Advertisement

ಸಿದ್ದರಾಮಯ್ಯ, ಮಹದೇವಪ್ಪ ವಿರುದ್ಧ ಕಬ್ಬು ಬೆಳಗಾರರ ಆಕ್ರೋಶ

12:39 PM Apr 29, 2018 | Team Udayavani |

ಮೈಸೂರು: ರೈತವಿರೋಧಿ ನಿಲುವುಗಳನ್ನು ಕೈಗೊಳ್ಳುವ ಮೂಲಕ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ನಗರದ ಗನ್‌ಹೌಸ್‌ ಸಮೀಪದ ವಿಶ್ವಮಾನವ ಉದ್ಯಾನವನದಲ್ಲಿ ಶನಿವಾರ ನಡೆದ ಕಬ್ಬು ಬೆಳೆಗಾರರ ಸಂಘದ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯದಲ್ಲಿ 5 ವರ್ಷಗಳ ಆಡಳಿತ ನಡೆಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ರೈತವಿರೋಧಿ ನಿಲುವುಗಳನ್ನು ಕೈಗೊಂಡು ರೈತರನ್ನು ಭಿಕಾರಿಗಳಾಗುವಂತೆ ಮಾಡಿದ್ದಾರೆ.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕಬಿನಿ-ಕಾವೇರಿ ಜಲಾಶಯಗಳು ಭರ್ತಿಯಾಗಿದ್ದರೂ ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ಹರಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಲಾಯಿತು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ಕಬ್ಬಿಗೆ ನ್ಯಾಯಯುತ ಬೆಲೆನಿಗದಿ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ. ರೈತರ ಮೇಲಿನ ಹೋರಾಟದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಹುಸಿ ಭರವಸೆಯನ್ನು ನೀಡಿದ್ದಾರೆ. ಈ ಎಲ್ಲಾ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸಿದ್ದರಾಮಯ್ಯ ಹಾಗೂ ಎಚ್‌.ಸಿ.ಮಹದೇವಪ್ಪರನ್ನು ಸೋಲಿಸಲು ರೈತರು ಸ್ವಾಭಿಮಾನದಿಂದ ಪಣ ತೊಡಬೇಕೆಂದು ತೀರ್ಮಾನಿಸಿದರು.

ರೈತರ ಜಾಗೃತಿ ಜಾಥಾ: ಸಭೆಯಲ್ಲಿ ತೀರ್ಮಾನಿಸಿದಂತೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರನ್ನು ಸೋಲಿಸುವ ಉದ್ದೇಶದಿಂದ ಮೇ 3 ಮತ್ತು 4ರಂದು ಚಾಮುಂಡೇಶ್ವರಿ ಹಾಗೂ ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬೈಕ್‌ ರ್ಯಾಲಿ ನಡೆಸುವ ಮೂಲಕ ರೈತರನ್ನು ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಅಲ್ಲದೇ, ರೈತರ ಅನುಕೂಲಕ್ಕಾಗಿ ರೂಪಿಸಿರುವ 15 ಅಂಶಗಳ ರೈತರ ಪ್ರಣಾಳಿಕೆಯನ್ನು ಒಪ್ಪಿಕೊಳ್ಳುವ ಅಭ್ಯರ್ಥಿಗೆ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಲಾಯಿತು.

Advertisement

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಉಪಾಧ್ಯಕ್ಷ ಕೂಡನಹಳ್ಳಿ ರಾಜಣ್ಣ, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್‌, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಜಿಟಿಡಿ ಭೇಟಿ, ಎಚ್‌ಡಿಕೆ ಭರವಸೆ: ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸಭೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಮತಯಾಚನೆ ಮಾಡಿದರು.

ರೈತರ ಅನುಕೂಲಕ್ಕಾಗಿ ರೂಪಿಸಿರುವ ಪ್ರಣಾಳಿಕೆಯನ್ನು ಒಪ್ಪುವ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸಭೆಯಲ್ಲಿದ್ದ ರೈತರು ಜಿ.ಟಿ.ದೇವೇಗೌಡರಿಗೆ ತಿಳಿಸಿದರು. ಸಭೆಯ ನಡುವೆಯೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌, ತಮ್ಮ ನಿಲುವು ತಿಳಿಸಿದರು.

ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡ, ತಮ್ಮದು ರೈತಪರ ಪಕ್ಷವಾಗಿದ್ದು, ನಿಮ್ಮ ಪ್ರಣಾಳಿಕೆಯೇ ನಮ್ಮ ಪ್ರಣಾಳಿಕೆಯಾಗಿದೆ. ಅಲ್ಲದೇ ಕುಮಾರಸ್ವಾಮಿ ಅವರು ಪ್ರಣಾಳಿಕೆಯನ್ನು ಒಪ್ಪಿದ್ದು, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಹೀಗಾಗಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next