Advertisement

ರೈತರ ಅಹೋರಾತ್ರಿ ಧರಣಿ ಶುರು

06:10 AM Dec 09, 2018 | |

ಬೆಳಗಾವಿ: ಡಿ.ಕೆ.ಶಿವಕುಮಾರ್‌ ಮಧ್ಯಸ್ಥಿಕೆ ವಹಿಸಿ ತಾತ್ಕಾಲಿಕವಾಗಿ ಶಮನಗೊಳಿಸಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತೆ ಶುರುವಾಗಿದೆ. ಕಬ್ಬಿನ ಬಾಕಿ ಹಣ ಪಾವತಿ ಹಾಗೂ ಪ್ರಸಕ್ತ ಹಂಗಾಮಿನಲ್ಲಿ ದರ ನಿಗದಿ ಮಾಡುವಂತೆ ಒತ್ತಾಯಿಸಿ ವಿವಿಧ ರೈತ ಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿವೆ.

Advertisement

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಗಳ ನೇತೃತ್ವದಲ್ಲಿ ಈ ಧರಣಿ ಆರಂಭವಾಗಿದೆ. ಸರ್ಕಾರದಿಂದ ಸ್ಪಷ್ಟ ಆದೇಶ ಹೊರ ಬೀಳುವವರೆಗೆ ಹಿಂದೆ ಸರಿಯಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಿಂದ ಬಂದಿದ್ದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಭಜನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸರ್ಕಾರ ರೈತರ ಬಗ್ಗೆ ತಳೆದಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿ ಅಹೋರಾತ್ರಿ ಧರಣಿ ಮಾಡಿದಾಗ ಸಚಿವ ಡಿ.ಕೆ.ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ಅಧಿವೇಶನಕ್ಕೆ ಮುನ್ನ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು. ಅವರ ಮಾತಿನಂತೆ ಹೋರಾಟ ಕೈಬಿಡಲಾಗಿತ್ತು. ಆದರೆ, ಅಧಿವೇಶನ ಬಂದರೂ ಇದುವರೆಗೆ ಸರ್ಕಾರದಿಂದ ಯಾವುದೇ ಆದೇಶ ಹೊರ ಬಿದ್ದಿಲ್ಲ. ರೈತರ ಬಾಕಿ ಹಣ ಪಾವತಿಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರಾಘವೇಂದ್ರ ನಾಯಕ, ಚೂನಪ್ಪ ಪೂಜೇರಿ ಸೇರಿದಂತೆ ಹಲವರು ಧರಣಿಗೆ ಸಾಥ್‌ ನೀಡಿದ್ದಾರೆ.

ಸಿಎಂಗೆ ಬೈದಿದ್ದ ಜಯಶ್ರೀಗೆ ಕಣ್ಣೀರು:
ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿರುವ ರೈತ ಮಹಿಳೆ ಜಯಶ್ರೀ ಗುರನ್ನವರ ಮತ್ತೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಅನಾಮಧೇಯ ವ್ಯಕ್ತಿಯೊಬ್ಬರು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪತ್ರ ಬರೆದಿದ್ದಾರೆಂದು ಕಣ್ಣೀರು ಹಾಕಿದ ಜಯಶ್ರೀ, ಪತ್ರವನ್ನು ಎಲ್ಲರ ಎದುರು ತೋರಿಸಿದರು. ಕಳೆದ ಹೋರಾಟದ ಸಮಯದಲ್ಲಿ ತಾವು ಮುಖ್ಯಮಂತ್ರಿಗೆ ನಿಂದಿಸಿದ್ದರ ಬಗ್ಗೆ ಟೀಕಿಸಿರುವ ಅನಾಮಧೇಯ ವ್ಯಕ್ತಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನೋವು ಉಂಟು ಮಾಡಿದ್ದಾನೆಂದು ಕಣ್ಣೀರು ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next