ಸುಳ್ಯ: ಬೆಳ್ಳಾರೆಯ ಯುವ ಉದ್ಯಮಿಯೋರ್ವರನ್ನು ಆ್ಯಂಬುಲೆನ್ಸ್‌ನಲ್ಲಿ ಬಂದ ತಂಡ ಅಪಹರಣ ಮಾಡಲು ಯತ್ನಿಸಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಘಟನೆ ವೇಳೆ ಉದ್ಯಮಿಯ ತಾಯಿ ಗಾಯಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಬೆಳ್ಳಾರೆಯ ಕಾಮಧೇನು ಜುವೆಲರ್ಸ್ ಮಾಲಕ ನವೀನ್ ಗೌಡ ಅವರನ್ನು ತಮ್ಮ ಮನೆಯಲ್ಲಿದ್ದ ವೇಳೆ ಆ್ಯಂಬುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ಅಪರಿಚಿತರ ತಂಡ ಬಲವಂತವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ನವೀನ್‌ರನ್ನು ಆ್ಯಂಬ್ಯುಲೆನ್ಸ್‌ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆ್ಯಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆ್ಯಂಬುಲೆನ್ಸ್‌ನವರು ಬೆಳ್ಳಾರೆಯಿಂದ ಹೋದ ಆ್ಯಂಬುಲೆನ್ಸ್ ಅನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನವೀನ್ ಅವರ ತಾಯಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂಡದಿಂದ ಕೃತ್ಯ
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ನವೀನ್ ತಾಯಿ ನೀರಜಾಕ್ಷಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮಧ್ಯಾಹ್ನ ಆ್ಯಂಬುಲೆನ್ಸ್‌ನಲ್ಲಿ 7-8 ಜನ ಬಂದು ನವೀನ್‌ನನ್ನು ಅಪಹರಣ ಮಾಡಿದ್ದಾರೆ. ಈ ವೇಳೆ ತಡೆಯಲು ಬಂದ ನಮ್ಮನ್ನು ದೂಡಿದ್ದು, ನಮಗೆ ಗಾಯವಾಗಿದೆ.
ಬೆಳ್ಳಾರೆ ಠಾಣೆಗೆ ದೂರು ನೀಡಲು ಹೋದ ವೇಳೆ ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದಾರೆ. ಉದ್ಯಮಿ ನವೀನ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮಧ್ಯಾಹ್ನ ನಾನು ಮನೆಯಲ್ಲಿದ್ದ ವೇಳೆ ಬಲತ್ಕಾರದಿಂದ ಆ್ಯಂಬುಲೆನ್ಸ್‌ನಲ್ಲಿ ನನ್ನನ್ನು ಕೂರಿಸಿಕೊಂಡಿದ್ದಾರೆ. ಬಳಿಕ ಇಂಜೆಕ್ಷನ್ ನೀಡಿದ್ದಾರೆ. ಕುಟುಂಬ ಕಲಹ ವಿಚಾರದಲ್ಲಿ ಕೃತ್ಯ ನಡೆಸಲಾಗಿದೆ ಎಂದವರು ದೂರಿದ್ದಾರೆ.