Advertisement

ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಕೇಳುವವರಿಲ್ಲ ಗೋಳು

11:08 PM Mar 31, 2019 | sudhir |

ಮಲ್ಪೆ: ದೇಶದ ಅತೀ ದೊಡ್ಡ ಬಂದರುಗಳಲ್ಲಿ ಎರಡನೇ ಸ್ಥಾನವನ್ನು ಪಡೆದ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ನೀರಿನ ಇಳಿತದ ಸಂದರ್ಭದಲ್ಲಿ ಮೀನುಗಾರಿಕೆ ಬೋಟ್‌ಗಳ ಲಂಗರು ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿದೆ.

Advertisement

ಸಮರ್ಪಕವಾದ ಡ್ರಜ್ಜಿಂಗ್‌ ಕೆಲಸ ನಡೆಯದಿರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದು ಬೋಟ್‌ ಮಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ಸಂಪೂರ್ಣ ಡ್ರಜ್ಜಿಂಗ್‌ ಕಾಮಗಾರಿ ಆಗಬೇಕು ಎಂಬ ಬೇಡಿಕೆ ಇನ್ನೂ ಕೈಗೂಡಿಲ್ಲ. ಬಂದರಿನ ಬೇಸಿನ್‌ನಲ್ಲಿ ಆಗಾಗ ಹೂಳು ತುಂಬಿಕೊಳ್ಳುತ್ತಿದ್ದು, ವರ್ಷ ವರ್ಷ ಡ್ರಜ್ಜಿಂಗ್‌ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ಬಂದರಿನ ಡ್ರಜ್ಜಿಂಗ್‌ ಕಾಮಗಾರಿಗೆ ಮುಂಬಯಿ ಸಂಸ್ಥೆಯೊಂದಕ್ಕೆ ಟೆಂಡರ್‌ ಕೊಡಲಾಗಿತ್ತು. ಟೆಂಡರ್‌ ಪಡೆದ ಎಜೆನ್ಸಿ ಸರಿಯಾಗಿ ಹೂಳು ತೆಗೆದಿಲ್ಲ. 90 ಸಾವಿರ ಕ್ಯೂಬಿಕ್‌ ಮೀಟರ್‌ನಷ್ಟು ಡ್ರಜ್ಜಿಂಗ್‌ ಗುರಿ ಹೊಂದಿದ್ದು, 2016ರಲ್ಲಿ 28 ಸಾವಿರ ಕ್ಯೂಬಿಕ್‌ ಮೀಟರ್‌ನಷ್ಟು ಮಾತ್ರ ಡ್ರಜ್ಜಿಂಗ್‌ ಮಾಡಲಾಗಿತ್ತು. ಕಳೆದ ವರ್ಷ ಮೇ ಅಂತ್ಯದ ವರೆಗೆ ಸ್ವಲ್ಪ ಪ್ರಮಾಣದಲ್ಲಿ ಹೂಳೆತ್ತಲಾಗಿತ್ತು. ಈ ಮಧ್ಯೆ ತೂಪಾನ್‌ ಆರಂಭವಾಗಿ ಬೋಟ್‌ ದಡ ಸೇರಲು ಆರಂಭಿಸಿದ್ದರಿಂದ ಕಾಮಗಾರಿಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಯಾವುದೇ ಡ್ರಜ್ಜಿಂಗ್‌ ಮಾಡಿಲ್ಲ ಇನ್ನೂ ಶೇ. 40ರಷ್ಟು ಹೂಳು ಉಳಿದುಕೊಂಡಿದೆ ಎನ್ನಲಾಗುತ್ತಿದೆ.

ಬಂದರಿನ ಬೇಸಿನ್‌ ಈಗ ಮರಣ ಗುಂಡಿ
ಮಲ್ಪೆಯ ಮೀನುಗಾರಿಕೆ ಬಂದರಿನಲ್ಲಿ ನಿತ್ಯ ಜನಜಂಗಳಿ. ಬೆಳಗ್ಗೆ 4ರಿಂದ ಮೀನುಗಾರಿಕೆ ಚಟುವಟಿಕೆ ಆರಂಭವಾಗುತ್ತದೆ. ಕೆಲವೊಮ್ಮೆ ರಾತ್ರಿ ವೇಳೆಯೂ ಬೋಟ್‌ನಿಂದ ಮೀನುಗಳನ್ನು ಇಳಿಸುವ ಕಾರ್ಯ ನಡೆಯುತ್ತಿದೆ.

ಬೋಟಿನಿಂದ ಬೋಟಿಗೆ ನಡೆದುಕೊಂಡು ಹೋಗುವ ಸಮಯ ದಲ್ಲಿ ಆಯ ತಪ್ಪಿ ನೀರಿಗೆ ಬಿದ್ದರೆ ಜೀವಕ್ಕೆ ಮಾತ್ರ ಇಲ್ಲಿ ಯಾವುದೇ ಗ್ಯಾರಂಟಿ ಇಲ್ಲ.

Advertisement

ಸುಮಾರು ಆಳದವರೆಗೆ ಕೆಸರು ತುಂಬಿಕೊಂಡಿರುವುದರಿಂದ ಬಿದ್ದ ವ್ಯಕ್ತಿ ಪಕ್ಕ ಮೇಲೆ ಬರದೆ ನೇರ ಅಡಿಭಾಗವನ್ನು ಸೇರುತ್ತಾನೆ. ಇಂತಹ ಅನೇಕ ಪ್ರಕರಣಗಳು ಮಲ್ಪೆ ಬಂದರಿನಲ್ಲಿ ನಡೆಯುತ್ತಲೇ ಇದೆ. ಇದರಲ್ಲಿ ಹೊರರಾಜ್ಯ ಮೀನುಗಾರರ ಸಂಖ್ಯೆಯೇ ಹೆಚ್ಚು.

ಎರಡು ಸಾವಿರದಷ್ಟು ಬೋಟ್‌ಗಳು
ಮಲ್ಪೆ ಬಂದರಿನಲ್ಲಿ ಸುಮಾರು 1200ರಷ್ಟು ಡೀಪ್‌ಸೀ ಟ್ರಾಲ್‌ಬೋಟ್‌ಗಳು, 100 ಪಸೀìನ್‌, 500ರಷ್ಟು ತ್ರಿಸೆವೆಂಟಿ ಟ್ರಾಲ್‌ಬೋಟ್‌, 200 ಸಣ್ಣ ಟ್ರಾಲ್‌ಬೋಟ್‌ ಸೇರಿದಂತೆ ಒಟ್ಟು 2 ಸಾವಿರದಷ್ಟು ಯಾಂತ್ರಿಕೃತ ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಬಂದರಿನ 2 ಮತ್ತು 3ನೇ ಹಂತದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. 2ನೇ ಹಂತದಲ್ಲಿ ಮೀನುಗಾರಿಕೆ ಮುಗಿಸಿ ಬಂದ ಬೋಟ್‌ಗಳು ಮೀನು ಇಳಿಸಿ 3ನೇ ಹಂತದ ಪ್ರದೇಶಕ್ಕೆ ಲಂಗರು ಹಾಕಲು ಸಾಗಬೇಕು. ಈ 2 ಮತ್ತು 3 ಹಂತದ ನಡುವಿನ ದಾರಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬೋಟುಗಳ ಚಲನಗೆ ಸಮಸ್ಯೆಯಾಗಿ ಬೋಟ್‌ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಬಾಪುತೋಟ ಬಳಿಯ 3ನೇ ಹಂತದ ಜಾಗ, ಬೋಟ್‌ ಮೇಲೆಳೆಯುವ ಪ್ರದೇಶದಲ್ಲಿಯೂ ಹೆಚ್ಚು ಹೂಳು ತುಂಬಿದ್ದರಿಂದ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಪ್ರಸ್ತುತ ಮಲ್ಪೆಯಲ್ಲಿ ದೊಡ್ಡ ಗಾತ್ರದ ಬೋಟ್‌ಗಳ ಸಂಖ್ಯೆ ಹೆಚ್ಚಿದೆ. ಆಳವಾದ ಜಾಗವಿದಲ್ಲಿ ಮಾತ್ರ ಈ ಬೋಟ್‌ಗಳ ಸಂಚಾರ ಸಾಧ್ಯ. ಸಾಮಾನ್ಯವಾಗಿ ಬೋಟ್‌ನ ಕೆಳಭಾಗ ನೀರಿನಲ್ಲಿ ನೀರಿನ ಮಟ್ಟಕ್ಕಿಂತ 3 ಮೀಟರ್‌ನಷ್ಟು ಕೆಳಗಿರುತ್ತದೆ. ಅದಕ್ಕಿಂತ ಮತ್ತೆ ಎರಡೂವರೆ ಮೀಟರ್‌ನಷ್ಟು ಆಳವಾಗಿ ಹೂಳೆತ್ತಿದರೆ ಮಾತ್ರ ಸಮಸ್ಯೆ ಎದುರಾಗದು ಎನ್ನುತ್ತಾರೆ ಮೀನುಗಾರರು.

