Advertisement
ಜೀವನದ ಬಗ್ಗೆ ಅದೆಷ್ಟೋ ಸುಂದರ ಕನಸುಗಳನ್ನು ಹೆಣೆದು ಕೊಂಡಿದ್ದ ಕಾಸರಗೋಡಿನ ಅಕ್ಷತಾ ಎಂಬ ಹೆಣ್ಣು ಮಗಳು, ಬೀದಿ ರೋಮಿಯೋನೊಬ್ಬನ ವಿಕೃತ ಮನಸ್ಸಿನಿಂದಾಗಿ ವಾರದ ಹಿಂದೆ ಸುಳ್ಯದ ರಥಬೀದಿಯ ನಡುವೆ ಹತಳಾಗಿ ಇಹಲೋಕ ತ್ಯಜಿಸಿದ್ದಾಳೆ. ದೂರದ ಚೆನ್ನೈ, ದಿಲ್ಲಿ, ಹೈದರಾಬಾದ್‌ನಲ್ಲಿ ಇಂತಹ ಘಟನೆ ನಡೆದಾಗ ಅಯ್ಯೋ ಎಂದು ಮರುಗಿದ್ದ ನಮಗೆ ಇದೀಗ ನಮ್ಮದೇ ಜಿಲ್ಲೆಯಲ್ಲಿ ಅಮಾನವೀಯ ಕೃತ್ಯ ನಡೆದು ಹೋಗಿರುವುದು ಬೆಚ್ಚಿ ಬೀಳಿಸಿದೆ. ಅದೂ ಆಧುನಿಕತೆಯ ಗಾಳಿ ಅಷ್ಟಾಗಿ ಬೀಸದ ಗ್ರಾಮ್ಯ ಭಾಗದ ಸುಳ್ಯ ಪರಿಸರದಲ್ಲಿ ಈ ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
Related Articles
ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದಳೆಂಬ ಒಂದೇ ಕಾರಣಕ್ಕೆ ಮೃದು ಮನಸ್ಸಿನ (ಆತನನ್ನು ಹತ್ತಿರದಿಂದ ಬಲ್ಲವರು ಹೇಳಿಕೊಂಡಂತೆ) ಕಾರ್ತಿಕ್ ಮೃಗೀಯನಾಗಿ ಸುಳ್ಯದ ನಡು ಬೀದಿಯಲ್ಲಿ ಅಕ್ಷತಾಳನ್ನು ಅಮಾನುಷ ರೀತಿಯಲ್ಲಿ ಏಳೆಂಟು
ಬಾರಿ ಇರಿದು ಸಾಯಿಸಿದ್ದಾನೆ. ಸಾವು ಬೆನ್ನ ಹಿಂದೆಯೇ ಇದ್ದರೂ, ಏನೂ ತಿಳಿಯದೆ ಸುಳ್ಯ ಬಸ್ ನಿಲ್ದಾಣದ ಕಡೆಗೆ ನಗುನಗುತ್ತಾ ಹೆಜ್ಜೆ ಹಾಕಿದ್ದ ಅಕ್ಷತಾ, ಏಕಾಏಕಿ ಮೇಲೆರಗಿದ ಸಾವಿಗೆ ಮುಖ ಮಾಡಿ ಇನ್ನೆಂದೂ ಬಾರದ ಲೋಕಕ್ಕೆ ಹೊರಟು ಹೋಗಿದ್ದಾಳೆ. ಮನೆಯ ನಂದಾದೀಪವಾಗಿ ಬೆಳಗಬೇಕಿದ್ದ ಹೆಣ್ಣು ಮಗಳ ಸ್ಥಿತಿಗೆ ಹೆತ್ತಾಕೆಯ ಜೀವ ಅದೆಷ್ಟು ಮರುಗಿರಬಹುದೋ…
Advertisement
