Advertisement

ಈ ಮೀಸಲು ಕ್ಷೇತ್ರದಲ್ಲಿ ಮೂವರು ಸಂಸದರು !

12:19 PM Mar 24, 2019 | keerthan |

ಸುಳ್ಯ: ಇದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ತುತ್ತತುದಿಯಲ್ಲಿರುವ ಜಿಲ್ಲೆಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ. ಲೋಕಸಭಾ ಚುನಾವಣೆಯ ಮತ ಎಣಿಕೆ ಸಂದರ್ಭ ಈ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮುನ್ನಡೆ ಕಾಯ್ದುಕೊಳ್ಳುವ ಅಭ್ಯರ್ಥಿ ಗೆಲುವಿಗೆ ನಿಕಟರಾಗಿರುತ್ತಾರೆ!

Advertisement

ಕಳೆದ ಎರಡು ಮತ್ತು ಅದಕ್ಕೂ ಹಿಂದಿನ ಲೋಕಸಭಾ ಚುನಾವಣೆ ಫಲಿತಾಂಶಗಳು ಇದನ್ನು ಪುಷ್ಟೀಕರಿಸುತ್ತವೆ. 2009 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರಿಗೆ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮುನ್ನಡೆ ನೀಡಿದ ಮತ್ತು ಪ್ರಮುಖ ಎದುರಾಳಿ ಕಾಂಗ್ರೆಸ್‌ ಸಹಿತ ಎಲ್ಲ ಅಭ್ಯರ್ಥಿಗಳು ಅತಿ ಹೆಚ್ಚು ಅಂತರದಿಂದ ಹಿನ್ನಡೆ ಅನುಭವಿಸಿದ ಕ್ಷೇತ್ರ ಸುಳ್ಯ.

30 ವರ್ಷಗಳಿಂದ ಬಿಜೆಪಿಯ ಭದ್ರ ಕೋಟೆ ಎಂದೇ ಇದು ಜನಜನಿತ. 2013ರ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಿದ್ದರೂ ಸುಳ್ಯದಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ ಕೋಟೆಗೆ ನುಗ್ಗಲು ಕಾಂಗ್ರೆಸ್‌ ಶತಗತಾಯ ಪ್ರಯತ್ನ ಮಾಡಿದ್ದರೂ ನಿರೀಕ್ಷಿತ ಫಲ ಕೊಟ್ಟಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್‌, ಬಿಜೆಪಿ ಸಾಮರ್ಥ್ಯ ರುಜುಪಡಿಸಲು ಪ್ರಯತ್ನ ಆರಂಭಿಸಿವೆ. ಕ್ಷೇತ್ರದಲ್ಲಿ ಚುನಾವಣೆಯ ಹವಾ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

ಮೂವರು ಸಂಸದರು!
ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನ ಕೆಲವು ಗ್ರಾಮಗಳನ್ನು ಹೊಂದಿರುವ ಸುಳ್ಯ ಪರಿಶಿಷ್ಟ ಜಾತಿ -ಪಂಗಡಕ್ಕೆ ಮೀಸಲು. ಆದರೆ ಈ ಮೂಲದ ಮೂವರು ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಸದರಾಗಿರುವುದು ವಿಶೇಷ. ಹಾಗಾಗಿ ಸುಳ್ಯಕ್ಕೆ ಮೂವರು ಸಂಸದರು ಎಂಬ ಮಾತಿದೆ. ಇವರು ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ (ಮಂಡೆಕೋಲು ಸಮೀಪದ ದೇವರಗುಂಡ ಮೂಲ) ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕಾಣಿಯೂರು ಸಮೀಪದ ಕರಂದ್ಲಾಜೆ) ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು (ಪಾಲ್ತಾಡಿ ಗ್ರಾಮದ ಕುಂಜಾಡಿ). ಈ ಮೂವರು ಈ ಬಾರಿಯೂ ಬೇರೆ ಕಡೆಗಳಿಂದ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ ನದು ಇನ್ನೊಂದು ಬಗೆ. ಸುಳ್ಯ ಮೂಲದವರು ಕಾಂಗ್ರೆಸ್‌ನಿಂದ ಅಭ್ಯರ್ಥಿಗಳಾದುದು ಕಡಿಮೆ. 30 ವರ್ಷದಿಂದ ಅವಕಾಶ ವಂಚಿತಗೊಂಡಿರುವ ಕಾಂಗ್ರೆಸ್‌ ಮುಖಂಡರೂ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದು, ರಮಾನಾಥ ರೈ ಬಿಟ್ಟು ಬೇರೆ ಅಭ್ಯರ್ಥಿಗಳಿಗೆ ಅವಕಾಶ ಕೊಡುವುದಿದ್ದರೆ ಸುಳ್ಯಕ್ಕೆ ಅವಕಾಶ ಕೊಡಬೇಕು ಎಂದು ಬಹಿರಂಗವಾಗಿಯೇ ಒತ್ತಾಯಿಸಿದ್ದಾರೆ.

