Advertisement
ಬೇಸಗೆ ಆರಂಭದಲ್ಲೇ ಕೆರೆ, ಬಾವಿ, ಹೊಳೆ, ತೋಡುಗಳು ನೀರಿಲ್ಲದೆ ಬರಿದಾಗಿವೆ. ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ ಹಾಗೂ ಪಯಸ್ವಿನಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದರಿಂದ ಕೃಷಿ ಮತ್ತು ದಿನ ಬಳಕೆಗೆ ನೀರಿನ ಅಭಾವ ಕಾಡುವ ಭೀತಿ ಉಂಟಾಗಿದೆ.
ಕಳೆದ ಆಗಸ್ಟ್, ಸೆಪ್ಟಂಬರ್‌ನಲ್ಲಿ ಸುರಿದ ಮಳೆ, ಪ್ರಾಕೃತಿಕ ವಿಕೋಪದಿಂದ ಉಕ್ಕೇರಿದ್ದ ಕುಮಾರಧಾರಾ, ಪಯಸ್ವಿನಿ ನದಿಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕಳೆದ ಮಳೆಗಾಲದಲ್ಲಿ 30 ವರ್ಷಗಳಲ್ಲೇ ಗರಿಷ್ಠ ನೀರಿನ ಹರಿವು ಕಂಡಿದ್ದ ಈ ನದಿಗಳಲ್ಲಿ ಈಗ ಜಲಚರಗಳು ನೀರಿಗಾಗಿ ಹಾಹಾಕಾರ ಪಡುವ ದಿನಗಳು ಸನ್ನಿಹಿತವಾಗಿವೆ. ಭಾಗಮಂಡಲದಿಂದ ಜೋಡುಪಾಲ ಮೂಲಕ ಸುಳ್ಯ ಪ್ರವೇಶಿಸುವ ಪಯಸ್ವಿನಿ, ಸುಳ್ಯ ತಾಲೂಕಿನ ಮೂಲಕ ಉಪ್ಪಿನಂಗಡಿ ಬೆಸೆಯುವ ಕುಮಾರಧಾರೆ ನದಿಗಳಲ್ಲಿ ನೀರಿನ ಆಳ ಪ್ರದೇಶ ಬತ್ತಿ, ಬಂಡೆಗಳು ಕಾಣುತ್ತಿವೆ. ಈ ಎರಡು ನದಿಗಳಲ್ಲಿ ಹಲವು ಕಿ.ಮೀ. ದೂರದ ತನಕ ಪ್ರಾಕೃತಿಕ ವಿಕೋಪದ ಪರಿಣಾಮ ಗುಡ್ಡದ ಅಪಾರ ಮಣ್ಣು ನದಿ ನೀರಿನೊಂದಿಗೆ ಹರಿದು ಆಳ ಪ್ರದೇಶವನ್ನು ಮುಚ್ಚಿದೆ. ಸುಳ್ಯ ನಗರದಲ್ಲಿ ನಾಗಪಟ್ಟಣ ಬಳಿ ಮರಳು ಕಟ್ಟದಲ್ಲಿ ನೀರು ಸಂಗ್ರಹಿಸಲಾಗಿದ್ದು, ಅದರ ಕೆಳ ಭಾಗವಂತೂ ನೀರಿಲ್ಲದೆ ಬಂಡೆ ಕಾಣುವ ಸ್ಥಿತಿ ಉಂಟಾಗಿದೆ.
Related Articles
ಪುತ್ತೂರು ತಾಲೂಕಿನ ಜೀವನದಿ ನೇತ್ರಾವತಿಯಲ್ಲಿ ವಾರ್ಷಿಕ 430 ಟಿಎಂಸಿ ನೀರು ಹರಿಯುತ್ತದೆ. ಸುಮಾರು 12,497 ಕ್ಯುಬಿಕ್ ಮೀ. ನೀರು ತುಂಬಿಕೊಂಡು 148.5 ಕಿ.ಮೀ. ಹರಿಯುವ ನೇತ್ರಾವತಿ 4,25,280 ಚದರ ಕಿ.ಮೀ. ಭೂಮಿ ಹಸುರಾಗಿಸುತ್ತದೆ.
Advertisement
ಹತ್ತು ಲಕ್ಷ ರೈತರಿಗೆ ತನ್ನೊಡಲಿನಿಂದ 464.62 ಟಿಎಂಸಿ ನೀರು ಒಪ್ಪಿಸುವುದು ಲೆಕ್ಕಾಚಾರ. ಜಲ ಸಂಪನ್ಮೂಲ ಇಲಾಖೆ 1994ರಿಂದ 2010ರ ತನಕದ ಸರ್ವೇ ಆಧಾರದಂತೆ ಪ್ರತೀ ವರ್ಷ ಜೂ. 1ರಿಂದ ಅ. 30ರ ವರೆಗೆ ಒಟ್ಟು 221.856 ಟಿಎಂಸಿ (ಅಂದಾಜು 201.7ರಿಂದ 240.6 ಟಿಎಂಸಿ) ನೀರು ಸಮುದ್ರ ಸೇರುತ್ತದೆ. ಆದರೆ ಕಳೆದ 8 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಹರಿದ ನೀರಿನ ಪ್ರಮಾಣ 113.5ರಿಂದ 150.19 ಟಿಎಂಸಿ ಮಾತ್ರ. ಈ ಬಾರಿ ಮಳೆ ನೀರು ಹೆಚ್ಚು ಹರಿದಿದ್ದರೂ ನದಿಯಲ್ಲಿ ನೀರಿಲ್ಲ. ತುಂಬಿದ ಪ್ರಮಾಣಕ್ಕಿಂತ ವೇಗವಾಗಿ ಬತ್ತಿರುವುದಕ್ಕೆ ಇದು ಉದಾಹರಣೆ.