Advertisement

ಪತ್ರಕರ್ತರು-ಸಾಹಿತಿಗಳು ಸಮಾಜದ ಎರಡು ಕಣ್ಣು

09:45 AM Feb 09, 2019 | |

ಸುಳ್ಯ : ಪತ್ರಕರ್ತರು ಯಾವುದೇ ಸಮಸ್ಯೆಗೆ ವಾರ್ತೆಯ ಮೂಲಕ ಸ್ಪಂದಿಸುತ್ತಾರೆ. ಸಾಹಿತಿಗಳು ಕತೆ, ಕವನ, ಲೇಖನ, ಕಾದಂಬರಿಗಳ ಮೂಲಕ ಪ್ರತಿಕ್ರಿಯಿಸುತ್ತಾರೆ. ಇಬ್ಬರ ಉದ್ದೇಶವೂ ಶೋಷಣಾ ರಹಿತ ಸ್ವಸ್ಥ ಸಮಾಜವನ್ನು ರೂಪಿಸುವುದು. ಆದುದರಿಂದ ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಸುಳ್ಯದ ಹಿರಿಯ ವಿದ್ವಾಂಸ ಡಾ| ಬಿ. ಪ್ರಭಾಕರ ಶಿಶಿಲ ಅಭಿಪ್ರಾಯ ಪಟ್ಟರು.

Advertisement

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಸಂಕಲ್ಪ ಕನ್ನಡ ಸಂಘ ಮತ್ತು ಐಕ್ಯೂಎಸಿ ಸಂಯುಕ್ತವಾಗಿ ಹಮ್ಮಿಕೊಂಡ ಶಿಶಿಲರೊಡನೆ ಸಾಹಿತ್ಯಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರೆಹಗಾರರು, ಯಾಕೆ, ಏನನ್ನು ಮತ್ತು ಹೇಗೆ ಬರೆಯುವುದು ಎನ್ನುವ ಮೂರು ಮೂಲ ಪ್ರಶ್ನೆಗಳನ್ನು ಹಾಕಿಕೊಂಡು ಸಾಹಿತಿ ಗಳಾಗಲು ಯತ್ನಿಸಬೇಕು. ಯಾಕೆ ಬರೆ ಯುವುದೆಂದರೆ ಬರವಣಿಗೆಯ ಉದ್ದೇಶ ವನ್ನು ಕಂಡುಕೊಳ್ಳುವುದು. ಸಮಾಜದ ನ್ಯೂನತೆಗಳನ್ನು ಹೋಗಲಾಡಿಸಲು ಬರೆಯಬೇಕು. ಏನನ್ನು ಬರೆಯುವುದು ಎನ್ನುವುದು ವಸ್ತುವಿಗೆ ಸಂಬಂಧಿಸಿದ ವಿಚಾರ ಎಂದವರು ತಿಳಿಸಿದರು.

ಮನ್ನಣೆ ಸಿಗಲಿ
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಅಚ್ಯುತ ಪೂಜಾರಿ ಮಾತನಾಡಿ, ಡಾ| ಶಿಶಿಲ ಅವರು ಕನ್ನಡ ವಿಚಾರ, ಸಾಹಿತ್ಯ ಲೋಕ ವನ್ನು ಶ್ರೀಮಂತಗೊಳಿಸಿದವರು. ಅವರ ಪುಂಸ್ತ್ರೀ ಕಾದಂಬರಿ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದು ಸುಳ್ಯಕ್ಕೆ ಅಭಿಮಾನದ ವಿಷಯ. ಆದರೆ ಅವರಿಗೆ ಸಿಗಬೇಕಾದ ಮನ್ನಣೆ, ಗೌರವಗಳು ಸಿಕ್ಕಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

ಸಮ್ಮಾನ‌, ದೇಣಿಗೆ, ಪುಸ್ತಕ ಪ್ರದರ್ಶನ
ಡಾ| ಶಿಶಿಲ ಮತ್ತು ಕಚೇರಿ ಸಿಬಂದಿ ಬಾಲಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಕರ್ನಾಟಕದ ಪ್ರಸಿದ್ದ ಸಾಹಿತಿಗಳ ಭಾವಚಿತ್ರ ಮತ್ತು ಕೃತಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಶಿಶಿಲರೊಡನೆ ಅವರ ಕತೆಗಳ ಬಗ್ಗೆ ಮುಕ್ತ ಸಂವಾದ ನಡೆಸಿದರು. ಡಾ| ಶಿಶಿಲ ಅವರು ಐದು ಸಾವಿರ ರೂಪಾಯಿ ಮೌಲ್ಯದ ಅರ್ಥಶಾಸ್ತ್ರ ಕೃತಿಗಳನ್ನು ಕಾಲೇಜಿಗೆ ದೇಣಿಗೆ ನೀಡಿದರು.

Advertisement

ಕನ್ನಡ ಸಂಘದ ಕಾರ್ಯದರ್ಶಿಗಳಾದ ಮೇಘ, ಶಶಿಕಲಾ ಮತ್ತು ಸವಿನ್‌ ಹಾಗೂ ಐಕ್ಯೂಎಸಿ ಮುಖ್ಯಸ್ಥೆ ಡಾ| ಜಯಶ್ರೀ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ರಾಶಿ ಪ್ರಸ್ತಾವನೆಗೈದರು. ರಶ್ಮಿ ಸ್ವಾಗತಿಸಿದರು. ಪ್ರೊ| ಸರಿತಾ ವಂದಿಸಿದರು. ಚಾಂದಿನಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇಘಾ ಅವರಿಂದ ಯಕ್ಷಗಾನ, ಆಶಿಕಾ ಅವರಿಂದ ಮೋಹಿನಿಯಾಟ್ಟಂ ಮತ್ತು ಅರ್ಚನಾ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ನ್ಯೂನತೆಗಳ ಕ್ಷಕಿರಣ ಚೆಲ್ಲಿ
ನಮ್ಮ ಸಮಾಜದಲ್ಲಿ ಎಷ್ಟೋ ನ್ಯೂನತೆಗಳಿವೆ. ಅವುಗಳ ಬಗ್ಗೆ ಮೊದಲು ಕ್ಷ ಕಿರಣ ಚೆಲ್ಲಬೇಕು. ಹೇಗೆ ಬರೆಯುವುದು ಎನ್ನುವ ಪ್ರಶ್ನೆ ಬರವಣಿಗೆಯ ತಂತ್ರಕ್ಕೆ ಸಂಬಂಧ ಪಟ್ಟದ್ದು. ಖ್ಯಾತ ಸಾಹಿತಿಗಳ ಕೃತಿಗಳ ಓದಿನ ಹಿನ್ನೆಲೆೆಯಲ್ಲಿ ಬರೆಯಬೇಕು. ಆಳ ಅಧ್ಯಯನದ ಹಿನ್ನೆಲೆಯಿಲ್ಲದ ಸಾಹಿತ್ಯವು ಕಳಪೆಯಾಗಿರುತ್ತದೆ. ಪುಸ್ತಕ ಕೊಂಡು ಓದಿ ವಿಚಾರ ವಂತರಾಗಿ ಬರೆಯಿರಿ ಎಂದು ಶಿಶಿಲ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next