Advertisement

ಸುಳ್ಯ ನಗರ ಪಂ. ಮುಂಭಾಗ ತ್ಯಾಜ್ಯ ರಾಶಿ: ಸದಸ್ಯರಿಂದ ಪ್ರತಿಭಟನೆ

01:26 AM Jun 18, 2020 | Sriram |

ಸುಳ್ಯ: ನಗರದ ಹಸಿ ಮತ್ತು ಒಣ ತ್ಯಾಜ್ಯವನ್ನು ಕಳೆದ ಎರಡು ವರ್ಷಗಳಿಂದ ನ.ಪಂ. ಆವರಣದಲ್ಲೇ ರಾಶಿ ಹಾಕಿದ ಪರಿಣಾಮ ಪರಿಸರವಿಡೀ ಗಬ್ಬುನಾತ ಹಬ್ಬಿದೆ. ದುರ್ವಾಸನೆ ಸಹಿಸಲಾಗದೆ ನ.ಪಂ. ಸಿಬಂದಿ ಕರ್ತವ್ಯ ನಿರ್ವಹಿಸುವ ಕಚೇರಿಯನ್ನು ಸ್ಥಳಾಂತರಿಸುವ ಬದಲು ತ್ಯಾಜ್ಯ ರಾಶಿ ಸ್ಥಳಾಂತರಿಸುವಂತೆ ನ.ಪಂ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಮತ್ತು ಪಕ್ಷೇತರ ಸದಸ್ಯರು ಆಗ್ರಹಿಸಿದ್ದಾರೆ.

Advertisement

ನ.ಪಂ. ಮುಂಭಾಗದಲ್ಲಿ ಜೂ. 17ರಂದು ಪ್ರತಿಭಟನೆ ನಡೆಸಿದ ಅವರು ನಗರ ಪಂ. ಅವರಣದಲ್ಲಿ ಸೊಳ್ಳೆ ನಿರೋಧಕ ಔಷಧ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಎಚ್ಚರಿಕೆ
ನ.ಪಂ. ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ನಗರ ಪಂ. ಕಚೇರಿಯ ಬಳಿ ತ್ಯಾಜ್ಯ ಸುರಿದು ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತಿಸಿರುವುದು ನಾಚಿಕೆಗೇಡಿನ ಸಂಗತಿ. ಇದನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ, ಪ್ರತಿಭಟನೆ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ. ಶಾಸಕರು, ಸಂಸದರ ಸ್ಪಂದನೆಯೂ ಇಲ್ಲ. ಮಳೆಗಾಲ ಆರಂಭವಾಗಿದ್ದು, ಇಲ್ಲಿನ ಸ್ಥಿತಿಗತಿ ಸಾಂಕ್ರಾಮಿಕ ರೋಗ ಉತ್ಪತ್ತಿ ತಾಣದಂತಿದೆ ಎಂದು ಆರೋಪಿಸಿದರು. ಈ ಬಗ್ಗೆ ಒಂದು ವಾರದಲ್ಲಿ ತ್ಯಾಜ್ಯ ರಾಶಿ ತೆರವು ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರ ಪಂ. ಪಕ್ಷೇತರ ಸದಸ್ಯ ಉಮ್ಮರ್‌ ಕೆ.ಎಸ್‌. ಮಾತನಾಡಿ, ಸುಳ್ಯ ನಗರ ಪಂ.ಗೆ ತ್ಯಾಜ್ಯ ಡಂಪಿಂಗ್‌ ಯಾರ್ಡ್‌ ಇರುವಾಗ ನಗರ ಪಂ. ಮುಂಭಾಗ ತ್ಯಾಜ್ಯ ಸುರಿದಿರುವುದು ಸರಿಯಲ್ಲ. ಅಧಿಕಾರಿಗಳ ಬಳಿ ಹಲವು ಬಾರಿ ಪ್ರಸ್ತಾವಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭ ನ.ಪಂ. ಸದಸ್ಯರಾದ ಬಾಲಕೃಷ್ಣ ಭಟ್‌, ದೀರ ಕ್ರಾಸ್ತ, ರಿಯಾಜ್‌, ಧರ್ಮಪಾಲ ಕೊಯಿಂಗಾಜೆ, ಶಹೀದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಪರ್ಯಾಯ
ವ್ಯವಸ್ಥೆಯ ಭರವಸೆ
ನ.ಪಂ. ಮುಖ್ಯಾಧಿಕಾರಿ ಮತ್ತಡಿ ಅವರ ಕಚೇರಿಗೆ ತೆರಳಿದ ಪ್ರತಿಭಟನಕಾರರು ತ್ಯಾಜ್ಯ ರಾಶಿಯನ್ನು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಆಗ್ರಹಿಸಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿಲೇವಾರಿಗೆ ತೊಡಕು ಉಂಟಾಗಿದೆ. ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next