Advertisement

ಅಪೂರ್ಣ ತಾಲೂಕು ಕ್ರೀಡಾಂಗಣ,ಒಳಚರಂಡಿ ದುರ್ವಾಸ‌ನೆಗೆ ಜನ ತತ್ತರ

10:24 AM May 19, 2019 | Team Udayavani |

ಸುಳ್ಯ: ನ.ಪಂ.ನ 4 (ಶಾಂತಿನಗರ), 5ನೇ (ಹಳೆಗೇಟು) ವಾರ್ಡ್‌ಗಳು ನಗರ ಮತ್ತು ತಾಲೂಕಿಗೆ ಸಂಬಂಧಿಸಿದ ಎರಡು ಪ್ರಮುಖ ಸಮಸ್ಯೆ ಹೊತ್ತುಕೊಂಡು ದಶ ವರ್ಷಗಳೇ ಕಳೆದಿದೆ.

Advertisement

ಒಂದೆಡೆ ನಗರದ ಒಳಚರಂಡಿ ಘಟಕದ ದುರ್ವಾಸನೆ, ಇನ್ನೊಂದೆಡೆ ಪಾಳುಬಿದ್ದಿರುವ ತಾಲೂಕು ಕ್ರೀಡಾಂಗಣ. ಹತ್ತಾರು ವರ್ಷದಿಂದ ಇವೆರೆಡು ಸಮಸ್ಯೆ ಬಗೆಹರಿದಿಲ್ಲ. ನಗರಾಡಳಿತದ ಮೂಲಕ ಸರಕಾರದ ಹಂತದಲ್ಲಿ ಒತ್ತಡ ತಂದು ಇದಕ್ಕೂಂದು ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ವಾರ್ಡ್‌ನ ಮತದಾರರ ಬೇಡಿಕೆ. ಆ ನಿರೀಕ್ಷೆಯಲ್ಲಿ ಹಕ್ಕು ಚಲಾಯಿಸುತ್ತೇವೆ ಅನ್ನುವುದು ಸ್ಥಳೀಯರ ಅಭಿಮತ.

ಪ್ರಯೋಜನಕ್ಕಿಲ್ಲ ಒಳಚರಂಡಿ ಘಟಕ
ಹಳಗೇಟು ವಾರ್ಡ್‌-5ಕ್ಕೆ ಸೇರಿರುವ ಹೊಸಗದ್ದೆ ಪ್ರದೇಶದಲ್ಲಿ ಒಳ ಚರಂಡಿ ಘಟಕವಿದೆ. ನಗರದಿಂದ ಹರಿದು ಬರುವ ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2.87 ಕೋಟಿ ರೂ. ಒಳಚರಂಡಿ ಘಟಕ ಕ್ರಿಯಾಯೋಜನೆಗೆ ಸರಕಾರವು 2001ರ ಜುಲೈ ತಿಂಗಳಲ್ಲಿ ಒಪ್ಪಿಗೆ ನೀಡಿತ್ತು. 2001ರ ನವೆಂಬರ್‌ನಲ್ಲಿ ತಾಂತ್ರಿಕ ಮಂಜೂರಾತಿ ದೊರೆಯಿತು. ಒಳಚರಂಡಿಯಲ್ಲಿ ಹರಿದು ಬರುವ ತ್ಯಾಜ್ಯ ನೀರಿನ ಸಂಸ್ಕರಣೆಗೆ ಹಳೆಗೇಟು ವಾರ್ಡ್‌ನ ಹೊಸಗದ್ದೆ ಬಳಿ ತ್ಯಾಜ್ಯ ಶುದ್ಧೀಕರಣ ಘಟಕ ಸಾಪಿಸುವ ವಿಚಾರಕ್ಕೆ ಸ್ಥಳೀಯ ಪರಿಸರದ 300ಕ್ಕೂ ಅಧಿಕ ಮನೆ ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಪ್ರತಿಭಟನೆ ಲೆಕ್ಕಿಸದೆ ಅಲ್ಲಿ ಘಟಕ ನಿರ್ಮಿಸಲಾಗಿತ್ತು.

