ಕಾಳಗಿ: ಸುಗೂರ(ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷದ ಅಷ್ಠಮಿ ದಿನದಂದು ರಾತ್ರಿ ದೇವಸ್ಥಾನದ ಪ್ರಧಾನ ಅರ್ಚಕ ಪವನದಾಸ ಮಹಾರಾಜರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಅನ್ನಕೂಟ ಉತ್ಸವ ನಡೆಯಿತು. ಅನ್ನಕೂಟ ಉತ್ಸವದ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳವು ನಡೆದವು. ವೆಂಕಟೇಶ್ವರ ಬೆಳ್ಳಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ 56 ಪ್ರಕಾರದ ವಿವಿಧ ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಅರ್ಚಕ ಪವನದಾಸ ಮಹಾರಾಜ, ವೆಂಕಟೇಶ್ವರನು ಒಂದು ಸಂದರ್ಭದಲ್ಲಿ ಅನ್ನಗ್ರಹಕ್ಕೆ ಆಗಮಿಸಿದಾಗ ಅವರಿಗೆ ದೇವಿ ಅನ್ನಫೂಣೇಶ್ವರಿ ಮೇಲೆ ಪ್ರೇಮವಾಗಿ ಅವರಿಬ್ಬರಿಗೂ ಮದುವೆ ನಡೆಯುತ್ತದೆ.
ಮದುವೆಯಾದ ಕೆಲ ದಿನಗಳ ನಂತರ ವೆಂಕಟೇಶ್ವರ ಸ್ವಾಮಿ ಹಿಂದುರುಗಿ ತಮ್ಮ ಸ್ಥಾನಕ್ಕೆ ಬರುವ ದಿನದಂದು ಪುರದ ಜನರಿಂದ ಸಂಭ್ರಮ ಆಚರಿಸಿ ವೈವಿದ್ಯಮಯವಾದ 56 ಪ್ರಕಾರದ ಆಹಾರ ಪದಾರ್ಥ ತಯಾರಿಸಿ ವೆಂಕಟೇಶ್ವರ ಸ್ವಾಮಿಗೆ ಉಣಿಸಲಾಗಿತ್ತು.
ಇದೇ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ಜಗತ್ತಿನ ಎಲ್ಲ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಇಂದಿಗೂ ಅನ್ನಕೂಟ ಉತ್ಸವದ ಆಚರಣೆ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಬರುವ ಶುಕ್ಲ ಪಕ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಅನ್ನಕೂಟ ಆಚರಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಸುಗೂರ(ಕೆ) ವೆಂಕಟೇಶ್ವರ ದೇವಸ್ಥಾನದಲ್ಲಿ ಆಚರಣೆ ಉತ್ಸವದ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ದೇವಸ್ಥಾನದ ಅರ್ಚಕ ಕೇಶವದಾಸ ಮಹಾರಾಜ, ರಮೇಶ್ವರ ಪಾಟೀಲ, ವಿಶ್ವನಾಥ ವನಮಾಲಿ, ವಿಶ್ವನಾಥ ಕುಡ್ಡಳ್ಳಿ ದಂಪತಿ, ಸಿದ್ದು ಕೇಶ್ವರ, ಬಸವಣಯ್ಯ ಪೂಜಾರಿ, ಜಗಪ್ಪ ಕೊಳ್ಳಿ, ಖೇಮು ರಾಠೊಡ, ಸಂಜು ರಾಠೊಡ, ಮಾಣಿಕರಾವ ಪೊಲೀಸ್ ಪಾಟೀಲ, ಹಣಮಂತ ಉಪ್ಪಿನ, ವೀರೇಶ ಸಿಂಗಶೆಟ್ಟಿ, ಶರಣಯ್ಯ ಸ್ವಾಮಿ, ದತ್ತಾತ್ರೇಯ ಮುಚ್ಚಟ್ಟಿ, ಸೇರಿದಂತೆ ಅನ್ನಕೂಟ ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರು 56 ಪ್ರಕಾರದ ಪ್ರಸಾದ ಸ್ವೀಕರಿಸಿ ಪುನೀತರಾದರು.