Advertisement

ಹೊನ್ನ ಶೂಲಕ್ಕೇರಿಸಿದ ಹೊಗಳಿಕೆ

04:45 PM Apr 04, 2017 | |

ನಮ್ಮಲ್ಲಿ ಅನೇಕರಿಗೆ ಸದಾ ಬೇರೆಯವರಿಂದ ಹೊಗಳಿಸಿಕೊಳ್ಳುವ ಚಟ. ಹೊಗಳುವವರನ್ನು ತುಂಬಾ ಬೇಗ ನಂಬಿ, ನಾವೇ ನುಗ್ಗೆ
ಮರದ ಮೇಲೇರಿಬಿಡುತ್ತೇವೆ. ಸದಾ ನಮ್ಮನ್ನು ಯಾರಾದರೂ ಹೊಗಳುತ್ತಿರಲೇಬೇಕು. ಹೊಗಳುವವರನ್ನು ನಮ್ಮ ಜನ್ಮ- ಜನ್ಮದ
ಬಂಧುಗಳೇನೋ ಎಂಬಂತೆ ತಲೆ ಮೇಲೆ ಹೊತ್ತು ತಿರುಗುತ್ತೇವೆ.

Advertisement

ಯಾರಾದರೂ ನಮ್ಮದುರಿಗೆ ಬೇರೆಯವರನ್ನು ತೆಗಳಿ, ನಮ್ಮನ್ನು ಹೊಗಳಿದರೆ ನಮಗೇನೋ ಖುಷಿ. ಆದ್ರೆ ಅವರು ಬೇರೆಯವರ ಹತ್ರ
ನಮ್ಮನ್ನು ತೆಗಳಿ, ಅವರನ್ನು ಹೊಗಳಿ ತಮ್ಮ ಬೇಳೆ ಬೇಯಿಸಿಕೊಳ್ತಾರೆ ಅನ್ನೋದನ್ನು ಅರ್ಥ ಮಾಡ್ಕೊಳ್ಳೋದರ ಒಳಗೆ ಕೆಲವೊಮ್ಮೆ
ಸಮಯ ಮೀರಿರುತ್ತದೆ. ಅಂಥ ಹೊಗಳುಭಟರನ್ನು ನಂಬುವ ನಾವು ಮೂರ್ಖರೋ ಅಲ್ಲವೋ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು.
ಯಾರಾದರೂ ನಮ್ಮನ್ನು ಹೊಗಳಿದ್ರೆ ಒಳಗೊಳಗೇ ಹಿಗ್ಗಿ ಬಲೂನಿನಂತಾಗುತ್ತೇವೆ. ಹೊಗಳುವವನು ಸಮಯ ಸಾಧಿಸಿ ತನ್ನ ಕೆಲಸ
ಮಾಡಿಸ್ಕೊಂಡು, ಹಿಗ್ಗಿದ ಬಲೂನನ್ನು ಒಡೆದು ಠುಸ್‌ ಎನಿಸಿರುತ್ತಾನೆ. ನಮ್ಮ ತಪ್ಪನ್ನು ಅಥವಾ ದೌರ್ಬಲ್ಯವನ್ನು ಯಾರಾದರೂ ನೇರವಾಗಿ ಹೇಳಿದರೆ, ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಡದಂಥ ಕೋಪ ಅನ್ನೋ ಹಾಗೆ ಅವರ ಮೇಲೆ ಕೆಂಡಾಮಂಡಲರಾಗುತ್ತೇವೆ. “ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸದಿರಿ’, ಎಂಬ ಬಸವಣ್ಣನವರ ಮಾತನ್ನು ಗಾಳಿಗೆ ತೂರಿ “ಶೂಲ ಚುಚ್ಚಿದರೂ ಪರವಾಗಿಲ್ಲ. 

ಬಂಗಾರದ್ದಲ್ವಾ!’ ಎಂದು ಅವರ ಮೊನೆಯ ಮೇಲೆ ಹತ್ತಿ ಕುಳಿತಿರುತ್ತೇವೆ. ನಮಗೆ ನೇರವಾಗಿ ಮಾತಾಡೋರು ಹಿಡಿಸಲ್ಲ. ಖಂಡಿತವಾದಿ ಲೋಕ ವಿರೋಧಿ ಎನ್ನುವ ಮಾತಿನಂತೆ ನೇರವಾಗಿ ಮಾತಾಡೋನು ಎಲ್ಲರ ವಿರೋಧಿಯಾಗಿ ಬದುಕಬೇಕಾಗುತ್ತದೆ. “ನಮ್ಮೆದುರಿಗೆ ನಮ್ಮನ್ನು ಹೊಗಳಿ, ಬೇರೆಲ್ಲಿಯೋ ನಮ್ಮನ್ನು ತೆಗಳಿ ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಡಿ.ವಿ.ಜಿಯವರ ಶ್ರೇಷ್ಟೋಕ್ತಿಯನ್ನು ತನ್ನದೇ ರೀತಿಯಲ್ಲಿ ಅರ್ಥೈಸಿಕೊಂಡು , ತನ್ನ ಲಾಭಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರೂ ಹೊಗಳಿ ಅಥವಾ ತೆಗಳುವವನನ್ನು ಸಮಾಜ ನಂಬುವಂತಾಗಿರುವುದೇ ದುರಂತ. ಅಂಥವರಿಗೇ ಮನ್ನಣೆ ಸಿಗುತ್ತಿರುವುದು ಇನ್ನೂ ದುರಂತ ಈ ಸಂದರ್ಭದಲ್ಲಿ. ಒಂದು ಜನಪದ ಕಥೆ ನೆನಪಾಗುತ್ತಿದೆ, ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು, ಅವಳ ಹತ್ತಿರ ಒಂದು ಜಂಭದ ಕೋಳಿ ಹುಂಜ ಮತ್ತು ಕೆಲವು ಹೇಂಟೆಗಳು (ಹೆಣ್ಣು ಕೋಳಿಗಳು) ಇದ್ದವು, ಒಮ್ಮೆ ಒಂದು ಹೇಂಟೆಗೆ ಕೆಟ್ಟ ಕನಸು ಬಿತ್ತು. ಆದ್ದರಿಂದ ಅದು ಎಲ್ಲ ಕೋಳಿಗಳಿಗೂ ಎಚ್ಚರಿಕೆಯಿಂದಿರುವಂತೆ ಸೂಚಿಸಿತು. ಎಲ್ಲಾ ಕೋಳಿಗಳೂ ಹುಷಾರಾದವು. ಆದರೆ ಜಂಭದ ಹುಂಜ ಆ ಹೇಂಟೆಗೆ ಬಾಯಿಗೆ ಬಂದಂತೆ ಬಯ್ದು, ಜಂಭದಿಂದ ತಿರುಗಾಡಿತು. ಇದೇ ಸಮಯ ಸಾಧಿಸಿದ ಒಂದು ಕುತಂತ್ರಿ ನರಿ ಹುಂಜದೆಡೆಗೆ ಬಂದು ಅದನ್ನು ತುಂಬಾ ಹೊಗಳಿತು. ನಿನ್ನ ಗತ್ತೋ ಮಹಾರಾಜನ ಗಾಂಭೀರ್ಯಕ್ಕಿಂತ ಮಿಗಿಲಾದುದು. ನಿನ್ನ ಮಧುರ
ದ್ವನಿ ಕೋಗಿಲೆಗಿಂತ ಸುಮಧುರ ಎಂದೆಲ್ಲಾ ಹೊಗಳಿ ಒಂದು ಹಾಡು ಹಾಡಲು ಹೇಳಿತು. ಈ ಹೊಗಳಿಕೆಯನ್ನು ಕೇಳಿ ಹಿಗ್ಗಿ ಹೀರೆಕಾಯಿಯಾದ ಜಂಭದ ಹುಂಜವು ಕಣ್ಮುಚ್ಚಿ ರಾಗಾಲಾಪ ಪ್ರಾರಂಭಿಸಿತು. ಇದನ್ನೇ ಕಾಯುತ್ತಿದ್ದ ಜಾಣ ನರಿ ಚಂಗನೆ ನೆಗೆದು ಹುಂಜದ ಕುತ್ತಿಗೆಗೆ ಬಾಯಿ ಹಾಕಿ, ಅದು ಸ್ವಲ್ಪವೂ ಕೂಗಾಡದಂತೆ ಹೊತ್ತುಕೊಂಡು ಓಡಿಹೋಯ್ತು.

