ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ 1185 ಕೋಟಿ ರೂ. ಹಾಗೂ 2017-18 ನೇ ಸಾಲಿನ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಕಬ್ಬಿನ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ರೈತರಿಗೆ ಭರವಸೆ ನೀಡಿದರು.
ಕಾರ್ಖಾನೆಗಳಿಂದ ಕಳೆದ ವರ್ಷದಲ್ಲಿ ಒಟ್ಟಾರೆ 1185 ಕೋಟಿ ರೂಪಾಯಿ ಬಾಕಿಯಿದೆ. ಐದಾರು ಸಭೆ ನಡೆಸಿ ಗಡುವು ನೀಡಿದರೂ ಪಾವತಿಸದಿರುವುದರಿಂದ ಶೇ.15 ಬಡ್ಡಿ ಸಮೇತ ಬಾಕಿ ಹಣ ಪಾವತಿಸಬೇಕು ಎಂದು ರೈತ ಮುಖಂಡ ಶಶಿಕಾಂತ ಜೋಶಿ ಆಗ್ರಹಿಸಿದರು.
ಕಬ್ಬಿನ ಬಿಲ್ ಬಾಕಿ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕರೆಯುವ ಸಭೆಗಳಿಗೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಉದ್ದೇಶಪೂರ್ವಕವಾಗಿ ಹಾಜರಾಗದೇ ತಮ್ಮ ಪ್ರತಿನಿಧಿಯನ್ನು ಕಳಿಸುತ್ತಾರೆ. ಇದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ತೂಕ ಮತ್ತು ಅಳತೆ ಪರಿಶೀಲಿಸಲು ಸಕ್ಕರೆ ಕಾರ್ಖಾನೆಗೆ ತೆರಳುವಾಗ ಕಡ್ಡಾಯವಾಗಿ ರೈತರು ಮತ್ತು ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯ ಸದಸ್ಯರನ್ನು ಕರೆದುಕೊಂಡು ಹೋಗಿ ಅವರ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಬೇಕು ಮತ್ತು ಇದನ್ನು ದಾಖಲು ಮಾಡಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿ ತೂಕ ಮತ್ತು ಅಳತೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸಕ್ಕರೆ ಆಯುಕ್ತಾಲಯಕ್ಕೆ ವರದಿ ಕಳಿಸಲಾಗುವುದು ಎಂದರು.
Advertisement
ಕಬ್ಬಿನ ಬಿಲ್ ಬಾಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣವನ್ನು ರೈತರಿಗೆ ಪಾವತಿಸಲು ಸೂಚನೆ ನೀಡಲಾಗುತ್ತದೆ. ಇದಾದ ಬಳಿಕವೂ ಬಿಲ್ ಪಾವತಿಸದಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
Related Articles
Advertisement
ಬೆಳೆವಿಮೆ ಪರಿಹಾರ: 2016-17 ನೇ ಸಾಲಿನ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ 5.76 ಕೋಟಿ ರೂಪಾಯಿ ಪರಿಹಾರವನ್ನು ಜಿಲ್ಲೆಯ 13,671 ರೈತರ ಖಾತೆಗೆ ಒಂದು ವಾರದೊಳಗೆ ಜಮೆ ಮಾಡಲು ಕ್ರಮವಹಿಸುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಿರ್ದೇಶನ ನೀಡಿದರು.
ಮೇವು ಬ್ಯಾಂಕ್ ಸ್ಥಾಪನೆ: ಜಿಲ್ಲೆಯ ಅಥಣಿಯಲ್ಲಿ 21 ಹಾಗೂ ರಾಮದುರ್ಗ ದಲ್ಲಿ ಒಂದು ಸೇರಿದಂತೆ ಒಟ್ಟಾರೆ 22 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 140 ಖಾಸಗಿ ಕೊಳವೆಬಾವಿಗಳನ್ನೂ ಗುರುತಿಸಲಾಗಿದ್ದು, ಅಗತ್ಯಬಿದ್ದರೆ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಬರ ನಿರ್ವಹಣೆಗೆ 6.50 ಕೋಟಿ ಬಿಡುಗಡೆಗೆ ಜಿಲ್ಲಾಡಳಿತ ಅನುಮೋದನೆ ನೀಡಿದೆ ಎಂದರು.
ಸಭೆಗೆ ಗೈರು ಹಾಜರಾದರೆ ಕ್ರಮ
ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣವನ್ನು ರೈತರಿಗೆ ಪಾವತಿಸಲು ಸೂಚನೆ ನೀಡಲಾಗುವುದು. ಇದಾದ ಬಳಿಕವೂ ಬಿಲ್ ಪಾವತಿಸದಿದ್ದರೆ ನಿಯಮಾವಳಿ ಪ್ರಕಾರ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಗೆ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೇ ಖುದ್ದಾಗಿ ಹಾಜರಾಗಬೇಕು. ಒಂದು ವೇಳೆ ಸಭೆಗೆ ಗೈರು ಹಾಜರಾದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ತಿಳಿಸಿದರು.