ತಮಿಳುನಾಡಿನಲ್ಲಿ 2016 ಜೂನ್ 24ರಂದು ಇದೇ ಮಾದರಿ ಯಲ್ಲಿ ಸ್ವಾತಿ ಎಂಬಾಕೆಯ ಹತ್ಯೆ ನಡೆದಿತ್ತು. ಫೇಸುºಕ್‌ನಲ್ಲಿ ಪರಿಚ ಯ ವಾದ ರಾಮ್‌ಕುಮಾರ್ ಎಂಬಾತ ಚೆನ್ನೈ ರೈಲ್ವೇ ಸ್ಟೇಷನ್‌ನಲ್ಲಿ ಕಾದು ಕುಳಿತು ಸ್ವಾತಿಯ ಹತ್ಯೆಗೈದಿದ್ದ. ಇದೂ ಪ್ರೀತಿಯ ಕಾರಣಕ್ಕಾಗಿಯೇ ನಡೆದಿದ್ದ ಹತ್ಯೆಯಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಬೆಂಗಳೂರು, ಹೈದರಾಬಾದ್‌ನಲ್ಲಿಯೂ ಇದೇ ರೀತಿಯ ಹತ್ಯೆಗಳು ನಡೆದು ಹೋಗಿವೆ. ಆದರೆ ಇದೀಗ ನಮ್ಮದೇ ಜಿಲ್ಲೆಯ ಸುಳ್ಯದಲ್ಲಿ ಹೀಗೊಂದು ಘಟನೆ ನಡೆದಿರುವುದು ಸುಸಂಸ್ಕೃತ ಜಿಲ್ಲೆಯನ್ನು ತಲೆ ತಗ್ಗಿಸುವಂತೆ ಮಾಡಿರುವುದು ದಿಟ.
ನ್ಯಾಯ ಕೇಳಬೇಕು ಎನಿಸಿಲ್ಲವೇ?ತನ್ನದಲ್ಲದ ತಪ್ಪಿಗೆ ಇಹಲೋಕ ತ್ಯಜಿಸಿದ ಆಕೆ ನಾಗರಿಕ ಸಮಾಜಕ್ಕೆ ಒಂದಷ್ಟು ಪ್ರಶ್ನೆಗಳನ್ನು ಬಿಟ್ಟು ಹೋಗಿದ್ದಾಳೆ. ಒಂದು ವೇಳೆ ಕಾರ್ತಿಕ್ ಸ್ಥಾನದಲ್ಲಿ ಅನ್ಯ ಧರ್ಮದ ಯುವಕರ್ಯಾರಾದರು ಇರುತ್ತಿ ದ್ದರೆ? ಬಹುಶಃ ಸುಳ್ಯವೇಕೆ ಇಡೀ ದಕ್ಷಿಣ ಕನ್ನಡದಲ್ಲಿಯೂ ಘಟನೆ ಗಂಭೀರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು. ಲಕ್ಷ ಲಕ್ಷ ಪರಿಹಾರಕ್ಕಾಗಿ ಬೇಡಿಕೆ ಮುಂದಿಡುತ್ತಿದ್ದರು. ಬೇಡವೆಂದರೂ ಮೃತಳ ಮನೆ ಬಾಗಿಲಿಗೆ ತೆರಳಿ ಪರಿಹಾರದ ಚೆಕ್ ನೀಡುವ ಕಾರ್ಯವೂ ಎಗ್ಗಿಲ್ಲದೆ ನಡೆಯುತ್ತಿತ್ತು. ಸಾಮಾಜಿಕ ತಾಣಗಳ ಸೋ ಕಾಲ್ಡ್ ಬರಹಗಾರರಿಗೆ ಅಕ್ಷತಾ “ತಂಗಿ’ಯಾಗಿಬಿಡುತ್ತಿದ್ದಳು; ಆಕೆಯ ಹೆಸರಿನಲ್ಲಿ ಹತ್ತು ಹಲವು ಬರಹಗಳನ್ನು ಕಾಣಬಹು ದಿತ್ತು. ಆದರೆ ಈಗ? ದುರಂತ ಎಂದರೆ ಮಾಧ್ಯಮಗಳು ಬರೆದು ಪ್ರಶ್ನಿಸುವ ತನಕ ಒಬ್ಬನೇ ಒಬ್ಬ ಮನುಷ್ಯನಿಗೂ ಅಕ್ಷತಾ ಹತ್ಯೆ ಗಂಭೀರವಾಗಿ ಕಂಡಿಲ್ಲ. ತನ್ನ ಪಾಡಿಗೆ ತಾನಿದ್ದ ಬಡ ಕುಟುಂಬದ ಹೆಣ್ಣು ಮಗಳ ಈ ಸಾವಿಗೆ ನ್ಯಾಯ ಕೇಳಬೇಕು ಎನಿಸಿಲ್ಲ. ರಾಜಕೀಯದವರೇಕೆ ಮೌನ?
