Advertisement

ಸುಳ್ಯದಲ್ಲಿ ಮುಗಿಯದ ಚುನಾವಣಾ ಕಾವು

12:00 AM Apr 21, 2019 | mahesh |

ಸುಳ್ಯ: ಲೋಕಸಭಾ ಚುನಾವಣೆ ಮತದಾನ ಮುಕ್ತಾಯ ಕಂಡಿದೆ. ಹಾಗಂತ ರಾಜಕೀಯ ಪಕ್ಷಗಳ ಪ್ರಚಾರ, ಮತದಾರರ ಮತದಾನಕ್ಕೆ ವಿರಾಮ ಸಿಕ್ಕಿತ್ತು ಎಂದಲ್ಲ. ಸುಳ್ಯ ನ.ಪಂ. ಚುನಾವಣೆ ಸದ್ಯದಲ್ಲೇ ಎದುರುಗೊಳ್ಳುತ್ತಿರುವುದು ಇದಕ್ಕೆ ಕಾರಣ. ಮಾರ್ಚ್‌ ತಿಂಗಳಲ್ಲಿ ಆಡಳಿತ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿ ನೇಮ ಕಕೊಂಡಿರುವ ನ.ಪಂ.ನ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದೆ. ವಾರ್ಡ್‌ವಾರು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ ಗೊಂಡು ಕೆಲವು ತಿಂಗಳು ಕಳೆದಿದ್ದು, ಚುನಾವಣೆ ದಿನಾಂಕ ಮಾತ್ರ ಘೋಷಣೆಗೆ ಬಾಕಿ ಉಳಿದಿದೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ನ.ಪಂ. ಚುನಾವಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.

Advertisement

ಆರು ವರ್ಷಗಳ ಅವಧಿ!
ಹಿಂದಿನ ಬಾರಿ 2013 ಮಾರ್ಚ್‌ 7ರಂದು ಚುನಾವಣೆ ನಡೆದು, ಮಾ. 11ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅಂದರೆ 2019ರ ಮಾರ್ಚ್‌ಗೆ ಆರು ವರ್ಷ ತುಂಬಿದೆ. ನಿಯಮ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕು. 2013ರ ಚುನಾವಣೆ ಮತ ಎಣಿಕೆ ಆಗಿ, ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ವಿಳಂಬವಾದ ಕಾರಣ, ಒಂದು ವರ್ಷ ನ.ಪಂ.ನಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. 2014 ಮಾ. 11ರಂದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಲ್ಲಿಂದ ಚುನಾಯಿತ ಸದಸ್ಯರ ಅವಧಿ ಆರಂಭ ಗೊಳ್ಳುವ ಕಾರಣ, 2019 ಮಾ. 11ಕ್ಕೆ ಐದು ವರ್ಷ ತುಂಬುತ್ತದೆ. ಅದೇ ಲೆಕ್ಕದಲ್ಲಿ ಚುನಾವಣೆ ನಡೆಯಲಿದೆ.

ವಾರ್ಡ್‌ ಸಂಖ್ಯೆ ಹೆಚ್ಚಳ
ಈ ಬಾರಿ ವಾರ್ಡ್‌ಗಳ ಪುನರ್‌ ವಿಂಗ ಡನೆ ನಡೆದು, 2 ವಾರ್ಡ್‌ಗಳನ್ನು ಹೊಸದಾಗಿ ರಚಿಸಲಾಗಿದೆ.
ಈಗಿರುವ 18 ವಾರ್ಡ್‌ಗಳ ಜತೆಗೆ ಹೊಸದಾಗಿ ಎರಡು ಸೇರ್ಪಡೆಗೊಂಡು, 20ಕ್ಕೆ ಏರಿಕೆ ಕಂಡಿದೆ. ಈ ಹಿಂದಿನ ಆಡಳಿತದ 18 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್‌ 5 ಹಾಗೂ ಎಸ್‌ಡಿಪಿಐ 1 ಸ್ಥಾನ ಹೊಂದಿ, ಬಿಜೆಪಿ ಆಡಳಿತ ಪಡೆದಿತ್ತು.

ಪುರಸಭೆ ಬೇಡಿಕೆ ಈಡೇರಿಲ್ಲ
ನಗರ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿದ್ದರೂ ಅನುಷ್ಠಾನವಾಗಿಲ್ಲ. ಪುರಸಭೆ ಆಗಲು ಬೇಕಾದ ಎಲ್ಲ ಮಾನದಂಡಗಳನ್ನು ಹೊಂದಿದ್ದರೂ, ಸರಕಾರದ ಮಟ್ಟದಲ್ಲಿ ಒತ್ತಡ ಹೇರುವ ಕಾರ್ಯ ಪ್ರಬಲವಾಗಿ ಆಗದ ಕಾರಣ, ಈ ಬಾರಿಯು ನ.ಪಂ. ಆಡಳಿತಕ್ಕೆ ಚುನಾವಣೆ ನಡೆಯಲಿದೆ.

13,880 ಮತದಾರರು:
20 ವಾರ್ಡ್‌ಗಳಲ್ಲಿ ಒಟ್ಟು 13,880 ಮತದಾರರು ಇದ್ದು, 6,854 ಪುರುಷ ಮತ್ತು 7,026 ಮಹಿಳಾ ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಹೊಂದಿದ್ದಾರೆ. ಒಟ್ಟು ಮತಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ವಾರ್ಡ್‌ ಸಂಖ್ಯೆ 14ರಲ್ಲಿ (ಸ್ನೇಹ ಹಿ.ಪ್ರಾ. ಶಾಲೆ ಕಲ್ಲುಮುಟ್ಲು ಮತಗಟ್ಟೆ) ಗರಿಷ್ಠ 1,065 ಮತದಾರರಿದ್ದಾರೆ. ವಾರ್ಡ್‌ ಸಂಖ್ಯೆ 9ರಲ್ಲಿ (ಎನ್‌ಎಂಸಿ ಕಾಲೇಜು ಮತಗಟ್ಟೆ) ಕನಿಷ್ಠ 341 ಮತದಾರರು ಇದ್ದಾರೆ.

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next