ಬಾಗಿಲು ಮುಚ್ಚಬೇಕು
ಶುದ್ಧಿಕರಣಕ್ಕೆಂದು 6ಕ್ಕಿಂತ ಅಧಿಕ ಬೃಹತ್‌ ಹೊಂಡ ನಿರ್ಮಿಸಲಾಗಿದೆ. ಯೋಜನೆ ಪ್ರಕಾರ ನಗರದ ಎರಡು ವಲಯಗಳಿಂದ ಬರುವ ತ್ಯಾಜ್ಯ ಹೊಂಡದಲ್ಲಿ ಶೇಖರಣೆಯಾಗಿ ಬೇರೆ ಬೇರೆ ಹೊಂಡಕ್ಕೆ ಹರಿದು, ಹಂತ ಹಂತವಾಗಿ ಶುದ್ಧೀಕರಣಗೊಂಡು, ಕೃಷಿ ಚಟುವಟಿಕೆಗೆ ಮರು ಬಳಸುವ ಉದ್ದೇಶವಿತ್ತು. ಆದರೆ ಒಳಚರಂಡಿ ಸಂಪರ್ಕ ಲೋಪದ ಪರಿಣಾಮ ಯಶಸ್ಸು ಕಾಣಲಿಲ್ಲ. ಎರಡು ವಲಯದ ಪೈಕಿ ಕೆಲವೆಡೆ ಸಂಪರ್ಕ ನೀಡಲಾಗಿದೆ. ಆ ತ್ಯಾಜ್ಯದ ಬಹುಪಾಲು ನಗರದೊಳಗೆ ಸೋರಿಕೆ ಆಗುತ್ತಿದೆ.

ಅಲ್ಪ ಪ್ರಮಾಣದ ತ್ಯಾಜ್ಯ ನೀರು ಘಟಕದ ಒಂದು ಹೊಂಡಕ್ಕೆ ಬಂದು ಬೀಳುತ್ತಿದೆ. ನಿಯಮಾನುಸಾರ ಆ ತ್ಯಾಜ್ಯ ನೀರನ್ನು ಸಂಸ್ಕರಿಸಬೇಕು. ಆ ವ್ಯವಸ್ಥೆ ಇಲ್ಲದ ಕಾರಣ ದುರ್ವಾಸನೆ ಹಬ್ಬಿ ಮನೆ ಬಾಗಿಲು ಮುಚ್ಚಿಕೊಂಡೇ ದಿನ ಕಳೆಯಬೇಕು ಎನ್ನುತ್ತಾರೆ ಈ ವಾರ್ಡ್‌ ನಿವಾಸಿಗರು.

Advertisement

ಅಪೂರ್ಣ ತಾಲೂಕು ಕ್ರೀಡಾಂಗಣ
ಶಾಂತಿನಗರ 4ನೇ ಮತ್ತು ಹಳೆಗೇಟು 5ನೇ ವಾರ್ಡ್‌ ವ್ಯಾಪ್ತಿಯ ಶಾಂತಿನಗರದಲ್ಲಿ ಹದಿಮೂರು ವರ್ಷದ ಹಿಂದೆ 5.85 ಎಕ್ರೆ ಪ್ರದೇಶದಲ್ಲಿ 60 ಲಕ್ಷ ರೂ. ವ್ಯಯಿಸಿ ನಿರ್ಮಿಸಲು ಉದ್ದೇಶಿಸಿದ್ದ ತಾಲೂಕು ಕ್ರೀಡಾಂಗಣ ಪಾಳು ಬಿದ್ದಿದೆ. 60 ಲಕ್ಷ ರೂ. ಖರ್ಚಾದ ಅನಂತರ ಕಾಮಗಾರಿ ಮುಂದುವರಿಯಲಿಲ್ಲ. ಇದಕ್ಕೆ ಕಾರಣ, ಅನುದಾನದ ಕೊರತೆ. ಹಾಗಾಗಿ ಪ್ರಥಮ ಹಂತದ ಕಾಮಗಾರಿಯಲ್ಲಿ ಸುಸ್ತಾದ ಈ ಕ್ರೀಡಾಂಗಣ ಅಕ್ಷರಶಃ ಪಾಳು ಬಿದ್ದಿದೆ. ಪರಿಣಾಮ ಲಕ್ಷಾಂತರ ರೂ. ತೆರಿಗೆ ಹಣ ಪೋಲಾಗಿದೆ. ಎರಡು ಕಟ್ಟಡಗಳು ಪಾಳು ಬಿದ್ದಿದ್ದು, ಕಿಟಕಿ ಗಾಜು ಒಡೆದು ಹೋಗಿವೆ. ಶೌಚಾಲಯದ ಬಾಗಿಲು ಸಾಮಗ್ರಿಗಳು ಒಡೆದು ಹೋಗಿವೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ರಾತ್ರಿ ವೇಳೆ ಇಲ್ಲಿ ಅನೈತಿಕ ವ್ಯವಹಾರಗಳು ನಡೆಯುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಉಳಿದಂತೆ ಈ ಎರಡು ವಾರ್ಡ್‌ಗಳಲ್ಲಿ ರಸ್ತೆ, ನೀರು, ತಂಗುದಾಣ, ತ್ಯಾಜ್ಯ ಮೊದಲಾದ ಸಮಸ್ಯೆಗಳು ಇವೆ. ಇದನ್ನು ಬಗೆಹರಿಸುವುದು ಕಷ್ಟವೇನೂ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next