ಜೀವನದ ಬಗ್ಗೆ ಸಾವಿರ ಕನಸು ಹೊತ್ತು ಸುಳ್ಯದಲ್ಲಿ ಕಾಲೇಜು ಸೇರಿದ್ದಳು ಅಕ್ಷತಾ. ಪ್ರೀತಿ-ಪ್ರೇಮದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗಿದ್ದ ಆಕೆಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದರೂ, ಆಕೆ ಸೊಪ್ಪು ಹಾಕದ್ದಕ್ಕೆ ಈ ಕೊಲೆ ನಡೆದು ಹೋಗಿದೆ. ಆರೋಪಿ ಯನ್ನು ಬಂಧಿಸಿರುವುದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ರುವುದು… ಎಲ್ಲÉ ಈಗಾಗಲೇ ಪ್ರಕ್ರಿಯೆಗಳು ಸಾಗುತ್ತಿವೆ. ಮುಂದೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಕಾದು ನೋಡಬೇಕಷ್ಟೇ. ಆದರೆ ಇಷ್ಟಾದರೆ ಮುಗಿಯಿತೇ? ಅಕ್ಷತಾಳ ಹತ್ಯೆ ವಿರೋಧಿಸಿ ತತ್‌ಕ್ಷಣಕ್ಕೆ ಧ್ವನಿ ಎತ್ತಿದ್ದು ಎಬಿವಿಪಿ ಸಂಘಟನೆ. ಆರೋಪಿಗೆ ಶಿಕ್ಷೆಯಾಗಬೇಕೆಂದು ಎಬಿವಿಪಿ ಒತ್ತಾಯಿ ಸಿದೆಯಾದರೂ, ಈ ಸಂಘಟನೆಯ ಮುಂದಿನ ನಡೆ ಏನೆಂಬುದು ಗೊತ್ತಿಲ್ಲ. ಉಳಿದಂತೆ ಮನೆಗೆ ಭೇಟಿ ನೀಡಿರುವುದು, ಪರಿಹಾರಕ್ಕೆ ಒತ್ತಾಯಿಸಿ ಹೇಳಿಕೆ ನೀಡಿದ್ದನ್ನು ಬಿಟ್ಟರೆ ಅಕ್ಷತಾ ಹತ್ಯೆಯ ವಿಚಾರದಲ್ಲಿ ಯಾವೊಬ್ಬ ರಾಜಕಾರಣಿಯೂ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿಲ್ಲ. ಕೂಲಂಕಷ ತನಿಖೆಗಾಗಿ ಒತ್ತಾಯಿಸಿಲ್ಲ. ಏಕೆಂದರೆ ಆಕೆಯ ಸಾವಿನಲ್ಲಿ ರಾಜಕೀಯ ಮಾಡುವಂತಹ ಯಾವುದೇ ಅಂಶಗಳು ರಾಜಕೀಯದವರಿಗೆ ಸಿಕ್ಕಿಲ್ಲ. ಕಾರ್ತಿಕ್ ಅನ್ಯ ಧರ್ಮೀಯನೋ, ಅನ್ಯ ಪಕ್ಷದವನೋ ಆಗಿದ್ದರೆ ಒಂದು ಕೈ ನೋಡಬಹುದಿತ್ತು; ಆದರೆ ಇಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಏನು ಲಾಭ ಎಂಬ ರಾಜಕೀಯ ಲೆಕ್ಕಾಚಾರ ಎಣಿಸುತ್ತಾ ರಾಜಕೀಯ ನಾಯಕರು ಕುಳಿತಂತಿದೆ. ಮಹಿಳಾವಾದಿಗಳು ಮಲಗಿದ್ದಾರೆ
ಯಾವುದೋ ಸಂಘಟನೆಗಳ ಕಾರ್ಯಕರ್ತರಿಂದ ಹೆಣ್ಣು ಮಕ್ಕಳ ಮೇಲೆ ಹಲ್ಲೆಯಾದರೆ, ಹುಡುಗ-ಹುಡುಗಿ ಜೊತೆ ಯಾಗಿರುವುದನ್ನು ಪ್ರಶ್ನಿಸಿದರೆ ಹೆಣ್ಣು ಮಕ್ಕಳ ಸ್ವಾತಂತ್ರÂವನ್ನೇ ಕಿತ್ತುಕೊಂಡರು ಎಂದು ಬೊಬ್ಬಿರಿಯುವ ಮಹಿಳಾವಾದಿ ಸಂಘಟ ನೆಗಳಿಗೆ ಇದೀಗ ಮುಗ್ಧ ಹುಡುಗಿ ಅಕ್ಷತಾ ಹತ್ಯೆ ಕಾಣಿಸುತ್ತಿಲ್ಲ. ಒಂದೆರಡು ಮಹಿಳಾ ಸಂಘಟನೆಗಳನ್ನು ಹೊರತುಪಡಿಸಿದರೆ, ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ತೋರುವ ಇಂತಹ ಮಹಿಳಾ ಸಂಘಟನೆಗಳು ಅಕ್ಷತಾ ಹತ್ಯೆ ವಿಚಾರದಲ್ಲಿ ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸಲೂ ಮರೆತಿವೆ. ದೂರದ ಹೊಸ ದಿಲ್ಲಿಯೋ, ಬೆಂಗಳೂರಿನಲ್ಲೋ ಇಂತಹ ಘಟನೆಗಳು ನಡೆದಾಗ ಪ್ರತಿಭಟಿಸಿ ಆರೋಪಿಗೆ ಶಿಕ್ಷೆ ಕೊಡಿಸಲು ಒತ್ತಾಯಿಸುವ ಮಹಿಳಾವಾದಿ ಸಂಘಟನೆಗಳು ನಮ್ಮದೇ ಜಿಲ್ಲೆಯ ಸುಳ್ಯದಲ್ಲಿ ನಡೆದ ಘಟನೆಯನ್ನು ಕಂಡೂ ಕಾಣದಂತೆ ಸುಮ್ಮನಾಗಿರುವುದು ದುರಂತವಾಗಿದೆ. ಏನು ಸಂದೇಶ ಕೊಡುವಿರಿ?
