Advertisement

Sullia: ಪಂಜ ಹೋಬಳಿ ಕೇಂದ್ರ ತಲುಪುವುದೇ ಕಷ್ಟ!

12:46 PM Oct 15, 2024 | Team Udayavani |

ಸುಳ್ಯ: ಗುತ್ತಿಗಾರು- ಬಳಕ್ಕ- ಪಂಜ ಜಿಲ್ಲಾ ಮುಖ್ಯ ರಸ್ತೆ ಹಲವೆಡೆ ಹೊಂಡ- ಗುಂಡಿಗಳಿಂದ ಕೂಡಿ ದುಸ್ತರಗೊಂಡಿದ್ದು, ಗುತ್ತಿಗಾರು ಭಾಗದ ಜನತೆಗೆ ಹೋಬಳಿ ಕೇಂದ್ರ ಪಂಜವನ್ನು ಸಂಪರ್ಕಿಸುವುದೇ ತ್ರಾಸದಾಯಕವಾಗಿದೆ.

Advertisement

ಪಂಜ-ಬಳಕ್ಕ-ಗುತ್ತಿಗಾರು ರಸ್ತೆ ಮೇಲ್ದರ್ಜೆ ಗೇರಿಸಲಾದ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಕೆಲವು ವರ್ಷಗಳ ಹಿಂದೆ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ರಸ್ತೆಯ ಅಭಿವೃದ್ಧಿ ನಡೆಸಲಾಗಿತ್ತು. ಆದರೆ ಪೂರ್ಣ ಪ್ರಮಾಣದ ಅಭಿವೃದ್ಧಿ ಆಗದೆ ಇದ್ದುದರಿಂದ ಇಂದಿಗೂ ಈ ರಸ್ತೆ ಹೊಂಡ-ಗುಂಡಿಗಳಿಂದಲೇ ಕೂಡಿದೆ.

ಪಂಜ-ಬಳಕ್ಕ-ಗುತ್ತಿಗಾರು ಈ ರಸ್ತೆ ಸುಮಾರು 10 ಕಿ.ಮೀ. ದೂರ ವ್ಯಾಪ್ತಿ ಹೊಂದಿದ್ದು, ಇದರಲ್ಲಿ ಗುತ್ತಿಗಾರಿನಿಂದ ಚಿಕ್ಮುಳಿ ಎಂಬಲ್ಲಿವರೆಗೆ ರಸ್ತೆ ಡಾಮರೀಕರಣಗೊಂಡು ಅಭಿವೃದ್ಧಿಗೊಂಡಿದೆ. ಆದರೆ ಚಿಕ್ಮುಳಿ ಎಂಬಲ್ಲಿಂದ ಬಳಕ್ಕ-ಪಂಜ ವರೆಗೆ ಸುಮಾರು 7 ಕಿ.ಮೀ.ವರೆಗೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಈ ರಸ್ತೆಯ ಎರಡೂ ಬದಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆಯಲ್ಲೇ ಹರಿಯುವ ಸ್ಥಿತಿ ಇದೆ. ಪಂಜದಿಂದ ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ರಸ್ತೆ ಎಲ್ಲಿ ಎಂದು ಹುಡುಕಬೇಕಾದ ಸ್ಥಿತಿಯಿದೆ.

ಪಂಜ ಹೋಬಳಿ ಕೇಂದ್ರವಾಗಿದ್ದು, ಇಲ್ಲಿಗೆ ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು ಭಾಗದ ಜನರು ತಮ್ಮ ಕಂದಾಯ ವಿಭಾಗ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಅದಕ್ಕೆ ಇದೇ ರಸ್ತೆ ಬಳಕೆಯಾಗುತ್ತಿದ್ದು, ಆದರೆ ಪ್ರಸ್ತುತ ಈ ರಸ್ತೆ ಸರಿ ಇಲ್ಲದೆ ಇರುವುದರಿಂದ ಜನತೆಗೆ ಹೋಬಳಿ ಕೇಂದ್ರ ಸಂಪರ್ಕವೇ ತ್ರಾಸದಾಯಕವಾಗಿದೆ. ಈ ರಸ್ತೆಯನ್ನು ಬೇಗ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೇತುವೆ ಶಿಥಿಲ
ಇದೇ ರಸ್ತೆಯ ಜಳಕದ ಹೊಳೆ ಎಂಬಲ್ಲಿ 1983ರಲ್ಲಿ ನಿರ್ಮಾಣಗೊಂಡಿರುವ ಸೇತುವೆ ಪ್ರಸ್ತುತ ಶಿಥಿಲಾವಸ್ಥೆ ತಲುಪಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಸೇತುವೆಯಲ್ಲಿ ಘನ ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರಿಣಾಮ ಪಂಜ-ಬಳಕ್ಕ-ಗುತ್ತಿಗಾರು ರಸ್ತೆಯಲ್ಲಿ ಘನ ವಾಹನ ಸಂಚಾರ ಸ್ಥಗಿಗೊಂಡಿದೆ. ಸೇತುವೆಯಲ್ಲೂ ಹೊಂಡ-ಗುಂಡಿ ನಿರ್ಮಾಣಗೊಂಡು, ಸಾಮಾನ್ಯ ವಾಹನಗಳ ಸಂಚಾರಕ್ಕೂ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಪಂಜ-ಗುತ್ತಿಗಾರು ರಸ್ತೆಯ ಹಲವೆಡೆ ರಸ್ತೆಯಲ್ಲಿ ಹೊಂಡ-ಗುಂಡಿ ನಿರ್ಮಾಣಗೊಂಡು ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ. ದ್ವಿಚಕ್ರ ವಾಹನ ಸಂಚಾರವೇ ಅಪಾಯಕಾರಿಯಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಬೇರೆ ವಾಹನಗಳಿಗೆ ಸೈಡ್‌ ಕೊಡಲೂ ಆಗುತ್ತಿಲ್ಲ.
-ಸೂರ್ಯನಾರಾಯಣ ಸಂಪ, ಪಂಜ

ಗುತ್ತಿಗಾರು-ಪಂಜ ರಸ್ತೆಯ ಚಿಕ್ಮುಳಿವರೆಗೆ ರಸ್ತೆ ಉತ್ತಮವಾಗಿದ್ದರೂ ಚಿಕ್ಮುಳಿ ಎಂಬಲ್ಲಿಂದ ಪಂಜದ ವರೆಗೆ ರಸ್ತೆ ತೀರಾ ಹದಗೆಟ್ಟು ವಾಹನ ಸಂಚರಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ದುರಸ್ತಿ ಮಾಡಿದರೂ ಪ್ರಯೋಜನವಾಗುವ ಸ್ಥಿತಿಯಲ್ಲಿಲ್ಲ. ಕೂಡಲೇ ರಸ್ತೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು.
-ಅನಿಲ್‌ ಗುತ್ತಿಗಾರು, ರಸ್ತೆಯ ಫಲಾನುಭವಿ

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next