ಸಾಮಾನ್ಯವಾಗಿ ನಟಿಯರಿಗೆ ಒಮ್ಮೆಯಾದರೂ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕು. ಆ ಮೂಲಕ ವಿಭಿನ್ನ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅನೇಕ ನಾಯಕ ನಟಿಯರು ಆಗಾಗ್ಗೆ ತಮ್ಮ ಸಂದರ್ಶನಗಳಲ್ಲಿ ಇಂಥ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ. ಹೊಸ ನಟಿಯರು ಇಂಥದ್ದೊಂದು ಮಾತು ಹೇಳಿದ್ದರೆ, ಆದಷ್ಟು ಬೇಗ ಅವರ ಕನಸು ಈಡೇರಲಿ ಎಂದು ಎಲ್ಲರೂ ಹೇಳುತ್ತಿದ್ದರು.
ಆದರೆ, ಈಗಾಗಲೇ ಕನ್ನಡ, ತಮಿಳು, ತೆಲುಗು, ಮಲೆಯಾಳ ಹೀಗೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ಎಂಥ ಪಾತ್ರಕ್ಕೂ ಸೈ ಎನಿಸಿಕೊಂಡಿರುವ ಖ್ಯಾತ ನಟಿಯೊಬ್ಬರು, ಕನ್ನಡದಲ್ಲಿ ಮತ್ತೆ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಬೇಕು ಎಂಬ ಆಸೆಯಲ್ಲಿದ್ದಾರೆ. ಅಂದ ಹಾಗೆ, ಇಂಥದ್ದೊಂದು ಆಸೆಯನ್ನು ಇಟ್ಟುಕೊಂಡ ಆ ಖ್ಯಾತ ನಟಿ ಬೇರಾರೂ ಅಲ್ಲ ಸುಹಾಸಿನಿ ಮಣಿರತ್ನಂ.
ಅನೇಕರಿಗೆ ಗೊತ್ತಿರುವಂತೆ, 80ರ ದಶಕದಲ್ಲಿ ಸುಹಾಸಿನಿ ದಕ್ಷಿಣ ಭಾರತದ ಬಹುಬೇಡಿಕೆಯ ನಾಯಕ ನಟಿ. ಬೆಂಕಿಯಲ್ಲಿ ಅರಳಿದ ಹೂವು ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಯವಾದ ಸುಹಾಸಿನಿ, ನಂತರ ಬಂಧನ, ಉಷಾ, ಹೊಸನೀರು, ಸುಪ್ರಭಾತ ಹೀಗೆ ಸಾಲು ಸಾಲು ಚಿತ್ರಗಳ ಮೂಲಕ ಸಿನಿಪ್ರಿಯರಿಗೆ ಹತ್ತಿರವಾದ ನಟಿ. ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾದ ಬಳಿಕ ನಾಯಕ ನಟಿಗಿಂತ ಪೋಷಕ ನಟಿಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರು ಮಾಡಿದ ಸುಹಾಸಿನಿ ಅವರಿಗೆ ಕನ್ನಡದ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಇದೆಯಂತೆ.
ಇತ್ತೀಚೆಗೆ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ, ಮಹಿಳಾಪ್ರಧಾನ ಚಿತ್ರಗಳ ಬಗ್ಗೆ ಮಾತನಾಡಿರುವ ಸುಹಾಸಿನಿ, “”ನನಗೆ ಇನ್ನೂ ಮಹಿಳಾಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿದೆ. ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರನ್ನು ಪ್ರತಿಬಿಂಬಿಸುವಂಥ ಪಾತ್ರಗಳನ್ನು ಮಾಡಬೇಕೆಂಬ ಕನಸಿದೆ. ಇಂಥ ಪಾತ್ರಗಳು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತವೆ. ಒಂದಷ್ಟು ಸಾಮಾಜಿಕ ಬದಲಾವಣೆಗೂ ಕಾರಣವಾಗುತ್ತವೆ” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿರುವ ಸುಹಾಸಿನಿ, “”ಕನ್ನಡ ಚಿತ್ರರಂಗ ಸದಭಿರುಚಿ ಪ್ರೇಕ್ಷಕರನ್ನು ಹೊಂದಿದೆ. ಬೆಂಕಿಯಲ್ಲಿ ಅರಳಿದ ಹೂ ಮಾದರಿಯ ಚಿತ್ರಗಳನ್ನು ಮತ್ತೆ ಕನ್ನಡದಲ್ಲಿ ಮಾಡುವ ಆಸೆಯಿದೆ. ಅದಕ್ಕೆ ಕಾಲ ಕೂಡಿಬಂದರೆ ಮತ್ತೆ ಅಂಥ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಿದ್ದ” ಎಂದಿದ್ದಾರೆ.