ಗಜೇಂದ್ರಗಡ: ಕೇಂದ್ರ ಸರ್ಕಾರ ಬೇಟಿ ಬಜಾವೊ, ಬೇಟಿ ಪಡಾವೋ ರಾಷ್ಟ್ರೀಯ ಯೋಜನೆ ಅಡಿ ಅಂಚೆ ಇಲಾಖೆ ಮೂಲಕ ಸುಕನ್ಯಾ ಸಮೃದ್ಧಿ ಹಣಕಾಸು ಉಳಿತಾಯ ಯೋಜನೆ ಜಾರಿಗೊಳಿಸಿದ್ದು, ಗ್ರಾಮೀಣರು ಹೆಚ್ಚಿನ ಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಚಿಲಝರಿ ಗ್ರಾಮದಲ್ಲಿ ಗ್ರಾಪಂನ 14ನೇ ಹಣಕಾಸು ಯೋಜನೆ ಅಡಿ 1.49 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ ಅಂಚೆ ಕಚೇರಿ ಕಟ್ಟಡ ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನವಜಾತ ಶಿಶುವಿನಿಂದ ಹಿಡಿದು ಹತ್ತು ವರ್ಷದವರೆಗಿನ ಹೆಣ್ಣು ಮಕ್ಕಳಿಗಾಗಿಯೇ ರೂಪಿಸಲಾದ ವಿಶೇಷ ಯೋಜನೆ ಇದಾಗಿದೆ. ಹೀಗಾಗಿ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು ಎಲ್ಲರಿಗೂ ಮನವರಿಕೆ ಮಾಡಿ ಯೋಜನೆ ಫಲ ದೊರೆಯುವಂತೆ ಮಾಡಬೇಕಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಬದಲಾಗುತ್ತಿರುವ ಜನರ ಬೇಡಿಕೆಗಳಿಗೆ ತಕ್ಕಂತೆ ಭಾರತೀಯ ಅಂಜೆ ಇಲಾಖೆ ನವೀನ ರೀತಿಯಲ್ಲಿ ವಿವಿಧ ಸೇವೆ ಹೊರ ತಂದಿದೆ. ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಗ್ರಾಮೀಣ ಜನರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ ಜಾರಿಗೊಳಿಸಿರುವ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಭಾಸ್ಕರ ರಾಯಬಾಗಿ, ಅಂಚೆ ಅಧಿಕಾರಿ ರಂಗಪ್ಪ ಚಲವಾದಿ, ಶರಣಪ್ಪ ಕಂಬಳಿ, ದತ್ತುಸಾ ಬಾಕಳೆ, ಮುತ್ತಣ್ಣ ಲಿಂಗನಗೌಡರ, ಮುತ್ತು ಕಡಗದ, ಕನಕಪ್ಪ ಮಾದರ, ಶರಣಪ್ಪ ಕಡಬಲಕಟ್ಟಿ, ಲಕ್ಷ್ಮಣ ನಾಯ್ಕರ, ಶೇಖರಪ್ಪ ಕಡಬಲಕಟ್ಟಿ, ಸುನೀಲ ಚವ್ಹಾಣ, ಅಂದಪ್ಪ ಕಡಬಲಕಟ್ಟಿ, ಶಾಂತವೀರಪ್ಪ ಕೆಲೂರ, ಮಹಾದೇವಪ್ಪ ಮಂಡಾಲಿ ಇದ್ದರು.