ಸುಳ್ಯ: ಇಲ್ಲಿಯ ಖಾಸಗಿ ಬಸ್ ನಿಲ್ದಾಣದ ಬಳಿ, ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್‌ನ ಮಧ್ಯ ಭಾಗವನ್ನು, ಯಾರೋ ಹರಿದು ತೆಗೆದುಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಿಸಿ ಕೆಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪ್ರಮುಖ ಮಾಹಿತಿ ಕಲೆ ಹಾಕಿದ್ದಾರೆ.
ರಿಕ್ಷಾ ಸಂಘದ ಅಧ್ಯಕ್ಷರು ನೀಡಿದ ದೂರಿನಂತೆ ಸಿಸಿ ಕೆಮರಾ ಪರಿಶೀಲಿಸಿದಾಗ ಜ.5ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ ಅಪರಿಚಿತ ವ್ಯಕ್ತಿಯೋರ್ವ ಬ್ಯಾನರ್ ಹರಿದು ಕೈಯಲ್ಲಿ ಹಿಡಿದುಕೊಂಡು ಪೇಟೆಯಲ್ಲಿ ಸುತ್ತಾಡಿರುವುದು ಕಂಡುಬಂದಿದೆ.
ಆ ಬಳಿಕ ವಿವೇಕಾನಂದ ಸರ್ಕಲ್ ಬಳಿ ಹರಿದ ಬ್ಯಾನರ್ ತುಂಡನ್ನು ಇಟ್ಟುಕೊಂಡಿರುವುದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ವ್ಯಕ್ತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ರವಿವಾರ ಸುಳ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಯಾನರ್ ಹರಿದ ಪ್ರಕರಣವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಖಂಡಿಸಿದೆ.