Advertisement

ಕಬ್ಬು ಫಸಲು ಕಡಿಮೆ; ಭಾರೀ ಬೇಡಿಕೆ ನಿರೀಕ್ಷೆ

02:42 PM Aug 24, 2022 | Team Udayavani |

ಹೆಮ್ಮಾಡಿ: ಸಕಲ ಸಂಕಷ್ಟಗಳ ನಿವಾರಕ, ಪ್ರಥಮ ಪೂಜಿತ, ವಿಘ್ನವಿನಾಶಕನಾದ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದು, ಈಗಾಗಲೇ ಎಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಚೌತಿ ಆಚರಣೆಯಲ್ಲಿ ಕಬ್ಬಿಗೆ ವಿಶೇಷ ಪ್ರಾಶಸ್ತ್ಯ. ಹೆಮ್ಮಾಡಿಯ ಬುಗುರಿಕಡು ಎಂಬಲ್ಲಿ ಪ್ರತೀ ವರ್ಷ ಚೌತಿ ಚೌತಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಾರೆ. ಆದರೆ ಈ ಬಾರಿ ಫಸಲು ಕಡಿಮೆಯಿದ್ದು, ಬೆಳೆದ ಕಬ್ಬಿಗೆ ಭಾರೀ ಬೇಡಿಕೆ ಬರುವ ನಿರೀಕ್ಷೆ ಬೆಳೆಗಾರರದ್ದಾಗಿದೆ.

Advertisement

ಕಳೆದೆರಡು ವರ್ಷ ಗಳಿಂದ ಕೊರೊನಾ ಕಾರಣದಿಂದ ಗಣೇಶ ಚತುರ್ಥಿ ಹಬ್ಬದ ಅದ್ದೂರಿ ಆಚರಣೆ ಯಿಲ್ಲದ ಕಾರಣ, ಕಬ್ಬು ಬೆಳೆದವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. ಆ ಕಾರಣದಿಂದ ಹೆಮ್ಮಾಡಿ ಗ್ರಾಮದ ಸಂತೋಷನಗರ ಸಮೀಪದ ಬುಗುರಿಕಡು ಎಂಬಲ್ಲಿ ಈ ಬಾರಿ ಕೆಲವರು ಕಬ್ಬು ಬೆಳೆಯುವುದನ್ನೇ ಬಿಟ್ಟಿದ್ದಾರೆ.

ಒಬ್ಬರು ಮಾತ್ರ

ಬುಗುರಿಕಡುವಿನಲ್ಲಿ ಪ್ರತೀ ವರ್ಷ ಗೌರಿ ಹಬ್ಬ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಕೋಡಿ ಹಬ್ಬ ಹೀಗೆ ಹಬ್ಬಗಳಿಗೆಂದೇ ಕಬ್ಬು ಬೆಳೆಯುವ ಸಾಕಷ್ಟು ಮಂದಿ ರೈತರಿದ್ದರು. ಕಳೆದ 7-8 ವರ್ಷಗಳಿಂದ ಕನಿಷ್ಠ 10 ಮಂದಿ ಕಬ್ಬು ಬೆಳೆಗಾರರಿದ್ದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಾಲದಲ್ಲಿ ಇಲ್ಲಿ 15ಕ್ಕೂ ಹೆಚ್ಚು ಮಂದಿ ಕಬ್ಬು ಬೆಳೆಗಾರರಿದ್ದರು. ಕೊರೊನಾ, ನೀರಿನ ಸಮಸ್ಯೆ, ಕೂಲಿ ಕೆಲಸಕ್ಕೆ ಜನ ಸಿಗದಿರುವ ಕಾರಣಗಳಿಂದಾಗಿ ಈ ಬಾರಿ ಇಲ್ಲಿ ಬೆಳೆದಿರುವುದು ಶೀನ ಪೂಜಾರಿ ಅವರು ಮಾತ್ರ. ಇವರು ಕಳೆದ 40 ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದು, ಈ ಬಾರಿಯೂ 1 ಎಕರೆ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ. ಇವರು ಕೂಡ ಹಿಂದಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಳೆದಿದ್ದು, ಗಂಗೊಳ್ಳಿ, ಕುಂದಾಪುರ, ಬೈಂದೂರು, ಹೆಮ್ಮಾಡಿ ಸಹಿತ ಆಸುಪಾಸಿನ ಊರುಗಳಿಂದ ಈಗಾಗಲೇ ಬೇಡಿಕೆ ಬಂದಿದೆ.

ಕರಾವಳಿಯಲ್ಲಿ ಕಡಿಮೆ

Advertisement

ಸಾಮಾನ್ಯವಾಗಿ ಕಬ್ಬು ಬೆಳೆಯಲು ಆರಂಭಿಸುವುದು ಫೆಬ್ರವರಿಯಲ್ಲಿ. ಆಗ ನೆಟ್ಟು, ಆ ಬಳಿಕ ಆಗಸ್ಟ್‌ನಿಂದ ಕಟಾವು ಆರಂಭವಾಗುತ್ತದೆ. ಮೊದಲ 3-4 ತಿಂಗಳು ಕಬ್ಬು ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ಕರಾವಳಿ ಭಾಗದಲ್ಲಿ ಮಾರ್ಚ್‌, ಎಪ್ರಿಲ್‌, ಮೇಯಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ ಕಷ್ಟವಾಗುತ್ತದೆ. ಆ ಕಾರಣಕ್ಕೆ ಇಲ್ಲೆಲ್ಲ ಕಬ್ಬು ಬೆಳೆಯುವುದು ಕಡಿಮೆ. ಇದಲ್ಲದೆ ಕಳೆದೆರಡು ವರ್ಷಗಳಿಂದ ಕಬ್ಬು ಫಸಲು ಬಂದಿದ್ದರೂ, ಅಷ್ಟೊಂದು ಬೇಡಿಕೆ ಇರಲಿಲ್ಲ. ಈ ಬಾರಿಯು ಅದೇ ರೀತಿಯಾದರೆ ನಷ್ಟವೇ ಹೆಚ್ಚು ಎಂದು, ಬಹುತೇಕ ರೈತರು ಕಬ್ಬು ಬೆಳೆಗೆ ಮುಂದಾಗಿಲ್ಲ.

ಬೇಡಿಕೆ ಹೆಚ್ಚಿದೆ… ಈ ಬಾರಿ ಕಳೆದ ಬಾರಿಗಿಂತ ಸ್ವಲ್ಪ ಕಡಿಮೆ ಬೆಳೆದಿದ್ದೇನೆ. ಈ ಸಲ ಉತ್ತಮ ವಾತಾವರಣ ಇದ್ದುದದರಿಂದ ಫಸಲು ಉತ್ತಮ ಬಂದಿದೆ. ಈ ಬಾರಿ ರೋಗಭಾದೆ ಅಷ್ಟೊಂದು ಇರಲಿಲ್ಲ. ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚು ಬೇಡಿಕೆ ನಿರೀಕ್ಷೆಯಿದೆ. ಈಗಾಗಲೇ ಹಲವೆಡೆಗಳಿಂದ ಬೇಡಿಕೆ ಬಂದಿದೆ. ಇನ್ನೀಗ ಕಟಾವು ಆರಂಭಿಸಬೇಕು. – ಶೀನ ಪೂಜಾರಿ ಬುಗುರಿಕಡು, ಕಬ್ಬು ಬೆಳೆಗಾರರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next