ರಾಣಿಬೆನ್ನೂರ: ಹನುಮನಮಟ್ಟಿ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಕಬ್ಬಿನ ಬೆಳೆಯ ತಾಕಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.
ಈ ವೇಳೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಕಬ್ಬಿನ ಬೆಳೆಯು ಲಘು ಪೋಷಕಾಂಶವಾದಕಬ್ಬಿಣದ ಕೊರತೆಯಿಂದಾಗಿದ್ದು, ಇದಕ್ಕೆ ರೈತರು ಕೇದಿಗೆ ರೋಗ, ಹಳದಿ ರೋಗ ಎಂದುಕರೆಯುತ್ತಾರೆ. ಲಘು ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಬ್ಬು ಬಿಳುಚಿಕೊಳ್ಳುವುದು ಇತ್ತೀಚಿನದಿನಗಳಲ್ಲಿ ಪ್ರಮುಖವಾದ ಸಮಸ್ಯೆಯಾಗಿದೆ.ಪ್ರಥಮ ಹಂತದಲ್ಲಿ ಕೊರತೆಯೂ ಇದ್ದರುಸಹ ಬೆಳೆ ಅದನ್ನು ತೋರ್ಪಡಿಸುವುದಿಲ್ಲ. ಈಲಕ್ಷಣವನ್ನು ಹಿಡನ್ ಹಂಗರ್ ಎಂದು ಕರೆಯಲಾಗುತ್ತದೆ ಎಂದರು.
ಇದಕ್ಕೆ ಮುಖ್ಯಕಾರಣಗಳೆಂದರೆ ಕೊಟ್ಟಿಗೆ ಗೊಬ್ಬರಗಳ ಬಳಕೆಯ ಪ್ರಮಾಣ ಕಡಿಮೆ ಆಗಿರುವುದು, ಲಘು ಪೋಷಕಾಂಶಗಳ ಬಳಕೆ ಇಲ್ಲದಿರುವುದು, ಕಬ್ಬಿನ ನಂತರ ಕಬ್ಬು ಬೆಳೆ ಯೋಜನೆ, ಭೂಮಿಯಲ್ಲಿ ಲವಣಾಂಶ/ ಸವಳು ಹೆಚ್ಚಾಗಿರುವುದು, ಜವಳು ಮತ್ತು ಕ್ಷಾರ ಭೂಮಿಯಲ್ಲಿ ಕಬ್ಬಿಣದ ಅಂಶ ಬೆಳೆಗೆ ಲಭ್ಯವಾಗಲಾರದೆ ಕೊರತೆ ಹೆಚ್ಚು, ಕ್ಯಾಲ್ಸಿಯಂ ಹೆಚ್ಚಾಗಿರುವ ಎರೆ ಭೂಮಿಯಲ್ಲಿ ಕಬ್ಬಿಣದ ಅಂಶ ಬೆಳೆಗೆ ಲಭ್ಯವಾಗಲಾರದೆ ಕೊರತೆ ಉಂಟಾಗುವುದು ಮತ್ತು ಮರಳು/ಗರಸು/ಮಡ್ಡಿ ಜಮೀನಿನಲ್ಲಿ ಲಘು ಪೋಷಕಾಂಶಗಳ ಲಭ್ಯತೆ ಕಡಿಮೆಯಾಗಿ ಫಲವತ್ತತೆಕಡಿಮೆ ಇರುವುದರಿಂದ ಬಿಳಿಚಿನ ಲಕ್ಷಣ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಕಬ್ಬಿಣದ ಕೊರತೆಯನ್ನು ನಿವಾರಿಸಲು ಕಬ್ಬನ್ನು ನಾಟಿ ಮಾಡುವಾಗ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಭೂಮಿಗೆ ಹಾಕಬೇಕು. ಶಿಫಾರಸ್ಸು ಮಾಡಿದ ರಾಸಾಯನಿಕಗೊಬ್ಬರದೊಡನೆ ನಾಟಿ ಮಾಡುವಾಗ 10 ಕೆ.ಜಿಕಬ್ಬಿಣದ ಸಲ್ಪೇಟ ಅನ್ನು ಸುಮಾರು 50 ಕೆ.ಜಿ.ಎರೆಹುಳು ಗೊಬ್ಬರದೊಡನೆ ಬೆರೆಸಿ, ನೀರುಚಿಮುಕಿಸಿ ಒಂದು ರಾತ್ರಿ ಇಟ್ಟು ಮರುದಿನ ಕಬ್ಬು ಹಚ್ಚುವ ಸಾಲುಗಳಲ್ಲಿ ಭೂಮಿಗೆ ಸೇರಿಸಬೇಕು. ಇದರಿಂದ ಮಣ್ಣಿನ ಫಲವತ್ತತೆ ವೃದ್ಧಿಯಾಗುವುದು ಎಂದರು.
ವಿಜ್ಞಾನಿಗಳಾದ ಡಾ| ರಾಜಕುಮಾರ ಜಿ.ಆರ್. ಮತ್ತು ಡಾ|ಶಾಂತವೀರಯ್ಯ ಅವರು ರೈತರಿಗೆ ಸೂಕ್ತ ಮಾಹಿತಿ ನೀಡಿದರು.