲ್ಲದಿರುವ ವಿಚಾರ ಅವರ ಗಮನಕ್ಕೆ ಬಂದಿತ್ತು. ಎಲ್ಲೆಡೆ ಶಿಕ್ಷಕರ ಕೊರತೆ ಇದ್ದು ನಿಯೋಜನೆಗೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ಸೇರಿಸುವಂತೆ ಬಿಇಒ ಸೂಚನೆ ನೀಡಿದರು. ಇದರಂತೆ ಎಸ್‌ಡಿಎಂಸಿ ಅಧ್ಯಕ್ಷರು ಮಕ್ಕಳ ಪೋಷಕರಿಗೆ ದೂರವಾಣಿ ಮೂಲಕ ಮತ್ತು ಮನೆಗೆ ತೆರಳಿ ಈ ಮಾಹಿತಿ ನೀಡಿದರು. ಆ. 4ರಂದು ಎಲ್ಲ ಐವರು ಮಕ್ಕಳಿಗೆ ವರ್ಗಾವಣೆ ಪತ್ರ ನೀಡಿ ಬೆಳ್ಳಾರೆ ಕೆಪಿಎಸ್‌ನಲ್ಲಿ ದಾಖಲಾತಿ ಮಾಡಲಾಗಿದೆ.
Advertisement
ಶಾಲೆ ತೊರೆಯುವಾಗ ಭಾವುಕರಾದ ಮಕ್ಕಳು!3 ತಿಂಗಳಿನಿಂದ ಕಲಿಯುತ್ತಿದ್ದ ಶಾಲೆಯನ್ನು ಬಿಟ್ಟು ಹೋಗಬೇಕು ಅನ್ನುವ ವಿಷಯ ತಿಳಿದ ಐವರು ಮಕ್ಕಳು ಕಣ್ಣೀರಿಟ್ಟರು. ಸಹಪಾಠಿಗಳು ಬೇರೆ ಶಾಲೆಗೆ ಹೋಗುತ್ತಾರೆ ಅನ್ನುವ ಸುದ್ದಿ ತಿಳಿದು 7, 6, 5ನೇ ತರಗತಿಯ ಮಕ್ಕಳೂ ಭಾವುಕರಾದರು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕಠಿನ ನಿರ್ಧಾರ ಕೈಗೊಳ್ಳಬೇಕಾದ ಸ್ಥಿತಿ ಉಂಟಾಗಿರುವ ಬಗ್ಗೆ ಶಿಕ್ಷಣ ಅಧಿಕಾರಿಗಳು, ಎಸ್‌ಡಿಎಂಸಿ, ಶಿಕ್ಷಕರು ವಿದ್ಯಾರ್ಥಿಗಳ, ಪೋಷಕರ ಮನವೊಲಿಸಿದರು. ಕೊನೆಗೂ ದಾರಿ ಕಾಣದೇ ಭಾರವಾದ ಹೃದಯದೊಂದಿಗೆ ತಮ್ಮೂರಿನ ಶಾಲೆ ತೊರೆದು ಐವರು ವಿದ್ಯಾರ್ಥಿಗಳು ಆರು ಕಿ.ಮೀ. ದೂರದ ಶಾಲೆಗೆ ಸೇರ್ಪಡೆಗೊಂಡರು. ಸಂಸದರು ಕಲಿತ ಶಾಲೆ
ಮುಕ್ಕೂರು ಸರಕಾರಿ ಹಿ.ಪ್ರಾ. ಶಾಲೆಯು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಶಾಲೆ. ನಳಿನ್ ಅವರು ಸಂಸದರ ನಿಧಿ ಸೇರಿದಂತೆ ವಿವಿಧ ಮೂಲಗಳಿಂದ ಶಾಲೆಗೆ ಬೇಕಾದ ಕಟ್ಟಡದ ವ್ಯವಸ್ಥೆಯನ್ನು ಒದಗಿಸಿದ್ದಾರೆ. ಸಂಸದರ ಶಿಫಾರಸಿನಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡ ಸಿದ್ಧವಾಗಿದ್ದು ಉದ್ಘಾಟನೆಗೆ ಬಾಕಿ ಇದೆ. ಆದರೆ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿನ ಕುಸಿತ, ಶಿಕ್ಷಕರ ಕೊರತೆಯಿಂದ ಶಾಲೆಯ ಸ್ಥಿತಿ ಮಾತ್ರ ಬಿಗಡಾಯಿಸಿದೆ. ಶಾಲೆ ಬದಲಿಸಿದ ಶಿಕ್ಷಣ ಮಂತ್ರಿ!
ಇನ್ನೊಂದು ಶಾಲೆಗೆ ಸೇರಿರುವ ಐವರು ವಿದ್ಯಾರ್ಥಿಗಳಲ್ಲಿ ಒಬ್ಬಳು ಶಾಲೆಯ ಹಾಲಿ ಮುಖ್ಯಮಂತ್ರಿ, ಇನ್ನೋರ್ವ ಉಪಮುಖ್ಯ ಮಂತ್ರಿ, ಉಳಿದವರು ಸಚಿವ ಸ್ಥಾನ ಹೊಂದಿದ್ದರು. ಮುಖ್ಯಮಂತ್ರಿ ಅಶ್ವಿತಾ, ಉಪಮುಖ್ಯಮಂತ್ರಿ, ಗೃಹಮಂತ್ರಿ ಸಾನ್ವಿತ್, ಶಿಸ್ತುಮಂತ್ರಿ ರಶ್ಮಿತಾ, ಶಿಕ್ಷಣ ಮಂತ್ರಿ ಪ್ರಜ್ಞಾ, ಸ್ವತ್ಛತಾ ಮಂತ್ರಿ ವಂದಿತಾ ಶಾಲೆ ತೊರೆದು ಪಕ್ಕದ ಶಾಲೆಗೆ ಸೇರಿದ್ದಾರೆ. ಇನ್ನು ಐದು ವರ್ಷಗಳಲ್ಲಿ ಶಾಲೆಗೆ 100 ವರ್ಷ ತುಂಬಲಿದೆ. 8ನೇ ತರಗತಿ ಉಳಿಯಬೇಕು ಅನ್ನುವುದು ನಮ್ಮಲ್ಲೆರ ಅಪೇಕ್ಷೆಯಾಗಿತ್ತು. ಆದರೆ ಅದಕ್ಕೆ ಬೇಕಾದ ಶಿಕ್ಷಕರ ವ್ಯವಸ್ಥೆಯೇ ಇಲ್ಲಿಲ್ಲ. ಶಿಕ್ಷಕರ ನಿಯೋಜನೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಬಿಇಒ ಅವರ ಸೂಚನೆಯ ಪ್ರಕಾರ ಪೋಷಕರ ಒಪ್ಪಿಗೆ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಸಮೀಪದ ಬೆಳ್ಳಾರೆ ಶಾಲೆಗೆ ಸೇರಿಸಿದ್ದೇವೆ.
– ಜಯಂತ ಗೌಡ, ಅಧ್ಯಕ್ಷ,
ಎಸ್‌ಡಿಎಂಸಿ ಮುಕ್ಕೂರು ಸ.ಹಿ.ಪ್ರಾ. ಶಾಲೆ – ಕಿರಣ್ ಪ್ರಸಾದ್ ಕುಂಡಡ್ಕ