ಸಾಹಿತ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ಸುಳ್ಯಕ್ಕೆ ಎಲ್ಲೆಡೆಯೂ ಉತ್ತಮ ಹೆಸರಿದೆ. ಬಹುಶಃ ಇಂತಹ ಆತಂಕಕಾರಿ ಘಟನೆ ಸುಳ್ಯಕ್ಕೆ ಹೊಸತು. ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಇಂತಹ ಅಮಾನವೀಯ ಹತ್ಯೆ ನಡೆದಿರುವುದು ನಾಗರಿಕ ಸಮಾಜವೇ ಆಶ್ಚರ್ಯಪಡುವಂತಾಗಿದೆ. ಈ ಘಟನೆಯಿಂದಾಗಿ ಅದೆಷ್ಟೋ ಹೆಣ್ಣು ಮಕ್ಕಳ ಹೆತ್ತವರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸುಳ್ಯದ ಹೃದಯ ಭಾಗದಲ್ಲಿ ನಡೆದ ಈ ಭೀಕರ ಘಟನೆಯ ಬಗ್ಗೆ ಧ್ವನಿ ಎತ್ತಬೇಕಾದವರೆಲ್ಲ ಮೌನಕ್ಕೆ ಜಾರಿರುವುದನ್ನು ನೋಡಿದರೆ, ಮುಂದಿನ ದಿನಗಳು ಹೇಗೆ ಎಂಬ ಚಿಂತೆ ಹೆತ್ತವರನ್ನು ಕಾಡಲು ಶುರುವಾಗಿದೆ. ಕಾರ್ತಿಕ್‌ಗೆ ಸರಿಯಾದ ಶಿಕ್ಷೆಯಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಒತ್ತಾಯಿಸುವ ಧ್ವನಿ ಮೊಳಗಬೇಕಿರುವುದು ಈ ಹೊತ್ತಿನ ಅವಶ್ಯವೂ ಆಗಿದೆ. ಒಂದು ವೇಳೆ ಆತ ಶಿಕ್ಷೆಯಿಂದ ಪಾರಾದರೆ, ಆತನ ಪರವಾಗಿ ವಾದಿಸಲು ನ್ಯಾಯವಾದಿಗಳು ಮುಂದಾದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಅಷ್ಟೇ ಸತ್ಯ. ಶಿಕ್ಷೆಯಾಗದೆ ಹೋದಲ್ಲಿ ಕೊಲೆ ಮಾಡಿದರೆ ತಪ್ಪೇನಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಷಮಿಸುವ ಆತಂಕದ ದಿನಗಳು ದೂರವಿಲ್ಲ. ಅದಕ್ಕಾಗಿಯೇ ಯಾವುದೇ ಕಾರಣಕ್ಕೆ ಇಂತಹ ಕೃತ್ಯ ಎಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಾದುದು ಜವಾಬ್ದಾರಿಯುತ ಸಮಾಜದ ಆದ್ಯ ಹೊಣೆಗಾರಿಕೆ. ಇಲ್ಲದೇ ಹೋದಲ್ಲಿ ಸಮಾಜಕ್ಕೆ ಅದೆಂತಹ ಸಂದೇಶ ಸಿಗಬಹುದು ಎಂಬುದನ್ನು ಯೋಚಿಸಬೇಕಿದೆ. ಪ್ರೀತಿ ಆಗದಿರಲಿ ಭೀತಿಗೆ ರಹದಾರಿ