ಡ್ರಜ್ಜಿಂಗ್‌ ಯಂತ್ರ ಬೇಕು
ಕೇರಳ ರಾಜ್ಯದ ಪ್ರತೀ ಬಂದರಿನಲ್ಲಿ ಡ್ರಜ್ಜಿಂಗ್‌ ಯಂತ್ರದ ವ್ಯವಸ್ಥೆ ಇರುವುದರಿಂದ ಅಲ್ಲಿನ ಬಂದರಿನಲ್ಲಿ ಹೂಳಿನ ಸಮಸ್ಯೆ ಎದುರಾಗುತ್ತಿಲ್ಲ. ನಮ್ಮ ರಾಜ್ಯದ ಪ್ರಮುಖ ಬಂದರಿ ನಲ್ಲೂ ಡ್ರಜ್ಜಿಂಗ್‌ ಯಂತ್ರದ ವ್ಯವಸ್ಥೆಗೊಳಿಸ ಬೇಕೆಂದು ಮೀನುಗಾರರು ತಿಳಿಸಿದ್ದಾರೆ.

ವಾಟರ್‌ ಕೂಲರ್‌ಗೆ ಹಾನಿ
ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿದ್ದರಿಂದ ಒಂದೆಡೆ ಬೋಟಿನ ಅಡಿಭಾಗಕ್ಕೆ ಹಾನಿಯಾದರೆ, ಅಡಿಭಾಗದ ಕೆಸರಿನಿಂದ ಕೂಡಿದ ನೀರು ಎಂಜಿನ್‌ನಲ್ಲಿ ಅಳವಡಿಸಿದ ಲಕ್ಷಾಂತರ ರೂಪಾಯಿ ವೆಚ್ಚದ ವಾಟರ್‌ ಕೂಲರ್‌ ಸೇರಿಕೊಂಡು ಹಾನಿಗೊಳಗಾಗುತ್ತವೆ.

ಮನವಿ ಮಾಡಿದ್ದೇವೆ
ಬಂದರಿನಲ್ಲಿ ವರ್ಷ ವರ್ಷ ಡ್ರಜ್ಜಿಂಗ್‌ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ. ಇನ್ನು ಮೀನುಗಾರಿಕೆ ಋತು ಅಂತ್ಯಗೊಂಡು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕುವುದರಿಂದ ಬಾಕಿ ಇರುವ ಕಾಮಗಾರಿಯನ್ನು ತತ್‌ಕ್ಷಣ ಕೈಗೆತ್ತಿಕೊಳ್ಳಬೇಕೆಂದು ಬಂದರು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದೇªವೆ.
-ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ಡ್ರಜ್ಜಿಂಗ್‌ ಕಾಮಗಾರಿ
ಈ ಹಿಂದೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕರೆಸಿ ಪರಿಶೀಲನೆ ನಡೆಸಬೇಕಾಗಿದೆ. ಅದರೆ ಅವರು ಸರಿಯಾಗಿ ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದೆ ಬಂದರಿನಲ್ಲಿ ಎಲ್ಲ ಭಾಗದಲ್ಲಿ ಸರ್ವೆ ನಡೆಸಿ ಎಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ ಎಂದು ಪರಿಶೀಲನೆ ಮಾಡಿ ಡ್ರಜ್ಜಿಂಗ್‌ ಕಾಮಗಾರಿ ಕೈಗೊಳ್ಳಲಾಗುವುದು.
-ಉದಯ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next