Advertisement
ಹೌದು. ಭತ್ತ, ಜೋಳ, ಗೋಧಿಯಂತಹ ಪ್ರಧಾನ ಆಹಾರ ಬೆಳೆಗಳು ಹಾಗೂ ಹೆಸರು, ಕಡಲೆ ಸೇರಿದಂತೆ 12ಕ್ಕೂ ಅಧಿಕ ದ್ವಿದಳ ಧಾನ್ಯ ಬೆಳೆಯುತ್ತಿದ್ದ ಜಿಲ್ಲೆಯ ರೈತರೀಗ ಕಬ್ಬು ಬೆಳೆ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಪ್ರಮಾಣ ಕಳೆದ ಎರಡು ವರ್ಷದಲ್ಲಿ ಶೇ.30 ಹೆಚ್ಚಾಗಿದೆ. ರೈತರ ಹೊಲಗಳ ತುಂಬಾ ಏಕಪ್ರಬೇಧದ ಬೆಳೆ ಕಬ್ಬು ಅತಿಕ್ರಮಿಸಿಕೊಂಡಿದ್ದು ಬೇರೆ ಯಾವ ಬೆಳೆಯೂ ಕಾಣಸಿಗದಂತಾಗಿದೆ.
Related Articles
Advertisement
ಕಲಘಟಗಿ ತಾಲೂಕಿನ 91 ಸಾವಿರ ಎಕರೆ ಪ್ರದೇಶ ಕಬ್ಬು ಬೆಳೆ ಆವರಿಸಿದ್ದರೆ, ಧಾರವಾಡ ತಾಲೂಕಿನ 76 ಸಾವಿರ ಎಕರೆ, ಅಳ್ನಾವರ ತಾಲೂಕಿನ 25 ಸಾವಿರ ಎಕರೆ, ಹುಬ್ಬಳ್ಳಿ ತಾಲೂಕಿನ 1000 ಎಕರೆ ಪ್ರದೇಶದಲ್ಲಿ ಕಬ್ಬಿದೆ. ಇನ್ನು ಕಬ್ಬು ಬೆಳೆ ಆಕ್ರಮಿಸುತ್ತಿರುವ ಭೂಮಿ ಹೊರತು ಪಡಿಸಿದರೆ ಮುಂಗಾರಿನಲ್ಲಿ ಬರೀ ಗೋವಿನಜೋಳ ಮತ್ತು ಸೋಯಾ ಅವರೆ ಬಿತ್ತನೆ ಪ್ರಮಾಣ ಅತ್ಯಧಿಕವಾಗುತ್ತಿದೆ.
ಕಬ್ಬಿಗೆ ವರವಾದ ನೆರೆ: ಕಳೆದ ವರ್ಷದ ನೆರೆಹಾವಳಿಯಿಂದ ಜಿಲ್ಲೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಕೊಳವೆ ಬಾವಿಗಳು ಇದೀಗ ಉತ್ತಮ ಸ್ಥಿತಿಯಲ್ಲೇ ಇದ್ದು, ಕೆರೆ, ಕುಂಟೆಗಳಲ್ಲಿ ನೀರು ನಿಂತಿದೆ. ರೈತರು ಇದೇ ನೀರಿನ ಆಸರೆಯನ್ನಾಗಿಟ್ಟುಕೊಂಡು ಕಳೆದ ವರ್ಷಕ್ಕಿಂತ ಹೆಚ್ಚಿನ ಭೂಮಿಗೆ ನೀರು ಹಾಯಿಸಿ ಇದೀಗ ಮತ್ತಷ್ಟು ಕಬ್ಬು ಬೆಳೆಯು ತ್ತಿದ್ದಾರೆ. ಕಳೆದ ವರ್ಷ ಕೊರೆಸಿದ್ದರೂನೀರು ಬರದೇ ಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿರುವುದೇ ಕಬ್ಬಿನ ಮೋಹಕ್ಕೆ ಮತ್ತಷ್ಟು ರೈತರು ಇಳಿಯುವಂತೆ ಮಾಡಿದೆ.
ಕಾರ್ಖಾನೆ ಅಭಯವಿಲ್ಲ: ಇನ್ನೊಂದೆಡೆ ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಎಲ್ಲಾ ಕಬ್ಬನ್ನು ಖರೀದಿಸುತ್ತಿದ್ದ ಹಳಿಯಾಳದ ಪ್ಯಾರಿ ಶುಗರ್ ಕಂಪನಿ ಕಳೆದ ವರ್ಷವೇ ನೇರವಾಗಿ ಕರಾರು ಒಪ್ಪಂದದ ಕಬ್ಬು ಖರೀದಿಯನ್ನು ಸ್ಥಗಿತಗೊಳಿಸಿದೆ. ಅಂದರೆ ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಿ, ನಂತರ ಕಟಾವು ಮಾಡಿಸಿಕೊಂಡು ಕಾರ್ಖಾನೆಗೆ ಪಡೆಯುತ್ತಿದ್ದ ಒಪ್ಪಂದಗಳು ಮುರಿದು ಬಿದ್ದಿವೆ. ಇದೀಗ ನೇರವಾಗಿ ರೈತರು ತಮಗೆ ತಿಳಿದ ಕಾರ್ಖಾನೆಗೆ ಕಬ್ಬು ಕಳುಹಿಸಬಹುದಾಗಿದೆ.
2019ರಲ್ಲಿ ಜಿಲ್ಲೆಯಲ್ಲಿ ಬೆಳೆದ 2.5 ಲಕ್ಷ ಟನ್‌ಗಳಷ್ಟು ಕಬ್ಬನ್ನು ಬೆಳಗಾವಿ ಜಿಲ್ಲೆಯ ಕಬ್ಬು ಕಾರ್ಖಾನೆಗಳು ಕೊಂಡುಕೊಂಡಿವೆ. 2020ರ ಕಬ್ಬನ್ನು ಅವು ಕೊಳ್ಳುತ್ತವೆ ಎನ್ನುವ ಧೈರ್ಯದ ಮೇಲೆ ರೈತರು ಬೇಕಾಬಿಟ್ಟಿಯಾಗಿ ಕಬ್ಬು ಬೆಳೆಯುತ್ತಿದ್ದು, ಒಂದು ಬೇಳೆ ಆ ಕಾರ್ಖಾನೆಗಳು ಕಬ್ಬನ್ನು ತಿರಸ್ಕರಿಸಿದರೆ ಜಿಲ್ಲೆಯ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ.
ಭತ್ತಕ್ಕೆ ಉತ್ತಮ ಬೆಲೆ ಇಲ್ಲದಿರುವುದಕ್ಕೆ ಕಬ್ಬು ಬೆಳೆಯುತ್ತಿದ್ದೇವೆ. ಈ ವರ್ಷ ನನ್ನ ಹೊಲದಲ್ಲಿ ಕಬ್ಬಿನ ಬೆಳೆ ದ್ವಿಗುಣಗೊಂಡಿದೆ. ಕಳೆದ ವರ್ಷ ಕಷ್ಟಪಟ್ಟು ಕಬ್ಬು ಕಳೆಸಿದೆವು. ಮುಂದಿನ ವರ್ಷವೂ ಹಾಗೆ ಮಾಡುವುದು ಇದ್ದೇ ಇದೆ.-ಬಸನಗೌಡ ಪಾಟೀಲ, ದಾಸ್ತಿಕೊಪ್ಪ ರೈತ
-ಬಸವರಾಜ ಹೊಂಗಲ್