Advertisement

Sullia: ಧಾರಾಕಾರ ಮಳೆಯಿಂದ ಹಾನಿ

11:20 PM Jan 07, 2024 | Team Udayavani |

ಸುಳ್ಯ: ಸುಳ್ಯ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಹಾನಿ ಸಂಭವಿಸಿದೆ.

Advertisement

3 ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲೇ ನೀರು ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ತಾಲೂಕು ಪಂಚಾಯತ್‌ ಹಿಂಭಾಗದ ಮನೆಯ ಕಾಂಪೌಂಡ್‌ ಕುಸಿದಿದೆ. ಅಜ್ಜನಗದ್ದೆ-ಕುಕ್ಕಜಡ್ಕ ಕ್ರಾಸ್‌ ಬಳಿ ಮಳೆಗೆ ಮರವೊಂದು ರಸ್ತೆಗೆ ಉರುಳಿದೆ. ಘಟನೆಯಲ್ಲಿ ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದೆ. ಸ್ಥಳೀಯರು ಮರ ತೆರವು ಮಾಡಿದ್ದಾರೆ.

ಜೂನಿಯರ್‌ ಕಾಲೇಜು ರಸ್ತೆಯ ಕ್ರೀಡಾಂಗಣದ ಬದಿಯ ತಡೆಗೋಡೆಗೆ ಹೊಂದಿಕೊಂಡಿರುವ ಮರದ ಬುಡದಲ್ಲಿನ ಕಲ್ಲು ಮಣ್ಣು ಕುಸಿದಿದ್ದು, ಮರ ರಸ್ತೆಯ ಕಡೆ ವಾಲಿಕೊಂಡು ಅಪಾಯ ಕಾರಿಯಾಗಿದೆ.

ಪೆರುವಾಜೆ ಗ್ರಾಮದ ಚೆನ್ನಾವರ ಕುಂಡಡ್ಕದಲ್ಲಿ ಕಿಂಡಿ ಅಣೆಕಟ್ಟಿಗೆ, ಪಕ್ಕದ ತೋಟಕ್ಕೆ ಹಾನಿಯಾಗಿದೆ. ಹೊಳೆಯಲ್ಲಿ ನೀರು ಹರಿದಿದ್ದು ಅಣೆಕಟ್ಟಿಗೆ ನೀರು ಸಂಗ್ರಹಕ್ಕಾಗಿ ಹಲಗೆ ಹಾಕಿದ್ದ ಕಾರಣ ನೀರು ತುಂಬಿ ಒಂದು ಬದಿಯಿಂದ ಮಣ್ಣು ಕೊಚ್ಚಿ ಹೋಗಿ ಹಲವು ಅಡಿಕೆ ಮರಗಳಿಗೆ ಹಾನಿ ಸಂಭವಿಸಿದೆ.

Advertisement

112 ಮಿ.ಮೀ. ಮಳೆ
ಸುಳ್ಯ ನಗರದಲ್ಲಿ ಶನಿವಾರ ರಾತ್ರಿ 112 ಮಿಲಿ ಮೀಟರ್‌ ಮಳೆ ಸುರಿದಿದೆ ಎಂದು ನಗರದಲ್ಲಿ ಮಳೆ ದಾಖಲೆ ಮಾಡುವ ಶ್ರೀಧರ ರಾವ್‌ ಹೈದಂಗೂರು ಹೇಳಿದ್ದಾರೆ. ಚೊಕ್ಕಾಡಿಯಲ್ಲಿ 125 ಮಿ.ಮೀ., ಬಾಳಿಲದಲ್ಲಿ 105 ಮಿ.ಮೀ. ಮಳೆಯಾಗಿದೆ. 49 ವರ್ಷಗಳಿಂದ ಮಳೆ ದಾಖಲೆ ಮಾಡುವ ಪ್ರಸಾದ್‌ ಅವರ ಪ್ರಕಾರ ಜನವರಿಯಲ್ಲಿ ಈ ಪ್ರಮಾಣದ ಮಳೆ ಸುರಿದ ಉದಾಹರಣೆಗಳಿಲ್ಲ.

ಕೊಚ್ಚಿ ಹೋದ
ಪರಿಸರ ಸ್ನೇಹಿ ಕಟ್ಟ
ಸುಳ್ಯಪದವು: ಶನಿವಾರ ರಾತ್ರಿಯ ಭಾರೀ ಮಳೆಯ ನೀರಿನಲ್ಲಿ ರೈತರು ನಿರ್ಮಿಸಿದ್ದ 2 ಪರಿಸರ ಸ್ನೇಹಿ ಕಟ್ಟಗಳು ಕೊಚ್ಚಿ ಹೋಗಿವೆ. ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದ ಕನ್ನಡ್ಕದಲ್ಲಿ ಅನಿಲ್‌ ಕುಮಾರ್‌ ಅವರು ಪ್ರತೀವರ್ಷ ಅಡಿಕೆ ಮರ ಮತ್ತು ಸಲಾಕೆಯನ್ನು ಮತ್ತು ಫೈಬರ್‌ ಪ್ಲಾಸ್ಟಿಕ್‌ ಹಾಳೆಯನ್ನು ಉಪಯೋಗಿಸಿ ಕನ್ನಡ್ಕ ತೋಡಿಗೆ ಪರಿಸರ ಸ್ನೇಹಿ ಕಟ್ಟ ನಿರ್ಮಿಸುತ್ತಿದರು. ಇದರ ಕೆಳ ಭಾಗದಲ್ಲಿ ವೆಂಕಟೇಶ್‌ ನಾಯಕ್‌ ಕೂಡ ಕಟ್ಟ ಕಟ್ಟಿದ್ದರು. ಮಳೆ ಬಂದ ಕಾರಣ ತೋಡಿನಲ್ಲಿ ನೀರಿನ ಹರಿವು ಹೆಚ್ಚಾಗಿ ಎರಡೂ ಕಟ್ಟಗಳು ಕೊಚ್ಚಿ ಹೋಗಿವೆ.

ಅಡಿಕೆ ಕೃಷಿಕರು ಕಂಗಾಲು
ಅನಿರೀಕ್ಷಿತ ಮಳೆಯಿಂದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿಕರ ಅಂಗಳಲ್ಲಿ ಕೊçಲು ಮಾಡಿ ಹಾಕಿದ ಅಡಿಕೆ ಮಳೆ ನೀರಿನಲ್ಲಿ ತೋಯ್ದು ಹೋಗಿದೆ. ಹಲವು ಕಡೆಗಳಲ್ಲಿ ಅನಿರೀಕ್ಷಿತ ಮಳೆಯ ಹೊಡೆತಕ್ಕೆ ಅಡಿಕೆ ನೀರಿನಲ್ಲಿ ತೇಲಿ ಹೋಗಿದೆ. ಕೆಲವೆಡೆ ಟರ್ಪಾಲು ಹಾಕಿ ಮುಚ್ಚಿದರೂ ಮಳೆಯ ಅರ್ಭಟಕ್ಕೆ ಅದು ಪರಿಣಾಮಕಾರಿಯಾಗಿಲ್ಲ. ಒಟ್ಟಿನಲ್ಲಿ ಅಕಾಲಿಕ ಬಾರೀ ಮಳೆಗೆ ಅಡಿಕೆ ಕೃಷಿಕರು ಸಮಸ್ಯೆ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.