Advertisement

ಮೊಬೈಲ್‌ ಬಳಸಬೇಡ ಅಂದಿದ್ದಕ್ಕೆ ಆತ್ಮಹತ್ಯೆ

01:05 AM Jun 05, 2019 | Lakshmi GovindaRaj |

ಬೆಂಗಳೂರು: ಮೊಬೈಲ್‌ ಫೋನನ್ನು ಹೆಚ್ಚು ಬಳಸದಂತೆ ತಂದೆ ಬುದ್ಧಿ ಹೇಳಿದ್ದಕ್ಕೆ ಬೇಸರಗೊಂಡ ಬಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರತ್‌ಹಳ್ಳಿಯ ಪಣತ್ತೂರು ಮುಖ್ಯರಸ್ತೆಯಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿಜಿ) ಒಂದರಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ನೇಪಾಳ ಮೂಲದ ಹರಿಸಿಂಗ್‌ ಭಟ್‌ ಎಂಬುವರ ಪುತ್ರ ಗೋಪಾಲ್‌ಸಿಂಗ್‌ (15) ಮೃತ ಬಾಲಕ. ಹರಿಸಿಂಗ್‌ ಭಟ್‌ ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಪಣತ್ತೂರು ಮುಖ್ಯರಸ್ತೆಯಲ್ಲಿರುವ ಪೇಯಿಂಗ್‌ ಗೆಸ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಪಿಜಿ ಹಿಂಭಾಗದ ಮನೆಯಲ್ಲೇ ಪತ್ನಿ, ಮೂವರು ಮಕ್ಕಳ ಜತೆ ವಾಸವಾಗಿದ್ದಾರೆ.

ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಗೋಪಾಲ್‌ಸಿಂಗ್‌, ಹೆಚ್ಚು ಮೊಬೈಲ್‌ ಬಳಸುತ್ತಿದ್ದ. ಅದಕ್ಕೆ ಪೋಷಕರು ಸಾಕಷ್ಟು ಬಾರಿ ಬುದ್ಧಿ ಹೇಳುತ್ತಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಗೋಪಾಲ್‌ ಸಿಂಗ್‌, ಮೊಬೈಲ್‌ನಲ್ಲಿ ಆಟವಾಡುತ್ತಿದ್ದ. ಅದೇ ವೇಳೆ ಮನೆಗೆ ಬಂದ ತಂದೆ ಹರಿಸಿಂಗ್‌ ಭಟ್‌, ಮೊಬೈಲ್‌ ಬಳಸದಂತೆ ಪುತ್ರನಿಗೆ ಬುದ್ಧಿ ಹೇಳಿ, ಆತನ ಕೈಲಿದ್ದ ಮೊಬೈಲ್‌ ತೆಗೆದುಕೊಂಡು ಹೋಗಿದ್ದಾರೆ.

ಇದರಿಂದ ಬೇಸರಗೊಂಡ ಗೋಪಾಲ್‌, ತಂದೆ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಪಿಜಿಯ ಕೊಠಡಿ ಸಂಖ್ಯೆ 35ರಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ಐದು ಗಂಟೆ ಸುಮಾರಿಗೆ ಆತನ ತಾಯಿ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಸ್ನೇಹಿತರ ಜತೆ ಹೋಗಿರಬಹುದು ಎಂದು ಸುಮ್ಮನಾಗಿದ್ದರು ಎಂದು ಪೊಲೀಸರು ಹೇಳಿದರು.

ಕೊಠಡಿ ನಿವಾಸಿ ಬಂದಾಗ ಬೆಳಕಿಗೆ: ರಾತ್ರಿ ಏಳು ಗಂಟೆ ಸುಮಾರಿಗೆ ಪಿಜಿಯ ಕೊಠಡಿ ಸಂಖ್ಯೆ 35ರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಹರಿಸಿಂಗ್‌ ಭಟ್‌ ಮನೆಗೆ ಬಂದು ಕೊಠಡಿಯ ಕೀ ಕೊಡುವಂತೆ ಕೇಳಿದ್ದಾರೆ. ಆದರೆ, ಮನೆಯಲ್ಲಿ ಕೀ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಸಿಕ್ಕಿಲ್ಲ. ಬಳಿಕ ಪಿಜಿ ಮಾಲೀಕರ ಬಳಿಯಿದ್ದ ನಕಲಿ ಕೀ ಮೂಲಕ ಕೊಠಡಿಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಕೆಲಸ ಸಿಗದೆ ಬೇಸತ್ತ ಯುವಕ ಆತ್ಮಹತ್ಯೆ: ಕೆಲಸ ಸಿಗದಿರುವುದಕ್ಕೆ ಬೇಸರಗೊಂಡ ಯುವಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರತ್‌ಹಳ್ಳಿಯ ಮುನೆಕೊಳಲುನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಆಂಧ್ರಪ್ರದೇಶ ಮೂಲದ ಶ್ರೀರಾಮಲು ಎಂಬವರ ಮಗ ರಾಮಕೃಷ್ಣ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಶ್ರೀರಾಮಲು ಅವರು ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಮುನೆಕೊಳಲುನಲ್ಲಿ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜತೆ ವಾಸವಾಗಿದ್ದರು. ಮೊದಲನೇ ಮಗ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಪುತ್ರ ರಾಮಕೃಷ್ಣ ಎಂಸಿಎ ಪದವಿ ಪಡೆದಿದ್ದಾರೆ. ಐದು ವರ್ಷಗಳಿಂದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಎಲ್ಲಿಯೂ ಕೆಲಸ ಸಿಕ್ಕಿಲ್ಲ.

ಇದರಿಂದ ಬೇಸತ್ತ ರಾಮಕೃಷ್ಣ, ಡೆತ್‌ನೋಟ್‌ ಬರೆದಿಟ್ಟು, ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ತಾವು ವಾಸವಾಗಿರುವ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾರೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ. ಬಿದ್ದ ಶಬ್ಧ ಕೇಳಿ ಕಡ್ಡದಲ್ಲಿದ್ದವರು ಹೊರಗಡೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ರಾಮಕೃಷ್ಣ ಬಿದ್ದಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫ‌ಲಕಾರಿಯಾಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

“ನಾನು ನಿಮಗೆ ಭಾರ ಆಗಲು ಇಷ್ಟಪಡುವುದಿಲ್ಲ. ಐದು ವರ್ಷದಿಂದ ಹುಡುಕಾಡಿದರೂ ಎಲ್ಲಿಯೂ ಕೆಲಸ ಸಿಕ್ಕಿಲ್ಲ. ಇದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಕ್ಷಮಿಸಿ’ ಎಂದು ಆತ್ಮಹತ್ಯೆಗೂ ಮುನ್ನ ರಾಮಕೃಷ್ಣ ಬರೆದಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಲಾಗಿದೆ ಎಂದು ಮಾರತ್‌ಹಳ್ಳಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next