ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನಗರ ಹಾಗೂ ಹಳ್ಳಿ ಹಳ್ಳಿಗೂ ಸೋಂಕು ಹಬ್ಬಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮತ್ತೂಂದೆಡೆ ಕೊರೊನಾ ಕರ್ಫ್ಯೂ ಜಾರಿಗೊಂಡು 20ಕ್ಕೂ ಹೆಚ್ಚು ದಿನಗಳು ಕಳೆದರೂ, ಜನಸಂಚಾರ ಹಾಗೂ ಸೋಂಕಿನ ಪ್ರಮಾಣವೂ ಇಳಿಕೆಯಾಗುತ್ತಿಲ್ಲ. ಹೀಗಾಗಿ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೌದು. ಜಿಲ್ಲೆಯಲ್ಲಿ ದಿನಕಳೆದಂತೆ ಸೋಂಕಿತರ ಸಂಖ್ಯೆ ಗಗನಮುಖೀಯಾಗಿದೆ. ಕೋವಿಡ್ ಸೋಂಕು ತಡೆಗಾಗಿ ಸರಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಸೋಂಕಿನ ಲಕ್ಷಣವುಳ್ಳವರನ್ನು ಪರೀಕ್ಷೆಗೊಳಪಡಿಸುವುದು, ಚಿಕಿತ್ಸೆ ಹಾಗೂ ಸೋಂಕಿನ ಸರಪಳಿ ತುಂಡರಿಸಲು ಕೊರೊನಾ ಕರ್ಫ್ಯೂ ಮೂಲಕ ಜನ ಸಂಚಾರ ತಡೆಗೆ ಕ್ರಮ ವಹಿಸಿದೆ. ಆದರೂ, ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಏರುಮುಖವಾಗಿರುವುದು ಆತಂಕಕಾರಿ ಬೆಳವಣಿಗೆ.
ಅಗತ್ಯ ವಸ್ತುಗಳ ನೆಪದಲ್ಲಿ ಓಡಾಟ: ಜನರ ನಿತ್ಯ ಜೀವನಕ್ಕೆ ತೊಂದರೆಯಾಗದಂತೆ ಸರಕಾರ ಕರ್ಫ್ಯೂ ಜಾರಿಗೊಳಿಸಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳು ಹಾಗೂ ಮನೆ ಮುಂದೆಯೇ ಬರುವ ತರಕಾರಿ ಖರೀದಿಸಲು ಅನುವು ಮಾಡಿಕೊಟ್ಟಿದೆ. ಆದರೆ ನಾನಾ ಕಾರಣಗಳಿಂದ ಸಾರ್ವಜನಿಕರಿಂದ ಕಟ್ಟುನಿಟ್ಟಾಗಿ ನಿಯಮ ಪಾಲನೆಯಾಗುತ್ತಿಲ್ಲ. ದಿನಸಿ ಖರೀದಿ ವೇಳೆ ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸದೇ, ಅಂಗಡಿಗಳ ಎದುರು ಗುಂಪು ಗೂಡುವುದು, ಬಡಾವಣೆಗಳಲ್ಲಿ ತರಕಾರಿ ಮಾರಾಟಗಾರರು ಮನೆ ಮನೆಗೆ ತೆರಳದೇ ಆಯಕಟ್ಟಿನ ಸ್ಥಳದಲ್ಲೇ ನಿಲ್ಲುತ್ತಿರುವುದು, ತರಕಾರಿ ಖರೀದಿಗೆ ಮುಗಿ ಬೀಳುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲೂ ದಿನವಿಡೀ ಜನ ಸಂಚಾರ ಮುಂದುವರಿದಿದೆ. ಹಣ್ಣು ಖರೀದಿ, ಆಸ್ಪತ್ರೆ, ಔಷಧ ಖರೀದಿ ಹೆಸರಲ್ಲಿ ದಿನವಿಡೀ ಓಡಾಡುವವರ ಸಂಖ್ಯೆ ಕಡಿಮೆ ಇಲ್ಲ. ಇಂತಹದ್ದೇ ಕಾರಣಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.
ವಲಸಿಗರು ತಂದ ಆಪತ್ತು: ಇನ್ನು ಗ್ರಾಮೀಣ ಪ್ರದೇದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಳ್ಳಿಗಳಲ್ಲಿ ದೇವಸ್ಥಾನಗಳ ಕಟ್ಟೆ, ಛಾವಡಿ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಯುವಜನರು ಗುಂಪು ಗೂಡುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಮರಳಿರುವ ಜನರಿಂದ ಗ್ರಾಮದಲ್ಲಿ ಸೋಂಕು ಹರಡುತ್ತಿದೆ. ಪರ ಊರಿಂದ ಬಂದವರು ಕೆಲ ದಿನಗಳ ಮಟ್ಟಿಗೆ ಮನೆಯಲ್ಲೇ ಉಳಿದುಕೊಳ್ಳಬೇಕೆಂಬ ನಿಯಮ ಪಾಲಿಸುತ್ತಿಲ್ಲ. ಅಂತಹ ವರಿಂದಲೇ ಸೋಂಕು ಹರಡುತ್ತಿದೆ ಎನ್ನಲಾಗಿದೆ.
ಪಾಸಿಟಿವ್ ವ್ಯಕ್ತಿಗಿಲ್ಲ ಸೀಲ್: ಕಳೆದ ವರ್ಷ ಕೋವಿಡ್ ಕ್ವಾರಂಟೈನ್‌ನಲ್ಲಿರುವ, ಸೋಂಕಿತರ ಸಂಪರ್ಕದಲ್ಲಿರುವ ವ್ಯಕ್ತಿಗಳ ಕೈಗೆ ಸೀಲ್ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಕ್ರಮವಿಲ್ಲ. ಹೋಂ ಐಸೋಲೇಷನ್‌ನಲ್ಲಿರುವವರು, ಸೋಂಕಿತರ ಪ್ರಥಮ ಸಂಪರ್ಕದಲ್ಲಿರುವ ಕುಟುಂಬಸ್ಥರು ಕೂಡಾ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ವ್ಯಾಪಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.