ಪ್ರೀತಿ ಎಂಬುದು ಇಂದು ನಿನ್ನೆಯ ವಿಷಯವಲ್ಲ. ಪ್ರಾಚೀನ ಕಾಲದಿಂದಲೇ ಚಾಲ್ತಿಯಲ್ಲಿದ್ದ ಅನುಭೂತಿಯದು. ಆಗಲೂ ಪ್ರೀತಿಯಲ್ಲಿ ಗೆದ್ದವರಿಗಿಂತ ಹೆಚ್ಚು ಸೋತವರಿದ್ದರು. ಆದರೆ ಪ್ರೀತಿ ವಿಫಲವಾದಾಗ, ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದೋ ಚೂರಿ ಹಾಕಿ ಹತ್ಯೆ ಮಾಡುವಂತಹ ಘಟನೆಗಳು ನಡೆಯುತ್ತಿರಲಿಲ್ಲ. ಅದೆಷ್ಟೋ ಮಂದಿ ಸಿಗದ ಪ್ರೀತಿಯಿಂದ ನೊಂದು ಮದುವೆ ಯಾಗದೇ ಆದರ್ಶ ಮೆರೆದವರಿದ್ದಾರೆ. ಆದರೆ ಆಕೆ ಸಿಗಲಿಲ್ಲವೆಂದು ಜೀವವನ್ನೇ ತೆಗೆದುಬಿಡುವಷ್ಟು ನೀಚ ಮಟ್ಟಕ್ಕೆ ಇಳಿದ ಉದಾ ಹರಣೆಗಳು ಹಿಂದಿನ ಕಾಲದಲ್ಲಿ ಇಲ್ಲವಾಗಿತ್ತು. ಪ್ರಸ್ತುತ ಕಾಲ ಸಂಪೂರ್ಣ ಹದಗೆಟ್ಟಿದೆ. ಪ್ರೀತಿಗಾಗಿ ಜೀವವನ್ನೇ ಬಲಿ ತೆಗೆಯುವ ವಿಷಮ ಕಾಲಘಟ್ಟದಲ್ಲಿ ನಾವಿದ್ದೇವೆಂದರೆ ಇಂತಹ ಪ್ರಕರಣಗಳು ಘಟಿಸದೇ ಇರಲು ಸೂಕ್ತ ತಿಳಿವಳಿಕೆ ನೀಡುವಲ್ಲಿ ನಾವು ಅಸಮರ್ಥ ರಾಗಿದ್ದೇವೆಂದೇ ಅರ್ಥ. ಇದು ಸಮಾಜದ ಲೋಪವೋ, ವ್ಯವಸ್ಥೆಯ ಲೋಪವೋ ತಿಳಿಯದಾಗಿದೆ. ದಾರಿ ತಪ್ಪುವ ಮುನ್ನ…
ಇನ್ನೂ 24ರ ಹರೆಯದ ಕಾರ್ತಿಕ್ ಓದುವ ವಯಸ್ಸಲ್ಲಿ ಪ್ರೀತಿಯ ನಶೆ ಏರಿಸಿಕೊಂಡದ್ದೇ ಈ ಅಮಾನುಷ ಘಟನೆಗೆ ಕಾರಣ. ಕಾಲೇಜು ಹಂತದಲ್ಲಿ ಪ್ರೀತಿ-ಪ್ರೇಮವೆಂದು ಓಡಾಡುವ ಯುವಕ-ಯುವತಿಯರಿಗೂ ಈ ಘಟನೆ ಪಾಠವಾಗಬೇಕು. ಪ್ರೀತಿ ನಿರಾಕರಣೆಗೆ ಹತ್ಯೆಯೊಂದೇ ಪರಿಹಾರ ಎಂಬ ದುರಾ ಲೋಚನೆ ಇನ್ನು ಮುಂದೆ ಚಿಗುರು ಮೀಸೆ ಯುವಕರಲ್ಲಿ ಬರದಂತೆ ನೋಡಿಕೊಳ್ಳಬೇಕಾದುದು ಜವಾಬ್ದಾರಿಯುತ ಸಮಾಜದ ಕರ್ತ ವ್ಯವೂ ಆಗಿದೆ. ದಾರಿ ತಪ್ಪುವ ಮುನ್ನ ಮುಂದಿನ ಭವಿಷ್ಯವನ್ನೊಮ್ಮೆ ಅವಲೋಕಿಸಿ ಮುನ್ನಡೆಯಿರಿ. ಕಾಲೇಜಿನಲ್ಲಿ ಹುಟ್ಟಿದ ಪ್ರೀತಿ ಎಂದೂ ಶಾಶ್ವತ ಅಲ್ಲ. ಅದೊಂದು ಆಕರ್ಷಣೆಯಷ್ಟೇ. ಆ ಆಕರ್ಷಣೆಯ ಹಿಂದೆ ಬಿದ್ದು ದುರಂತ ಬದುಕು ಕಾಣುವ ದುಸ್ಸಾಹಸ ಅಕ್ಷತಾ ಪ್ರಕರಣದಲ್ಲೇ ಕೊನೆಯಾಗಲಿ. – ಧನ್ಯಾ ಬಾಳೆಕಜೆ