ಇಲ್ಲಿ ಬುದ್ದಿ ಹೇಳಿದ ಹೇಂಟೆಯ ಮಾತು ತಿರಸ್ಕರಿಸಿ ಹೊಗಳಿದ ನರಿಯ ಮಾತು ನಂಬಿದ ಹುಂಜ ಹೊಗಳಿದವರಿಗೇ
ಆಹಾರವಾಗಬೇಕಾಯ್ತು. ಬೈದಿದ್ದು ಬುದ್ಧಿ ಹೇಳಾಕೆ, ಹೊಗಳಿದ್ದು ಹಳ್ಳ ಹಿಡಾಕೆ’ ಎಂಬ ಅರ್ಥಪೂರ್ಣ ಜನಪದದ ಮಾತನ್ನು ದೂರ ತಳ್ಳಿ ನೇರವಾಗಿ ಮಾತನಾಡಿದವನ ಅಥವಾ ಬುದ್ಧಿ ಹೇಳಿದವನ ವಿರುದ್ದ ಆಜನ್ಮ ಶತ್ರುವಿನಂತೆ ದ್ವೇಷ ಸಾಧಿಸುತ್ತೇವೆ. ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎನ್ನುವಂಥವರು ಬೆಣ್ಣೆಯಂತೆ ನಯವಾಗಿ ಮಾತಾಡಿ, ದೊಡ್ಡ ದೊಡ್ಡವರಿಗೆ ಇಲ್ಲದ ಬಹುಪರಾಕ್‌ ಹೇಳಿ ತನಗಾಗಬೇಕಾದ ಕೆಲಸವನ್ನು ಸುಲಭವಾಗಿ ಸಾಧಿಸಿಕೊಂಡುಬಿಡುತ್ತಾರೆ.

ಹಾಗಂತ ಒಬ್ಬರ ಒಳ್ಳೆಯ ಗುಣವನ್ನು ಸಾಧನೆಯನ್ನು ಪ್ರಶಂಸಿಸುವುದು ತಪ್ಪು ಎಂದಲ್ಲ. ಆ ವ್ಯಕ್ತಿಯ ಸಾಧನೆಗೆ ಬೆನ್ನು ತಟ್ಟಿ, ಹೊಗಳಿ ಹುರಿದುಂಬಿಸಿದರೆ, ಖಂಡಿತ ಆ ವ್ಯಕ್ತಿಗೆ ಉತ್ತೇಜನ ದೊರೆತು, ಸ್ಪೂರ್ತಿಯಿಂದ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಾನೆ. ನಮ್ಮ ಹೊಗಳಿಕೆ ಇನ್ನೊಬ್ಬರ ಬದುಕಿಗೆ ಸ್ಪೂರ್ತಿಯಾಗಿ ಮುಂದಿನ ಭವಿಷ್ಯಕ್ಕೆ ಉತ್ತೇಜನವಾಗಬೇಕೆ ಹೊರತು, ಅವರನ್ನು ಅಟ್ಟಕ್ಕೇರಿಸಿ ಅಲ್ಲಿಂದ
ಬೀಳಿಸಿ ನಮ್ಮ ಕೆಲಸ ಸಾಧಿಸಿಕೊಳ್ಳುವ ಸಮಯಸಾಧಕತನ ಅಥವಾ ಅವಕಾಶವಾದ ಆಗಬಾರದು ಎಂಬುದಷ್ಟೇ ಇಲ್ಲಿನ ಆಶಯ.

Advertisement

ರಾಘವೇಂದ್ರ ಹೊರಬೈಲು, ಚಿಂತಾಮಣಿ 

Advertisement

Udayavani is now on Telegram. Click here to join our channel and stay updated with the latest news.

Next