ಯಾವಾಗ ಯಾರಿಗೆ ಮುನ್ನಡೆ?
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎಸ್‌. ಅಂಗಾರ (61,144 ಮತಗಳು) ಕಾಂಗ್ರೆಸ್‌ನ ಡಾ| ರಘು (56,822) ವಿರುದ್ಧ 4,322 ಮತಗಳಿಂದ ಗೆದ್ದಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು (73,623 ಮತಗಳು) ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ (51,699 ಮತಗಳು)ವಿರುದ್ಧ 21,924 ಮತಗಳಿಂದ ಗೆಲುವು ಸಾಧಿಸಿದ್ದರು.

Advertisement

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಂಗಾರ (65,913 ಮತಗಳು) ಕಾಂಗ್ರೆಸ್‌ನ ಡಾ| ರಘು (64,540) ವಿರುದ್ಧ 1,373 ಮತಗಳಿಂದ ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್‌ (92,629 ಮತಗಳು) ಕಾಂಗ್ರೆಸ್‌ನ ಜನಾರ್ದನ ಪೂಜಾರಿ (58,605 ಮತಗಳು) ವಿರುದ್ಧ 34,024 ಮತಗಳಿಂದ ಜಯ ಸಾಧಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಂಗಾರ (95,205 ಮತಗಳು) ಅವರಿಗೆ ಕಾಂಗ್ರೆಸ್‌ನ ಡಾ|ರಘು (69,137) ವಿರುದ್ಧ 26,068 ಮತಗಳ ಗೆಲುವಾಗಿತ್ತು.

ಮೋದಿ ಅಲೆಯೇ ಆಧಾರ
ಬಿಜೆಪಿಗೆ ಪ್ರಧಾನಿ ಮೋದಿ ಆಲೆಯೇ ಆಧಾರ. ಹಾಗಾಗಿ ಪ್ರಚಾರಕ್ಕೆ ಹೆಚ್ಚಾಗಿ ಬಳಸುತ್ತಿರುವುದು ಅದನ್ನೇ. ಈಗಾಗಲೇ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದೆ. ನಳಿನ್‌ ಹುಟ್ಟೂರಿನ ಕ್ಷೇತ್ರವಾಗಿದ್ದರೂ ಈ ಬಾರಿ ಹಿಂದಿನ ಬಾರಿಯಂಥ ಕ್ಷೇಮ ವಾತಾವರಣವಿಲ್ಲ. ಕೆಲವು ಕಾರ್ಯಕರ್ತರು ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹರಿಯಬಿಟ್ಟಿದ್ದರು. ಆದಾಗ್ಯೂ ಅಭ್ಯರ್ಥಿ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಮತದಾರರು ತೂಗಿ ಆಳೆಯತೊಡಗಿದ್ದಾರೆ.

ಅಭ್ಯರ್ಥಿಯ ಕುತೂಹಲ!
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾರೆಂಬ ಕುತೂಹಲ ಇದೆ. ಶಾಸಕ, ಸಚಿವರಾಗಿದ್ದ ಸಂದರ್ಭ ಸುಳ್ಯ ಕ್ಷೇತ್ರದಲ್ಲಿ ಹೆಚ್ಚು ಓಡಾಡಿದ ಮತ್ತು ಸುಳ್ಯ ವಿಧಾಸಭೆಯ ಕಾಂಗ್ರೆಸ್‌ ಮುಖಂಡರು, ಕಾರ್ಯ ಕರ್ತರಿಗೆ ಸರಕಾರಿ ಹಂತದಲ್ಲಿ ಆಗಬೇಕಾದ ಕೆಲಸಗಳಿಗೆ ಆಸರೆಯಾಗುವ ರಮಾನಾಥ ರೈ ಅವರಿಗೇ ಟಿಕೆಟ್‌ ಸಿಗಲಿ ಎಂಬ ಮಾತೂ ಇದೆ. ಕಾದು ನೋಡಬೇಕಿದೆ.

ಚುನಾವಣೆ ಸಿದ್ಧತೆ
ಕ್ಷೇತ್ರದಲ್ಲಿ ಡಾ| ಮಂಜುನಾಥ್‌ ಸಹಾಯಕ ಚುನಾವಣಾಧಿಕಾರಿಯಾಗಿ, ಚಂದ್ರಶೇಖರ ಪೇರಾಲು ಸಹ ಚುನಾವಣಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಕೌಂಟಿಂಗ್‌ ಟೀಮ್‌, ಮಾಸ್ಟರ್‌ ಟ್ರೈನರ್ ಟೀಮ್‌, ಸ್ಟಾಟಿಕ್‌ ಸರ್ವೆ ಲೆನ್ಸ್‌ ಟೀಮ್‌, ವೀಡಿಯೊ ವ್ಯೂವಿಂಗ್‌ ಟೀಮ್‌, ವೀಡಿಯೊ ಸರ್ವೆ ಲೆನ್ಸ್‌ ಟೀಮ್‌, ಎಂಸಿಸಿ ನೋಡಲ್‌ ಆಫೀಸರ್‌ಗಳು, ಫ್ಲಯಿಂಗ್‌ ಸ್ಕ್ವಾಡ್‌ ಹೀಗೆ ವಿವಿಧ ತಂಡ ಸಿದ್ಧಗೊಂಡಿವೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next