Advertisement

Sullia ಜಾಲ್ಸೂರು: ಹೆದ್ದಾರಿ ಸಮೀಪ 7 ಕಾಡಾನೆಗಳ ಹಿಂಡು ಪತ್ತೆ!

11:36 PM Nov 11, 2023 | Team Udayavani |

ಸುಳ್ಯ: ಜಾಲ್ಸೂರು- ಕಾಸರಗೋಡು ಅಂತಾರಾಜ್ಯ ರಸ್ತೆಯ ಪಂಜಿಕಲ್ಲಿನಲ್ಲಿ ಶುಕ್ರವಾರ ಬೆಳಗ್ಗೆ ಸಂಚರಿಸಿ ಸಾರ್ವಜನಿಕರಿಗೆ, ವಾಹನ ಪ್ರಯಾಣಿಕರಿಗೆ ಭಯ ಹುಟ್ಟಿಸಿದ್ದ ಕಾಡಾನೆ ಬಳಿಕ ಅಲ್ಲೇ ಸಮೀಪದ ಕಾಡಿಗೆ ತೆರಳಿದ್ದರೆ, ಶನಿವಾರ ಬೆಳಗ್ಗೆ ಅದೇ ಪರಿಸರದಲ್ಲಿ ಒಂದು ಮರಿ ಸಹಿತ ಏಳು ಕಾಡಾನೆಗಳ ಹಿಂಡು ಕಂಡುಬಂದಿವೆ.

Advertisement

ಹಗಲು ಹೊತ್ತಿನಲ್ಲಿ ಅರಣ್ಯ ಪ್ರದೇಶ ದಲ್ಲಿರುವ ಕಾಡಾನೆಗಳ ಹಿಂಡು ರಾತ್ರಿ ಯಾಗುತ್ತಿದ್ದಂತೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ, ಮಂಡೆಕೋಲು ಗ್ರಾಮದ ದೇವರಗುಂಡ, ಮುರೂರು, ಪಂಜಿಕಲ್ಲು ಗಡಿಭಾಗದಲ್ಲಿ ಸಂಚರಿಸಿ, ಕೃಷಿಕರ ತೋಟದಲ್ಲಿ ಹಾನಿ ಮಾಡುತ್ತಿದ್ದು, ಈಗಾಗಲೇ ಈ ಭಾಗದ ಹಲವಾರು ತೋಟಗಳಲ್ಲಿ ಹಾನಿ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಡಾನೆ ಹಿಂಡು ಕರ್ನಾಟಕ – ಕೇರಳ ಗಡಿಯಲ್ಲಿದ್ದು, ಎರಡೂ ರಾಜ್ಯ ಸರಕಾರಗಳ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಸೂಕ್ತ ಕಾರ್ಯಾಚರಣೆ ಕೈಗೊಳ್ಳ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಿರಿಬಾಗಿಲು: ಆನೆಗಳಿಂದ
ಅಪಾರ ಕೃಷಿ ನಾಶ
ಕಡಬ: ಸಿರಿಬಾಗಿಲು ಗ್ರಾಮದ ರೆಂಜಾಳ, ಪೆರ್ಜೆ ಪ್ರದೇಶ ದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಅಟ್ಟಹಾಸ ಮೇರೆ ಮೀರಿದ್ದು, ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಅಪಾರ ಕೃಷಿ ನಾಶಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ರೆಂಜಾಳದ ಶೂರಪ್ಪ ಗೌಡ ಹಾಗೂ ಉಮೇಶ ಗೌಡ ಅವರ ತೋಟಕ್ಕೆ ನುಗ್ಗಿರುವ ಆನೆಗಳು ಫಲ ನೀಡುತ್ತಿದ್ದ ತೆಂಗು, ಬಾಳೆ ಹಾಗೂ ಅಡಿಕೆ ಮರಗಳನ್ನು ನಾಶಗೊಳಿಸಿವೆ. ಆನೆ ಉಪಟಳದಿಂದ ಕಂಗಾಲಾಗಿರುವ ಕೃಷಿಕರು ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೃಷಿ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next